ಸರ್ದಾರ್ ಪಟೇಲ್ ಏಕತಾ ಪ್ರತಿಮೆ ಬಳಿಯ 300 ಮೊಸಳೆಗಳ ಸ್ಥಳಾಂತರ: ಯಾಕೆ..?
ಸರ್ದಾರ್ ಪಟೇಲ್ ಅವರ ಪ್ರತಿಮೆ ಬಳಿಯಿರುವ ನರ್ಮದಾ ನದಿಯಲ್ಲಿ ಸೀ ಪ್ಲೇನ್ ವ್ಯವಸ್ಥೆ ಕಲ್ಪಿಸಲು ಇಲ್ಲಿರುವ 300ಕ್ಕೂ ಅಧಿಕ ಮೊಸಳೆಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.
ಅಹಮದಾಬಾದ್ : ಸರ್ದಾರ್ ವಲ್ಲಭಾಯ್ ಪಟೇಲ್ ಅವರ 182 ಮೀಟರ್ ಎತ್ತರ ಪ್ರತಿಮೆ ಬಳಿಯಿಂದ 300 ಮೊಸಳೆಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಪ್ರತಿಮೆಯ ಬಳಿಯ ನರ್ಮದಾ ನದಿಯಲ್ಲಿ ಸೀ ಪ್ಲೇನ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಇಲ್ಲಿನ ಅರಣ್ಯ ಇಲಾಖೆ ಇಲ್ಲಿಂದ ಮೊಸಳೆಗಳನ್ನು ಸ್ಥಳಾಂತರ ಮಾಡಲು ಅನುಮತಿಯನ್ನು ನೀಡಿದೆ. ಉಕ್ಕಿನ ಪಂಜರಗಳನ್ನು ನಿರ್ಮಿಸಿ ಅದರ ಮೂಲಕ ಮೊಸಳೆಗಳನ್ನು ಪ್ರತಿಮೆ ಬಳಿಯಿಂದ ಸ್ಥಳಾಂತರ ಮಾಡಲಾಗುತ್ತಿದೆ.
ಸ್ಟಾಚ್ಯು ಆಫ್ ಯುನಿಟಿ ವೀಕ್ಷಣೆಗೆ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ನಿಟ್ಟಿನಲ್ಲಿ ಮೊಸಳಗೆಳನ್ನು ಇಲ್ಲಿಂದ ಸ್ಥಳಾಂತರ ಮಾಡುವುದು ಅನಿವಾರ್ಯವಾಗಿದ್ದು, ರಾಜ್ಯ ಸರ್ಕಾರದ ಆದೇಶ ಮೇರೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಥಳೀಯ ಅರಣ್ಯಾಧಿಕಾರಿ ಅನುರಾಧಾ ಸಾಹು ಹೇಳಿದ್ದಾರೆ.
ಆದರೆ ಸ್ಥಳದಿಂದ ಮೊಸಳೆಗಳನ್ನು ಸ್ಥಳಾಂತರ ಮಾಡುವ ಸಂಬಂಧ ಅನೇಕ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇಂತಹ ಕ್ರಮ ಕೈಗೊಂಡು ವಾಸದ ಪ್ರದೇಶದಿಂದ ಬೇರೆ ಪ್ರದೇಶಕ್ಕೆ ಮೊಸಳೆಗಳನ್ನು ಸ್ಥಳಾಂತರ ಮಾಡುತ್ತಿದ್ದಾರೆ. ಇದು ಎಷ್ಟ ಮಟ್ಟಿಗೆ ಸರಿಯಾದ ಕ್ರಮ ಎಂದು ಪ್ರಶ್ನೆ ಮಾಡಿದ್ದಾರೆ.
ರಾಜ್ಯ ವೈಲ್ಡ್ ಲೈಫ್ ಬೋರ್ಡ್ ಸದಸ್ಯರಾದ ಪ್ರಿಯಾವ್ರತ್ ಗಡ್ವಿ ಸ್ಥಳಾಂತರ ಮಾಡಲು ಸಂಪೂರ್ಣ ವೈಜ್ಞಾನಿಕ ಕ್ರಮಗಳನ್ನೇ ಅನುಸರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೆಚ್ಚಿನ ಯೋಜನೆಯಾದ ಪಟೇಲ್ ಪ್ರತಿಮೆಯನ್ನು ಕಳೆದ ಅಕ್ಟೋಬರ್ ತಿಂಗಳಲ್ಲಿ ಅನಾವರಣ ಮಾಡಿದ್ದರು.