ಸಂಚಾರ ಸಾಥಿ ಆ್ಯಪ್ ಮೊಬೈಲ್‌ನಲ್ಲಿ ಪ್ರಿ ಇನ್ಟಾಲ್ ಕಡ್ಡಾಯವಲ್ಲ, ವಿವಾದ ಬಳಿಕ ಕೇಂದ್ರದ ಯೂಟರ್ನ್ ಹೊಡೆದಿದೆ. ಸರ್ಕಾರದ ಸಂಚಾರಿ ಸಾಥಿ ಆ್ಯಪ್ ಫೋನ್ ಕದ್ದಾಲಿಕೆ, ಡೇಟಾ ಸೋರಿಕೆ ಮಾಡುತ್ತಿದೆ ಎಂದು ವಿಪಕ್ಷಗಳು ಆರೋಪಿಸಿತ್ತು.

ನವದೆಹಲಿ (ಡಿ.03) ಭಾರತೀಯ ನಾಗರೀಕರಿಗೆ ನೆರವಾಗಲು ಕೇಂದ್ರ ಸರ್ಕಾರ ದೂರಸಂಪರ್ಕ ಸಚಿವಾಲಯ ಸಂಚಾರ ಸಾಥಿ ಆ್ಯಪ್ ಕಡ್ಡಾಯಗೊಳಿಸಿತ್ತು. ಎಲ್ಲಾ ಮೊಬೈಲ್ ಉತ್ಪಾದಕರು ಭರಾತದಲ್ಲಿ ಮಾರಾಟ ಮಾಡುವ ಮೊಬೈಲ್‌ನಲ್ಲಿ ಸಂಚಾರ ಸಾಥಿ ಆ್ಯಪ್ ಪ್ರೀ ಇನ್‌ಸ್ಟಾಲ್ ಮಾಡಿರಬೇಕು ಎಂದು ಆದೇಶ ನೀಡಿತ್ತು. ಆದರೆ ವಿಪಕ್ಷಗಳು ತೀವ್ರ ಗದ್ದಲ, ಗಂಭೀರ ಆರೋಪಗಳಿಂದ ಇದೀಗ ಕೇಂದ್ರ ಸರ್ಕಾರ ಸಂಚಾರ ಸಾಥಿ ಆ್ಯಪ್ ಕುರಿತು ಯೂಟರ್ನ್ ಹೊಡೆದಿದೆ. ಮೊಬೈಲ್‌ನಲ್ಲಿ ಪ್ರಿ ಇನ್‌ಸ್ಟಾಲ್ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದೆ.

ಫೋನ್ ಕದ್ದಾಲಿಕೆ ಆರೋಪ

ಸಂಚಾರಿ ಸಾಥಿ ಆ್ಯಪ್ ಸುರಕ್ಷಿತವಲ್ಲ. ಇದು ಫೋನ್ ಕದ್ದಾಲಿಕೆ, ಡೇಟಾ ಲೀಕ್ ಮಾಡುತ್ತಿದೆ. ಇದನ್ನು ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಎಲ್ಲಾ ಮೊಬೈಲ್‌ನಲ್ಲಿ ಕಡ್ಡಾಯ ಮಾಡಿದೆ ಎಂದು ಲೋಕಸಭೆಯಲ್ಲಿ ವಿಪಕ್ಷಗಳು ಗಂಭೀರ ಆರೋಪ ಮಾಡಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಸಂಚಾರ ಸಾಥಿ ಆ್ಯಪ್ ಮೊಬೈಲ್‌ನಲ್ಲಿ ಪ್ರಿ ಇನ್‌ಸ್ಟಾಲ್ ಕಡ್ಡಾಯವಲ್ಲ ಎಂದಿದೆ.

ಲೋಕಸಭೆಯಲ್ಲಿ ಸ್ಪಷ್ಟನೆ ಕೊಟ್ಟ ಸಚಿವ

ಸಂಚಾರ ಸಾಥಿ ಆ್ಯಪ್ ಕುರಿತು ಗಂಭೀರ ಆರೋಪಗಳು ಕೇಳಿಬಂದ ಬೆನ್ನಲ್ಲೇ ಲೋಕಸಭೆಯಲ್ಲಿ ಕೇಂದ್ರ ದೂರಸಂಪರ್ಕ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಸ್ಪಷ್ಟನೆ ಕೊಟ್ಟಿದ್ದಾರೆ. ನಾಗರೀಕರ ಸುರಕ್ಷತೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಂಚಾರ ಸಾಥಿ ಆ್ಯಪ್ ಹೆಚ್ಚು ಸುರಕ್ಷಿತವಾಗಿದೆ. ಈ ಆ್ಯಪನ್ನು ನಾಗರೀಕರ ಅನುಕೂಲಕ್ಕಾಗಿ ಅಭಿವೃದ್ಧಿ ಮಾಡಲಾಗಿದೆ. ಈ ಆ್ಯಪ್ ಬಳಕೆದಾರರ ಯಾವುದೇ ಡೇಟಾ ಲೀಕ್ ಮಾಡುವುದಿಲ್ಲ, ಬಳಕೆದಾರರ ಫೋನ್ ಕದ್ದಾಲಿಕೆ ಮಾಡುವುದಿಲ್ಲ ಎಂದು ಜ್ಯೋತಿರಾಧಿತ್ಯ ಸಿಂಧಿಯಾ ಸ್ಪಷ್ಟಪಡಿಸಿದ್ದಾರೆ.

ಎಲ್ಲಾ ನಾಗರಿಕರಿಗೆ ಸೈಬರ್ ಭದ್ರತೆ ಒದಗಿಸುವ ಉದ್ದೇಶದಿಂದ ಸರ್ಕಾರವು ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಸಂಚಾರ್ ಸಾಥಿ ಆ್ಯಪ್‌ ಅಳವಡಿಕೆ ಕಡ್ಡಾಯಗೊಳಿಸಿತ್ತು. ಈ ಆ್ಯಪ್ ಸುರಕ್ಷಿತವಾಗಿದೆ ಮತ್ತು ಸೈಬರ್ ಜಗತ್ತಿನ ದುಷ್ಟ ಶಕ್ತಿಗಳಿಂದ ನಾಗರಿಕರಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಜ್ಯೋತಿರಾಧಿತ್ಯ ಸಿಂಧಿಯಾ ಹೇಳಿದ್ದಾರೆ.

ಲೋಕಸಭೆ ಹೊರಗೆ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಗಂಭೀರ ಆರೋಪ ಮಾಡಿದ್ದಾರೆ ಸಂಚಾರ ಸಾಥಿ ಆ್ಯಪ್ ಹಾಗೂ ಪೆಗಾಸಿಸ್ ಸ್ಪೈವೇರ್ ಲಿಂಕ್ ಮಾಡಿದ್ದಾರೆ. ಪೆಗಾಸಿಸ್ ಆ್ಯಪ್ ಕುರಿತು ಹೋರಾಟ ಮಾಡಿದ್ದೇವೆ. ಇದು ಕೇಂದ್ರ ಸರ್ಕಾರ ವಿದೇಶಿ ಶಕ್ತಿಗಳ ಜೊತೆ ಕೈಜೋಡಿಸಿ ತಂದಿದ್ದ ಸ್ಪೈವೇರ್ ಆಗಿದೆ. ಭಾರಿ ವಿರೋಧದ ಬಳಿಕ ಕೇಂದ್ರ ಸರ್ಕಾರ ಪೆಗಾಸಿಸ್‌ನಿಂದ ಹಿಂದೆ ಸರಿದಿತ್ತು. ಇದೀಗ ವ್ಯವಸ್ಥಿತವಾಗಿ ಅದೆ ಪೆಗಾಸಿಸ್ ಸ್ಪೈವೇರ್‌ನ್ನು ಮರುನಾಮಕರಣ ಮಾಡಲಾಗಿದೆ. ಇದೀಗ ಪೆಗಾಸಿಸ್ ಸ್ಪೈವೇರ್ ಸಂಚಾರ ಸಾಥಿ ಆ್ಯಪ್ ಆಗಿ ಮರಳಿ ಬಂದಿದೆ ಎಂದು ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.