ಮೋದಿ ಚಾಯ್‌ವಾಲಾ ಎಐ ವಿಡಿಯೋ ಪೋಸ್ಟ್ ಮಾಡಿ ಪ್ರಧಾನಿ ಅವಮಾನಿಸಿದ ಕಾಂಗ್ರೆಸ್, ಬಿಜೆಪಿ ಗರಂ, ಅಂತರಾಷ್ಟ್ರೀಯ ವೇದಿಕೆಯಲ್ಲಿ ಮೋದಿ ಚಾಯ್ ಚಾಯ್ ಎಂದು ಚಹಾ ಮಾರುತ್ತಿರುವ ವಿಡಿಯೋ ಇದಾಗಿದೆ. ಈ ವಿಡಿಯೋವನ್ನು ಕಾಂಗ್ರೆಸ್ ವಕ್ತಾರೆ ಪೋಸ್ಟ್ ಮಾಡಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.
ನವದೆಹಲಿ (ಡಿ.03) ಪ್ರಧಾನಿ ನರೇಂದ್ರ ಮೋದಿ ಮೊದಲ ಭಾರಿಗ ಪ್ರಧಾನಿ ಅಭ್ಯರ್ಥಿಯಾದಾಗ ಚಾಯ್ ವಾಲಾ ಎಂದು ಕೈಸುಟ್ಟಿಕೊಂಡಿರುವ ಕಾಂಗ್ರೆಸ್ ಬಳಿಕ ಹಲವು ಬಾರಿ ಮೋದಿ ಅಣಕಿಸಿದೆ. ಇದೀಗ ಮತ್ತೆ ಚಾಯ್ ವಾಲಾ ಮೋದಿ ಎಂದು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ವಿಡಿಯೋ ಪೋಸ್ಟ್ ಮಾಡಿರುವ ಕಾಂಗ್ರೆಸ್, ಪ್ರಧಾನಿ ಮೋದಿಯನ್ನು ಅವಮಾನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚಹಾ ಮಾರುತ್ತಿರುವ ಎಐ ಜನರೇಟೆಡ್ ವಿಡಿಯೋ ಪೋಸ್ಟ್ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ವಿರುದ್ದ ಬಿಜೆಪಿ ಕೆಂಡಾಮಂಡಲವಾಗಿದ್ದರೆ, ಸಾರ್ವಜನಿಕ ವಲಯದಲ್ಲೂ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಭಾರತದ ಪ್ರಧಾನಿಯನ್ನು ಅವಮಾನಿಸಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಅಂತಾರಾಷ್ಟ್ರೀಯ ಸಭೆಯಲ್ಲಿ ಚಹಾ ಮಾರುತ್ತಿರುವ ಮೋದಿ
ಕಾಂಗ್ರೆಸ್ ವಕ್ತಾರೆ ರಾಗಿಣಿ ನಾಯಕ್ ಈ ಪೋಸ್ಟ್ ಮಾಡಿ ವಿವಾದ ಸೃಷ್ಟಿಸಿದ್ದಾರೆ. ಕಾಂಗ್ರೆಸ್ ನಾಯಕಿ ರಾಗಣಿ ನಾಯಕ್ ಪೋಸ್ಟ್ ಮಾಡಿರುವ ಈ ಎಐ ವಿಡಿಯೋದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತನಿಧಿಸುವ ರೀತಿ ಚಿತ್ರಿಸಲಾಗಿದೆ.ಮೋದಿ ಹಿಂಭಾಗದಲ್ಲಿ ಭಾರತ ದೇಶದ ಧ್ವಜ, ಇತರ ದೇಶಗಳ ಧ್ವಜ,ಬಿಜೆಪಿ ಧ್ವಜಗಳನ್ನು ಚಿತ್ರಿಸಲಾಗಿದೆ. ಅಂತಾರಾಷ್ಟ್ರೀಯ ಶೃಂಗಸಭೆಗಳಲ್ಲಿರುವಂತೆ ದೇಶದ ಪ್ರಮುಖ ನಾಯಕರ ಭೇಟಿ ವೇಳೆ ಕಾಣಿಸಿಕೊಳ್ಳುವ ರೀತಿ ಧ್ವಜಗಳನ್ನು ಚಿತ್ರಿಸಲಾಗಿದೆ. ಈ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಪ್ರಧಾನಿ ಮೋದಿ, ಚಾಯ್, ಚಾಯ್ ಬೋಲೋ ಚಾಯ್ ಎಂದು ಚಹಾ ಮಾರಾಟ ಮಾಡುತ್ತಿರುವ ವಿಡಿಯೋ ಇದಾಗಿದೆ.
ಮೋದಿ, ದೇಶ ಹಾಗೂ ರಾಷ್ಟ್ರ ಧ್ವಜ ಅವಮಾನಿಸಿತಾ ಕಾಂಗ್ರೆಸ್?
ಅಂತಾರಾಷ್ಟ್ರೀಯ ವೇದಿಕೆಗಳಲ್ಲಿರುವಂತೆ ಮೋದಿಯನ್ನು ಚಿತ್ರಿಸಲಾಗಿದೆ. ಹೀಗಾಗಿ ಈ ವಿಡಿಯೋದಲ್ಲಿ ಭಾರತದ ಪ್ರಧಾನ ಮಂತ್ರಿಗಳನ್ನು ಚಹಾ ಮಾರುವ ವ್ಯಾಪಾರಿ ರೀತಿ ಚಿತ್ರಿಸಿ ಅವಮಾನಿಸಲಾಗಿದೆ. ಇದು ಪ್ರಧಾನಿಗೆ ಮಾತ್ರವಲ್ಲ ದೇಶದ ಪ್ರತಿನಿಧಿಗೆ ಮಾಡಿದ ಅವಮಾನವಾಗಿದೆ. ಇಷ್ಟೇ ಅಲ್ಲ ಈ ವಿಡಿಯೋದಲ್ಲಿ ಹಲವು ದೇಶಗಳ ರಾಷ್ಟ್ರ ಧ್ವಜ ಚಿತ್ರಿಸಲಾಗಿದೆ. ಈ ಪೈಕಿ ಭಾರತದ ಧ್ವಜವನ್ನು ತಪ್ಪಾಗಿ ಚಿತ್ರಿಸಲಾಗಿದೆ. ಕೆಲ ಭಾರತದ ಧ್ವಜಗಳು ಕೆಂಪು, ಬಿಳಿ ಕೇಸರಿ ರೀತಿ ಚಿತ್ರಿಸಲಾಗಿದೆ. ಈ ಮೂಲಕ ಕಾಂಗ್ರೆಸ್ ರಾಷ್ಟ್ರ ಧ್ವಜಕ್ಕೂ ಅವಮಾನ ಮಾಡಿದೆ ಎಂಬ ಗಂಭೀರ ಆರೋಪಗಳು, ಟೀಕೆಗಳು, ಕಮೆಂಟ್‌ಗಳು ವ್ಯಕ್ತವಾಗುತ್ತಿದೆ.
ಒಬಿಸಿ ನಾಯಕನ ಅರಗಿಸಿಕೊಳ್ಳಲು ಆಗುತ್ತಿಲ್ಲ
ಪ್ರಧಾನಿ ಮೋದಿ ಅವಮಾನಿಸಿದ ಕಾಂಗ್ರೆಸ್ ನಡೆಗೆ ಬಿಜೆಪಿ ಕೆರಳಿದೆ. ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ ಈ ಕುರಿತು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ನಾಮದಾರಿ ಕಾಂಗ್ರೆಸ್‌ಗೆ ಕಾಮದಾರಿ ಮೋದಿಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಬಡ ಕುಟುಂಬ, ಒಬಿಸಿ ವರ್ಗದಿಂದ ಬಂದು ಪ್ರಧಾನಿಯಾಗಿರುವ ಮೋದಿ ವಿರುದ್ಧ ಕಾಂಗ್ರೆಸ್ ಈ ರೀತಿ ಅಣಕಿಸುತ್ತಿದೆ. ಈ ಹಿಂದೆಯೂ ಮೋದಿ ಚಾಯ್‌ವಾಲಾ ಎಂದು ಕಾಂಗ್ರೆಸ್ ಅಣಕಿಸಿದೆ. 150ಕ್ಕೂ ಹೆಚ್ಚು ಬಾರಿ ಮೋದಿಯನ್ನು ಅವಮಾನಿಸಿದ್ದಾರೆ, ತೆಗಳಿದ್ದಾರೆ. ಬಿಹಾರದಲ್ಲಿ ಕಾಂಗ್ರೆಸ್ ನಾಯಕರು ಮೋದಿ ತಾಯಿಯನ್ನು ಅವಮಾನಿಸಿದ್ದರು ಎಂದು ಶೆಹಜಾದ್ ಪೂನವಾಲ ಟ್ವೀಟ್ ಮಾಡಿದ್ದಾರೆ.


