ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್, ಉಚಿತ ಡಿಡಿ ಡಿಶ್ ಸೆಟ್ ಟಾಪ್ ಬಾಕ್ಸ್ ವಿತರಣೆ!
ಕೇಂದ್ರ ಸರ್ಕಾರ 2,539.61 ಕೋಟಿ ರೂಪಾಯಿ ವೆಚ್ಚದಲ್ಲಿ ಇದೀಗ ಪ್ರಸಾರ ಭಾರತಿ ಮೂಲಸೌಕರ್ಯ ಹೆಚ್ಚಿಸಲು ಮುಂದಾಗಿದೆ. ಈ ಯೋಜನೆ ಅಡಿ ಕೇಂದ್ರ ಸರ್ಕಾರ ಕುಟುಂಬಗಳಿಗೆ ಉಚಿತ ಡಿಡಿ ಸೆಟ್ ಅಪ್ ಬಾಕ್ಸ್ ವಿತರಿಸುತ್ತಿದೆ.
ನವದೆಹಲಿ(ಜ.05): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಪ್ರಸಾರ ಭಾರತಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಂಡಿದೆ. ಇದರಡಿಯಲ್ಲಿ ಪ್ರಸಾರ ಭಾರತಿಯ ಆಕಾಶವಾಣಿ ಮತ್ತು ದೂರದರ್ಶನ ಮೂಲಸೌಕರ್ಯ ಅಭಿವೃದ್ಧಿ ಮಾಡಲಿದೆ. ಇದಕ್ಕಾಗಿ 2,539.61 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಇದೇ ಯೋಜನೆಯಡಿ ಕೇಂದ್ರ ಮಹತ್ವದ ಹೆಜ್ಜೆ ಇಟ್ಟಿದೆ. ಬುಡಕಟ್ಟು ಸಮುದಾಯ, ಗಡಿ ಪ್ರದೇಶಗಳಲ್ಲಿ ನೆಲೆಸಿರುವ ಕುಟುಂಬಸ್ಥರು, ಕುಗ್ರಾಮದಲ್ಲಿ ವಾಸಿಸುತ್ತಿರುವ ಕುಟಂಬಗಳಿಗೆ ಉಚಿತವಾಗಿ ಡಿಡಿ ಸೆಟ್ ಅಪ್ ಬಾಕ್ಸ್ ವಿತರಿಸುವ ಯೋಜನೆಗೆ ಅನುಮೋದನೆ ನೀಡಿದೆ. ಈ ಮೂಲಕ ಮೂಲಸೌಕರ್ಯವಿಲ್ಲದೆ ಬದುಕುತ್ತಿರುವ ಕುಟಂಬಗಳಿಗೆ ಸರ್ಕಾರವೇ ಉಚಿತವಾಗಿ ಸೆಟ್ ಬಾಕ್ಸ್ ವಿತರಿಸಲು ಮುಂದಾಗಿದೆ.
ಗಡಿ ಪ್ರದೇಶಗಳಲ್ಲಿರುವ, ಕುಗ್ರಾಮದಲ್ಲಿರುವ ಹಾಗೂ ಬಡುಕಟ್ಟು ಸಮುದಾಯದ ನಿವಾಸಿಗಳು ಸಿಗ್ನಲ್, ನೆಟ್‌ವರ್ಕ್ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಇವರಿಗೆ ಉಚಿತ ಡಿಡಿ ಸೆಟ್ ಬಾಕ್ಸ್ ಹಾಗೂ ಸಂಪರ್ಕ ನೀಡಲು ಕೇಂದ್ರ ನಿರ್ಧರಿಸಿದೆ. ಒಟ್ಟು 8 ಲಕ್ಷ ಕುಟುಂಬಗಳಿಗೆ ಕೇಂದ್ರ ಸರ್ಕಾರ ಉಚಿತ ಡಿಡಿ ಸೆಟ್ ಅಪ್ ಬಾಕ್ಸ್ ಹಾಗೂ ಕನೆಕ್ಷನ್ ನೀಡಲಿದೆ.
ಡಿಡಿ, ಆಕಾಶವಾಣಿಯ ಮೂಲಸೌಕರ್ಯ ಹೆಚ್ಚಳಕ್ಕೆ 2500 ಕೋಟಿ ರೂ. ಪ್ರಕಟ
ಪ್ರಸ್ತುತ, ದೂರದರ್ಶನ 28 ಪ್ರಾದೇಶಿಕ ಚಾನೆಲ್‌ಗಳು ಸೇರಿದಂತೆ 36 ಟಿವಿ ಚಾನೆಲ್‌ಗಳನ್ನು ನಿರ್ವಹಿಸುತ್ತಿದೆ ಮತ್ತು ಆಕಾಶವಾಣಿಯು 500 ಕ್ಕೂ ಹೆಚ್ಚು ಪ್ರಸಾರ ಕೇಂದ್ರಗಳನ್ನು ನಿರ್ವಹಿಸುತ್ತಿದೆ. ಈ ಯೋಜನೆಯು ದೇಶದಲ್ಲಿ ಆಕಾಶವಾಣಿ ಎಫ್ ಎಂ ಟ್ರಾನ್ಸ್‌ಮಿಟರ್‌ಗಳ ವ್ಯಾಪ್ತಿಯನ್ನು ಭೌಗೋಳಿಕ ಪ್ರದೇಶದ ಪ್ರಕಾರ ಶೇ.66 ಕ್ಕೆ ಮತ್ತು ಜನಸಂಖ್ಯೆಯ ಪ್ರಕಾರ ಶೇ.80 ಕ್ಕೆ ಹೆಚ್ಚಿಸುತ್ತದೆ. ಇದು ಈಗ ಕ್ರಮವಾಗಿ ಶೇ.59 ಮತ್ತು ಶೇ.68 ಇದೆ. ಯೋಜನೆಯಡಿ ದೂರಪ್ರದೇಶದ, ಕುಗ್ರಾಮ, ಬುಡಕಟ್ಟು ಸಮುದಾಯ, ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ 8 ಲಕ್ಷಕ್ಕೂ ಹೆಚ್ಚು ಉಚಿತ ಡಿಡಿ ಡಿಶ್ ಎಸ್‌ಟಿಬಿಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ.
ಪ್ರಸಾರ ಮೂಲಸೌಕರ್ಯ ಮತ್ತು ನೆಟ್‌ವರ್ಕ್ ಅಭಿವೃದ್ಧಿ ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಅನುಮೋದಿಸಿದೆ. ಸಚಿವಾಲಯದ ಪ್ರಸಾರ ಮೂಲಸೌಕರ್ಯ ಮತ್ತು ನೆಟ್‌ವರ್ಕ್ ಅಭಿವೃದ್ಧಿ ಯೋಜನೆಯು ಪ್ರಸಾರ ಭಾರತಿಗೆ ಅದರ ಪ್ರಸಾರ ಮೂಲಸೌಕರ್ಯ, ಕಂಟೆಂಟ್ ಅಭಿವೃದ್ಧಿ ಮತ್ತು ಸಂಸ್ಥೆಗೆ ಸಂಬಂಧಿಸಿದ ಸಿವಿಲ್ ಕಾಮಗಾರಿಗಳ ವಿಸ್ತರಣೆ ಮತ್ತು ಉನ್ನತೀಕರಣಕ್ಕೆ ಸಂಬಂಧಿಸಿದ ವೆಚ್ಚಗಳಿಗೆ ಹಣಕಾಸಿನ ನೆರವು ನೀಡಲಿದೆ.
ಪ್ರಸಾರ ಭಾರತಿ, ದೇಶದ ಸಾರ್ವಜನಿಕ ಪ್ರಸಾರ ಸಂಸ್ಥೆಯಾಗಿ, ದೂರದರ್ಶನ ಮತ್ತು ಆಕಾಶವಾಣಿಯ ಮೂಲಕ ದೇಶದ ದೂರದ ಪ್ರದೇಶಗಳಲ್ಲಿ ಜನರಿಗೆ ಮಾಹಿತಿ, ಶಿಕ್ಷಣ, ಮನರಂಜನೆ ನೀಡುವ ಪ್ರಮುಖ ಸಾಧನವಾಗಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಸಾರ್ವಜನಿಕರಿಗೆ ಸಾರ್ವಜನಿಕ ಆರೋಗ್ಯ ಸಂದೇಶಗಳನ್ನು ತಲುಪಿಸುವಲ್ಲಿ ಮತ್ತು ಜಾಗೃತಿಯನ್ನು ಮೂಡಿಸುವಲ್ಲಿ ಪ್ರಸಾರ ಭಾರತಿ ಪ್ರಮುಖ ಪಾತ್ರವನ್ನು ವಹಿಸಿತು. ಇದೀಗ ಉಚಿತ ಸೆಟ್ ಅಪ್ ಬಾಕ್ಸ್ ವಿತರಣೆಯಿಂದ ದೇಶದ ಮೂಲೆ ಮೂಲೆಗೆ ಮಾಹಿತಿ ರವಾನೆಯಾಗಲಿದೆ. ಜನರು ಭಾರತದೊಂದಿಗೆ ನಿಕಟ ಸಂಪರ್ಕದಲ್ಲಿರವು ಸಾಧ್ಯವಿದೆ ಅನ್ನೋದು ಕೇಂದ್ರದ ಅಭಿಪ್ರಾಯವಾಗಿದೆ.
ಮನ್ ಕಿ ಬಾತ್‌ನಿಂದ 31 ಕೋಟಿ ಆದಾಯ!
ಸಾರ್ವಜನಿಕ ಪ್ರಸಾರದ ವ್ಯಾಪ್ತಿಯನ್ನು ಹೆಚ್ಚಿಸುವುದರ ಜೊತೆಗೆ, ಪ್ರಸಾರದ ಮೂಲಸೌಕರ್ಯಗಳ ಆಧುನೀಕರಣ ಮತ್ತು ವರ್ಧನೆಗಾಗಿ ಯೋಜನೆಯು ಪ್ರಸಾರ ಉಪಕರಣಗಳ ಪೂರೈಕೆ ಮತ್ತು ಸ್ಥಾಪನೆಗೆ ಸಂಬಂಧಿಸಿದ ಉತ್ಪಾದನೆ ಮತ್ತು ಸೇವೆಗಳ ಮೂಲಕ ಪರೋಕ್ಷ ಉದ್ಯೋಗವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ. ಆಕಾಶವಾಣಿ ಮತ್ತು ದೂರದರ್ಶನಕ್ಕಾಗಿ ವಿಷಯ (ಕಂಟೆಂಟ್) ರಚನೆ ಮತ್ತು ವಿಷಯದ ಆವಿಷ್ಕಾರವು ಟಿವಿ/ರೇಡಿಯೊ ಕಾರ್ಯಕ್ರಮ ನಿರ್ಮಾಣ, ಪ್ರಸರಣ ಮತ್ತು ಸಂಬಂಧಿತ ಮಾಧ್ಯಮ ಸಂಬಂಧಿತ ಸೇವೆಗಳು ಸೇರಿದಂತೆ ವಿಷಯ ಉತ್ಪಾದನಾ ವಲಯದಲ್ಲಿ ವಿವಿಧ ಮಾಧ್ಯಮ ಕ್ಷೇತ್ರಗಳ ವಿವಿಧ ಅನುಭವ ಹೊಂದಿರುವ ವ್ಯಕ್ತಿಗಳಿಗೆ ಪರೋಕ್ಷ ಉದ್ಯೋಗ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ, ಡಿಡಿ ಉಚಿತ ಡಿಶ್‌ನ ವ್ಯಾಪ್ತಿಯ ವಿಸ್ತರಣಾ ಯೋಜನೆಯು ಡಿಡಿ ಉಚಿತ ಡಿಶ್ ಡಿಟಿಎಚ್ ಬಾಕ್ಸ್‌ಗಳ ತಯಾರಿಕೆಯಲ್ಲಿಯೂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.