ನವದೆಹಲಿ(ಫೆ.09): ರಾಜ್ಯಸಭೆಯ ವಿಪಕ್ಷ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಸೇರಿ ನಾಲ್ವರು ಸದಸ್ಯರಿಗೆ ಇಂದು ಸದನದಿಂದ ವಿದಾಯ ಹೇಳಲಾಗುತ್ತಿದೆ. ಹೀಗಿರುವಾಗ ಪಿಎಂ ಮೋದಿ ಗುಲಾಂ ನಬಿ ಆಜಾದ್‌ರನ್ನು ಹಾಡಿ ಹೊಗಳಿದ್ದಾರೆ. ತಮ್ಮ ಭಾಷಣದಲ್ಲಿ ಪಿಎಂ ಮೋದಿ, ಗುಲಾಂ ನಬಿ ಆಜಾದ್ ತಮ್ಮ ಪಕ್ಷದೊಂದಿಗೆ ಈ ದೇಶದ ಬಗ್ಗೆಯೂ ಕಾಳಜಿ ವಹಿಸಿದ್ದರು. ಅವರ ಸ್ಥಾನ ತುಂಬುವುದು ಕಷ್ಟ ಸಾಧ್ಯ. ನಾನು ಚುನಾವಣಾ ರಾಜಕೀಯಕ್ಕೆ ಕಾಲಿಡುವ ಮೊದಲೇ ನಾವಿಬ್ಬರೂ ಲಾಬಿಯಲ್ಲಿ ಕುಳಿತು ಮಾತನಾಡುತ್ತಿದ್ದೆವು ಎಂದಿದ್ದಾರೆ. 

"

ಗುಲಾಂ ನಬಿ ಹೊಗಳಿ ಕಾಂಗ್ರೆಸ್‌ಗೆ ಮೋದಿ ಟಾಂಗ್‌!

ಮೋದಿ ಭಾವುಕರಾಗಿದ್ದೇಕೆ?

ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್‌ರವರಿಗೆ ವಿದಾಯ ಹೇಳುವ ವೇಳೆ ಪಿಎಂ ಮೋದಿ ಭಾವುಕರಾಗಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಗುಜರಾತ್‌ನ ತೀರ್ಥಯಾತ್ರಿಗಳ ಮೇಲೆ ನಡೆದಿದ್ದ ಉಗ್ರ ದಾಳಿ ಕುರಿತಾಗಿ ಮಾತನಾಡಿದ ಪಿಎಂ ಮೋದಿ, ಗುಲಾಂ ನಬಿ ಆಜಾದ್ ನನ್ನನ್ನು ಈ ಘಟನೆ ಬಗ್ಗೆ ಮಾಹಿತಿ ನೀಡಲು ಕರೆ ಮಾಡಿದ್ದರು. ಆ ಘಟನೆ ಬಗ್ಗೆ ಅದು ನನಗೆ ಬಂದಿದ್ದ ಮೊದಲ ಕರೆಯಾಗಿತ್ತು. ಅದು ಕೇವಲ ಮಾಹಿತಿ ನೀಡುವ ಕರೆಯಾಗಿರಲಿಲ್ಲ. ಅಂದು ಅವರ ಧ್ವನಿಯಲ್ಲಿ ಅಲ್ಲಿ ಮಡಿದವರ ಬಗ್ಗೆ ಕಾಳಜಿ, ಚಿಂತೆ ಇತ್ತು. ತಮ್ಮದೇ ಕುಟುಂಬದವರೆಂಬಂತೆ ಕಾಳಜಿ ಅವರಲ್ಲಿ ಕಂಡೆ. ಅಲ್ಲದೇ ಎರಡು ಬಾರಿ ನನ್ನನ್ನು ಕರೆ ಮಾಡಿದ್ದ ಅವರು ಅವರು ಈ ಘಟನೆಯಲ್ಲಿ ಹತ್ಯೆಗೀಡಾಗಿದ್ದ ಜನರ ಮೃತದೇಹ ರವಾನಿಸಲು ಸಹಾಯ ಮಾಡಿದ್ದರು.

ಭಾಷಣದ ಮಧ್ಯೆ ಅತ್ತ ಮೋದಿ:

ಗುಲಾಂ ನಬಿ ಆಜಾದ್ ಸಂಸತ್ತಿನಲ್ಲಿ ತಮ್ಮದೇ ಆದ ವಿಭಿನ್ನ ಶೈಲಿಗೆ ಗುರುತಿಸಿಕೊಳ್ಳುತ್ತಾರೆ. ಅವರು ಕೇವಲ ತಮ್ಮ ಪಕ್ಷದ ಬಗ್ಗೆ ಮಾತ್ರವಲ್ಲ, ದೇಶದ ಬಗ್ಗೆಯೂ ಚಿಂತಿಸುತ್ತಾರೆ. ಈ ಮೂಲಕ ದೇಶದ ಅಭಿವವೃದ್ಧಿ ಬಗ್ಗೆಯೂ ಕಾಳಜಿ ವಹಿಸುತ್ತಾರೆ ಎಂದು ಮೋದಿ ತಿಳಿಸಿದ್ದಾರೆ. ಇದೇ ವೇಳೆ ದೇಶಕ್ಕಾಗಿ ಅವರು ನೀಡಿದ ಕೊಡುಗೆಗೆ ಪಿಎಂ ಮೋದಿ ಸೆಲ್ಯೂಟ್ ಹೊಡೆದು ಧನ್ಯವಾದ ತಿಳಿಸಿದ್ದಾರೆ.