ನವದೆಹಲಿ(ಫೆ.09): ಈ ನಡುವೆ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿದ್ದಕ್ಕೆ ಕೇಂದ್ರ ಸರ್ಕಾರವನ್ನು ಹೊಗಳಿದ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಅವರನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದೇ ವೇಳೆ ಕಾಂಗ್ರೆಸ್‌ಗೆ ಟಾಂಗ್‌ ನೀಡಿದ್ದಾರೆ.

ರಾಜ್ಯಸಭೆಯಲ್ಲಿ ಸೋಮವಾರ ಮಾತನಾಡಿದ ಪ್ರಧಾನಿ, ‘ಆಜಾದ್‌ ಅವರ ಈ ಹೇಳಿಕೆಯನ್ನು ಕಾಂಗ್ರೆಸ್‌ ಸಕಾರಾತ್ಮಕವಾಗಿ ನೋಡಬೇಕೇ ಹೊರತೂ ಅವರನ್ನು ಜಿ-23ರ ಗುಂಪಿಗೆ ಸೇರಿಸಬಾರದು’ ಎಂದು ವ್ಯಂಗ್ಯವಾಡಿದರು.

ಈ ಮೂಲಕ ಪಕ್ಷದಲ್ಲಿ ಆಂತರಿಕ ಸುಧಾರಣೆ ಕೋರಿ ಪತ್ರ ಬರೆದು 23 ನಾಯಕರು ‘ಬಂಡಾಯ’ ಎದ್ದಿದ್ದನ್ನು ಪರೋಕ್ಷವಾಗಿ ಉಲ್ಲೇಖಿಸಿದರು.

ಗೌಡರಿಗೆ ಮೋದಿ ಮೆಚ್ಚುಗೆ|

ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ ಮೋದಿ, ‘ಕೃಷಿ ಕಾಯ್ದೆ ಕುರಿತು ಸದಸ್ಯರು ಸದನದಲ್ಲಿ ಬಹಳ ವಿಸ್ತೃತವಾಗಿ ಮಾತನಾಡಿದ್ದಾರೆ. ಆದರೆ ಈ ಪೈಕಿ ಬಹುತೇಕ ಸಮಯ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಆಂದೋಲನ ಹೇಗಿದೆ ಎಂಬುದಕ್ಕಷ್ಟೇ ಸೀಮಿತವಾಗಿದೆ. ಆದರೆ ವಿಷಯದ ಮೂಲದ ಬಗ್ಗೆ ಹೆಚ್ಚಿನ ಸಮಯ ವ್ಯಯಿಸಿದ್ದರೆ ಉಪಯೋಗವಾಗುತ್ತಿತ್ತು. ಆಂದೋಲನ ನಡೆಸುತ್ತಿರುವುದು ಏಕೆ ಎಂಬ ವಿಷಯದ ಬಗ್ಗೆ ವಿಪಕ್ಷ ನಾಯಕರು ಪೂರ್ಣ ಮೌನ ವಹಿಸಿದ್ದಾರೆ’ ಎಂದು ಟೀಕಿಸಿದರು.

ಇದೇ ವೇಳೆ ದೇವೇಗೌಡರ ಹೆಸರು ಪ್ರಸ್ತಾಪಿಸಿದ ಮೋದಿ, ‘ಈ ಇಡೀ ಚರ್ಚೆಗೆ ದೇವೇಗೌಡರು ಒಂದು ಗಾಂಭೀರ‍್ಯ ತಂದುಕೊಟ್ಟಿದ್ದಾರೆ. ಅವರು ಸರ್ಕಾರದ ಎಲ್ಲ ಉತ್ತಮ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಜೊತೆಗೆ ಸರ್ಕಾರಕ್ಕೆ ಉತ್ತಮ ಸಲಹೆಗಳನ್ನೂ ನೀಡಿದ್ದಾರೆ. ಏಕೆಂದರೆ ಅವರು ತಮ್ಮ ಇಡೀ ಜೀವನವನ್ನು ಕೃಷಿಕರಿಗೆ ಸಮರ್ಪಿಸಿಕೊಂಡಿದ್ದಾರೆ. ಹೀಗಾಗಿ ಅವರು ಸರ್ಕಾರದ ಎಲ್ಲಾ ಉತ್ತಮ ಪ್ರಯತ್ನಗಳನ್ನು ಶ್ಲಾಘಿಸಿಕೊಂಡೇ ಬಂದಿದ್ದಾರೆ. ಅವರಿಗೆ ನಾನು ಹೃದಯಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಕೊಂಡಾಡಿದರು.