ಪ್ರಧಾನಿ ನರೇಂದ್ರ ಮೋದಿ ಅವರು ಬಸ್ತಾರ್ ಜಿಲ್ಲೆಯ ಸಿಆರ್ಪಿಎಫ್ ಮತ್ತು ಕೋಬ್ರಾ ಕಾರ್ಯಾಚರಣೆ ನೆಲೆಗೆ ಭೇಟಿ ನೀಡಿ ಯೋಧರೊಂದಿಗೆ ದೀಪಾವಳಿ ಆಚರಿಸಿದರು. ಯೋಧರ ತ್ಯಾಗವನ್ನು ಶ್ಲಾಘಿಸಿ, ಅವರೊಂದಿಗೆ ಸಿಹಿ ಹಂಚಿಕೊಂಡರು. ಅಭಿವೃದ್ಧಿ ಮತ್ತು ಶಾಂತಿ ಸ್ಥಾಪನೆಯಲ್ಲಿ ಭದ್ರತಾ ಪಡೆಗಳ ಪಾತ್ರವನ್ನು ಪ್ರಧಾನಿ ಕೊಂಡಾಡಿದರು. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಇಂದು ದೇಶದ ಪ್ರಧಾನಿ ನರೇಂದ್ರ ಮೋದಿ ದೀಪಾವಳಿಯನ್ನು ಛತ್ತೀಸ್ಗಢದ ನಕ್ಸಲ್ ಪೀಡಿತ ಬಸ್ತಾರ್ ಜಿಲ್ಲೆಯ ಸಿಆರ್ಪಿಎಫ್ ಮತ್ತು ಕೋಬ್ರಾ ಕಾರ್ಯಾಚರಣೆ ನೆಲೆಗೆ ಭೇಟಿ ನೀಡಿ ಸೈನಿಕರ ಸಮ್ಮುಖದಲ್ಲಿ ಹಬ್ಬದ ಸಂಭ್ರಮ ಹಂಚಿಕೊಂಡಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ದೀಪಾವಳಿ ಹಬ್ಬವನ್ನು ಕುಟುಂಬದವರೊಂದಿಗೆ ಅಲ್ಲ, ಬದಲಿಗೆ ದೇಶ ಕಾಯುವ ಯೋಧರೊಂದಿಗೆ ಆಚರಿಸುವ ಮೂಲಕ ತಮ್ಮ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.
ಯೋಧರೇ ನನ್ನ ಕುಟುಂಬ!
ಅಲ್ಲದೇ ಯೋಧರ ಸಮ್ಮುಖದಲ್ಲಿ ನೀವೇ ನನ್ನ ನಿಜವಾದ ಕುಟುಂಬ, ನಿಮ್ಮೊಂದಿಗೆ ದೀಪಾವಳಿ ಆಚರಿಸುವುದು ಹೆಮ್ಮೆಯ ವಿಷಯ ಎಂದು ಪ್ರಧಾನಿ ಮೋದಿ ಯೋಧರನ್ನು ಭಾವನಾತ್ಮಕವಾಗಿ ಶ್ಲಾಘಿಸಿದ್ದಾರೆ. ಕರನ್ಪುರ ಕ್ಯಾಂಪ್ನಲ್ಲಿರುವ 'ಅಮರ್ ಜವಾನ್' ಸ್ಮಾರಕಕ್ಕೆ ಪುಷ್ಪಗುಚ್ಛ ಇರಿಸಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರಿಗೆ ಪ್ರಧಾನಿ ಗೌರವ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ ಸೈನಿಕರೊಂದಿಗೆ ಖುದ್ದಾಗಿ ಸಂವಾದ ನಡೆಸಿದ ಮೋದಿ, ತಾವೇ ಸ್ವತಃ ಸಿಹಿಯನ್ನು ಯೋಧರಿಗೆ ತಿನ್ನಿಸಿ ದೀಪಾವಳಿಯ ಶುಭಾಶಯ ಕೋರಿದ್ದಾರೆ.
ಮೊಳಗಿದ ದೇಶಭಕ್ತಿ ಘೋಷಣೆ!
ಈ ವೇಳೆ ಇಡೀ ಕ್ಯಾಂಪ್ನಲ್ಲಿ ಯೋಧರು ಮತ್ತು ಪ್ರಧಾನಿ ಒಟ್ಟಾಗಿ ‘ಭಾರತ್ ಮಾತಾ ಕೀ ಜೈ’ ಮತ್ತು ‘ವಂದೇ ಮಾತರಂ’ ಘೋಷಣೆಗಳನ್ನು ಕೂಗುವ ಮೂಲಕ ಸೈನಿಕರಲ್ಲಿ ಹೊಸ ಹುಮ್ಮಸ್ಸು ತುಂಬಿದ್ದಾರೆ. ಅದರೊಂದಿಗೆ ಒಂದು ಕಾಲದಲ್ಲಿ ಭೀತಿಯ ನೆರಳಿನಲ್ಲಿದ್ದ ಬಸ್ತಾರ್ ಪ್ರದೇಶದಲ್ಲಿ ಶಾಂತಿ ಸ್ಥಾಪಿಸಲು ಮತ್ತು ಅಭಿವೃದ್ಧಿ ತರಲು ಸಿಆರ್ಪಿಎಫ್ ಹಾಗೂ ಕೋಬ್ರಾ ಪಡೆಗಳು ತೋರುತ್ತಿರುವ ಧೈರ್ಯ, ಸಮರ್ಪಣಾ ಭಾವವನ್ನು ಪ್ರಧಾನಿ ಮುಕ್ತಕಂಠದಿಂದ ಕೊಂಡಾಡಿದ್ದಾರೆ.
ಪ್ರತಿ ವರ್ಷ ಯೋಧರೊಂದಿಗೆ ದೀಪಾವಳಿ!
ಪ್ರಧಾನಿ ಮೋದಿಯವರ ಭೇಟಿಯಿಂದಾಗಿ ಗಡಿಯಲ್ಲಿ ಮನೆ-ಕುಟುಂಬದಿಂದ ದೂರವಿದ್ದ ಸೈನಿಕರ ಮುಖದಲ್ಲಿ ದೀಪಾವಳಿಯ ದೀಪದಷ್ಟೇ ಉಜ್ವಲವಾದ ನಗು ಮೂಡಿತ್ತು. 2014 ರಲ್ಲಿ ಪ್ರಧಾನಿಯಾದಾಗಿನಿಂದಲೂ ಮೋದಿ ಅವರು ಕಾರ್ಗಿಲ್, ಲಡಾಖ್, ಸಿಿಯಾಚಿನ್ ಸೇರಿದಂತೆ ದೇಶದ ವಿವಿಧ ಗಡಿ ಭಾಗಗಳಲ್ಲಿ ಯೋಧರೊಂದಿಗೇ ದೀಪಾವಳಿ ಆಚರಿಸುತ್ತಾ ಬಂದಿರುವುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ.
ಸ್ಥಳೀಯ ಬಸ್ತಾರ್ ಸಂಸ್ಕೃತಿಗೆ ಗೌರವ!
ಯೋಧರ ಕ್ಯಾಂಪ್ನಲ್ಲಿ ಪ್ರಧಾನಿ ಮೋದಿಯವರಿಗೆ ಬಸ್ತಾರ್ನ ಸಾಂಪ್ರದಾಯಿಕ ಶೈಲಿಯ ಶಿರಸ್ತ್ರಾಣ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪ್ರಧಾನಿಯವರು ಸ್ಥಳೀಯ ಭದ್ರತಾ ಸಿಬ್ಬಂದಿಯೊಂದಿಗೆ ಅತ್ಯಂತ ಆಪ್ತವಾಗಿ ಬೆರೆತು ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಈ ವೇಳೆ ಭಾಷಣದದಲ್ಲಿ ಪ್ರಧಾನಿ ಮೋದಿ ಅವರು, ಭಾರತವು ರಕ್ಷಣಾ ವಲಯದಲ್ಲಿ ಹೇಗೆ ಸ್ವಾವಲಂಬಿಯಾಗುತ್ತಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ. ಇಂದು ಭಾರತೀಯ ಸೇನೆ ಮತ್ತು ಭದ್ರತಾ ಪಡೆಗಳು ಬಳಸುತ್ತಿರುವ ಆಧುನಿಕ ಶಸ್ತ್ರಾಸ್ತ್ರಗಳು 'ಮೇಡ್ ಇನ್ ಇಂಡಿಯಾ' ಆಗಿದ್ದು, ಇದು ಯೋಧರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.
ಅಭಿವೃದ್ಧಿಯ ಹೊಸ ಹಾದಿ!
ಈಗಾಗಲೇ ನಕ್ಸಲರ ಭೀತಿಯಿಂದಾಗಿ ಹಿಂದೆ ಬಸ್ತಾರ್ನಲ್ಲಿ ರಸ್ತೆ, ಶಾಲೆ ಹಾಗೂ ಆಸ್ಪತ್ರೆಗಳ ನಿರ್ಮಾಣ ಕಷ್ಟವಾಗಿತ್ತು. ಆದರೆ ಸಿಆರ್ಪಿಎಫ್ ಮತ್ತು ಕೋಬ್ರಾ ಪಡೆಗಳ ನಿರಂತರ ಶ್ರಮದಿಂದಾಗಿ ಇಂದು ಬಸ್ತಾರ್ನ ಮೂಲೆ ಮೂಲೆಗೂ ಅಭಿವೃದ್ಧಿ ತಲುಪುತ್ತಿದೆ. ಯೋಧರು ಕೇವಲ ಗಡಿ ಕಾಯುತ್ತಿಲ್ಲ, ಜನರ ಜೀವನವನ್ನೂ ಬದಲಾಯಿಸುತ್ತಿದ್ದಾರೆ ಎಂದು ಪಿಎಂ ಶ್ಲಾಘಿಸಿದ್ದಾರೆ. ನಾವು ಇಂದು ದೇಶದಾದ್ಯಂತ ಸುರಕ್ಷಿತವಾಗಿ ದೀಪಾವಳಿಯ ದೀಪಗಳನ್ನು ಹಚ್ಚಿ ಸಂಭ್ರಮಿಸುತ್ತಿದ್ದೇವೆ ಎಂದರೆ, ಅದಕ್ಕೆ ನಮ್ಮ ಯೋಧರು ಗಡಿಯಲ್ಲಿ ಮತ್ತು ಆಂತರಿಕವಾಗಿ ಹಗಲಿರುಳು ಎಚ್ಚರದಿಂದಿರುವುದೇ ಕಾರಣ" ಎಂದು ದೇಶದ ಜನತೆಗೆ ಜವಾನರ ತ್ಯಾಗವನ್ನು ಪ್ರಧಾನಿ ನೆನಪಿಸಿಕೊಟ್ಟರು.














