ರೈಲಿನ ಲೋಕೋ ಪೈಲಟ್ ನಿದ್ದೆ ಮಾಡಿದರೆ ಸುರಕ್ಷತಾ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ವಿಜಿಲೆನ್ಸ್ ಕಂಟ್ರೋಲ್ ಡಿವೈಸ್ ಮತ್ತು ಕವಚ್ ತಂತ್ರಜ್ಞಾನದ ಪಾತ್ರ, ಮತ್ತು ಮೈಕ್ರೋ ಸ್ಲೀಪ್‌ನಿಂದಾಗುವ ಅಪಾಯಗಳನ್ನು ವಿವರಿಸಲಾಗಿದೆ.
ಮಧ್ಯರಾತ್ರಿ ಸೂಪರ್‌ಫಾಸ್ಟ್ ರೈಲು ಗಂಟೆಗೆ 120 ಕಿ.ಮೀ ವೇಗದಲ್ಲಿ ಹೋಗುತ್ತಿರುವಾಗ ಪ್ರಯಾಣಿಕರು ನೆಮ್ಮದಿಯಾಗಿ ನಿದ್ದೆ ಮಾಡುತ್ತಿರುತ್ತಾರೆ. ಅದೇ ಸಮಯದಲ್ಲಿ ಎಂಜಿನ್‌ನಲ್ಲಿರುವ ಲೋಕೋ ಪೈಲಟ್ ಕಣ್ಣು ಮುಚ್ಚಿದರೆ ಏನಾಗಬಹುದು? ಹೆಚ್ಚಿನ ಸಂದರ್ಭಗಳಲ್ಲಿ ಸುರಕ್ಷತಾ ವ್ಯವಸ್ಥೆಯು ಪೈಲಟ್‌ಗೆ ಅಲರ್ಟ್ ನೀಡುತ್ತದೆ. ಪ್ರತಿಕ್ರಿಯೆ ಬರದಿದ್ದರೆ ರೈಲು ತಾನಾಗಿಯೇ ಬ್ರೇಕ್ ಹಾಕಿಕೊಂಡು ನಿಲ್ಲುತ್ತದೆ. ಆದರೆ ಈ ವ್ಯವಸ್ಥೆ ಪ್ರತಿ ಬಾರಿಯೂ ಅಪಘಾತಗಳನ್ನು ತಪ್ಪಿಸುತ್ತೆ ಅಂತ ಹೇಳಲಾಗದು. ನಿದ್ದೆಯ ಮಂಪರಿನಲ್ಲಿ ರೆಡ್ ಸಿಗ್ನಲ್ ದಾಟಿದ ಘಟನೆಗಳೂ ಇವೆ. ಡ್ರೈವರ್ ನಿದ್ದೆ ಮಾಡಿದರೆ ಏನಾಗುತ್ತೆ? ಈ ಸುರಕ್ಷತಾ ವ್ಯವಸ್ಥೆಗಳು ಹೇಗೆ ಕೆಲಸ ಮಾಡುತ್ತವೆ? ಎಲ್ಲಿ ದೋಷಗಳು ಉಂಟಾಗುತ್ತವೆ ಅನ್ನೋದನ್ನು ತಿಳಿಯೋಣ.
ಎಂಜಿನ್‌ನಲ್ಲಿ ಇಬ್ಬರು ಪೈಲಟ್‌ಗಳು, ವಿಜಿಲೆನ್ಸ್ ಕಂಟ್ರೋಲ್ ಡಿವೈಸ್ (VCD)
ಭಾರತೀಯ ರೈಲ್ವೆಯ ಮೇಲ್, ಎಕ್ಸ್‌ಪ್ರೆಸ್ ರೈಲುಗಳ ಎಂಜಿನ್‌ನಲ್ಲಿ ಸಾಮಾನ್ಯವಾಗಿ ಲೋಕೋ ಪೈಲಟ್ ಜೊತೆಗೆ ಅಸಿಸ್ಟೆಂಟ್ ಲೋಕೋ ಪೈಲಟ್ ಕೂಡ ಇರುತ್ತಾರೆ. ಒಬ್ಬರು ಸಿಗ್ನಲ್ ನೋಡದಿದ್ದರೆ ಮತ್ತೊಬ್ಬರು ಗಮನಿಸಲಿ ಅನ್ನೋದೇ ಇದರ ಉದ್ದೇಶ. ಆದರೆ ಇಬ್ಬರೂ ಮನುಷ್ಯರೇ ಆಗಿರುವುದರಿಂದ ಆಯಾಸವಾಗುವುದು ಸಹಜ. ಹಾಗಾಗಿ ರೈಲ್ವೆ ಕೇವಲ ಇವರನ್ನೇ ನಂಬಿಕೊಂಡಿಲ್ಲ. ಎಂಜಿನ್‌ನಲ್ಲಿರುವ ವಿಜಿಲೆನ್ಸ್ ಕಂಟ್ರೋಲ್ ಡಿವೈಸ್ (VCD) ಪೈಲಟ್ ಎಚ್ಚರವಾಗಿದ್ದಾರಾ ಇಲ್ಲವಾ ಅಂತ ಸತತವಾಗಿ ಚೆಕ್ ಮಾಡುತ್ತದೆ. ಸ್ಪೀಡ್ ಬದಲಾಯಿಸುವುದು, ಹಾರ್ನ್ ಮಾಡುವುದು, ಬ್ರೇಕ್ ಹಾಕುವುದು ಅಥವಾ ವಿಶೇಷ ಬಟನ್ ಒತ್ತುವುದರ ಮೂಲಕ ಪೈಲಟ್ ಆಕ್ಟಿವ್ ಆಗಿದ್ದಾರೆ ಅಂತ ಈ ಸಿಸ್ಟಮ್ ಗುರುತಿಸುತ್ತದೆ.
ಪೆನಾಲ್ಟಿ ಬ್ರೇಕ್ ಅಂದರೆ ಏನು?
ನಿಗದಿತ ಸಮಯದಲ್ಲಿ ಪೈಲಟ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದರೆ ಮೊದಲು ಲೈಟ್ ಬೆಳಗುತ್ತದೆ. ಆಮೇಲೆ ಅಲಾರಂ ಬಾರಿಸುತ್ತದೆ. ಆದರೂ ಪ್ರತಿಕ್ರಿಯೆ ಬರದಿದ್ದರೆ ಸಿಸ್ಟಮ್ ಎಮರ್ಜೆನ್ಸಿ ಬ್ರೇಕ್ ಹಾಕುತ್ತದೆ. ಇದನ್ನೇ ಪೆನಾಲ್ಟಿ ಬ್ರೇಕ್ ಅಂತಾರೆ. ಹಿಂದೆ ಇದರ ಬದಲು ಡೆಡ್ ಮ್ಯಾನ್ಸ್ ಹ್ಯಾಂಡಲ್ ಇತ್ತು. ಪೈಲಟ್ ಅದನ್ನು ಬಿಟ್ಟರೆ ತಕ್ಷಣ ಬ್ರೇಕ್ ಬೀಳುತ್ತಿತ್ತು.
ಕವಚ್ (Kavach) ಸಿಸ್ಟಮ್
ಪ್ರಸ್ತುತ ಭಾರತೀಯ ರೈಲ್ವೆಯ ಹಲವು ಮಾರ್ಗಗಳಲ್ಲಿ 'ಕವಚ್' (Automatic Train Protection) ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಒಂದು ವೇಳೆ ಡ್ರೈವರ್ ನಿದ್ದೆ ಮಾಡಿ ರೆಡ್ ಸಿಗ್ನಲ್ ಗಮನಿಸದಿದ್ದರೂ, ಈ ಸಿಸ್ಟಮ್ ಅದನ್ನು ಗುರುತಿಸಿ ಆಟೋಮ್ಯಾಟಿಕ್ ಆಗಿ ಬ್ರೇಕ್ ಹಾಕಿ ರೈಲನ್ನು ನಿಲ್ಲಿಸುತ್ತದೆ.
ವಿಜಿಲೆನ್ಸ್ ಕಂಟ್ರೋಲ್ ಡಿವೈಸ್ ಇದ್ದರೂ ಅಪಘಾತಗಳು ಯಾಕೆ ಆಗುತ್ತಿವೆ ಅನ್ನೋದಕ್ಕೆ ಮೈಕ್ರೋ ಸ್ಲೀಪ್ ಒಂದು ಕಾರಣ. 2023ರ ಜೂನ್‌ನಲ್ಲಿ ಪಶ್ಚಿಮ ಬಂಗಾಳದ ಬಂಕುರಾ ಸಮೀಪದ ಒಂಡಾ ಮತ್ತು 2024ರ ಜೂನ್‌ನಲ್ಲಿ ಪಂಜಾಬ್‌ನ ಸಿರ್ಹಿಂದ್ ಬಳಿ ನಡೆದ ಗೂಡ್ಸ್ ರೈಲುಗಳ ಡಿಕ್ಕಿ ಘಟನೆಗಳ ತನಿಖೆಯಲ್ಲಿ ಮೈಕ್ರೋ ಸ್ಲೀಪ್, ನಿದ್ದೆಗೆ ಜಾರುವುದು ಮುಂತಾದ ಅಂಶಗಳು ಪ್ರಸ್ತಾಪವಾಗಿವೆ. ಕೆಲವು ಸೆಕೆಂಡುಗಳ ಕಾಲ ಮೆದುಳು ಆಫ್ ಆಗುವ ಈ ಮೈಕ್ರೋ ಸ್ಲೀಪ್‌ನಲ್ಲಿ ಕಣ್ಣು ತೆರೆದಿದ್ದರೂ ಏನು ನಡೆಯುತ್ತಿದೆ ಅಂತ ಗೊತ್ತಾಗಲ್ಲ. VCD ಕೇವಲ ಚಲನೆಯನ್ನು ಮಾತ್ರ ಗಮನಿಸುತ್ತದೆ. ಅಲಾರಂ ಬಾರಿಸುವ ಹೊತ್ತಿಗೆ ವೇಗವಾಗಿ ಹೋಗುತ್ತಿರುವ ರೈಲು ರೆಡ್ ಸಿಗ್ನಲ್ ದಾಟುವ ಅಪಾಯವಿರುತ್ತದೆ.
ಈ ಸಮಸ್ಯೆಯಿಂದ ಪಾರಾಗಲು ಸ್ವದೇಶಿ ಆಟೋಮ್ಯಾಟಿಕ್ ಟ್ರೈನ್ ಪ್ರೊಟೆಕ್ಷನ್ ವ್ಯವಸ್ಥೆಯಾದ ಕವಚ್ ಅನ್ನು ಹಂತಹಂತವಾಗಿ ಜಾರಿಗೆ ತರುತ್ತಿದ್ದಾರೆ. ಇದು ಸಿಗ್ನಲ್, ವೇಗ, ರೈಲಿನ ಸ್ಥಳವನ್ನು ಆಧರಿಸಿ ಪೈಲಟ್ ಬ್ರೇಕ್ ಹಾಕದಿದ್ದರೆ ತಾನಾಗಿಯೇ ಬ್ರೇಕ್ ಹಾಕಿ ರೈಲನ್ನು ನಿಲ್ಲಿಸುತ್ತದೆ. ಮತ್ತೊಂದೆಡೆ ಸತತ ನೈಟ್ ಡ್ಯೂಟಿಗಳು, ಹೆಚ್ಚು ಕೆಲಸದ ಸಮಯ, ಸಾಕಷ್ಟು ವಿಶ್ರಾಂತಿ ಇಲ್ಲದಿರುವುದರಿಂದ ಬರುವ ಆಯಾಸವೇ ಅಸಲು ಸಮಸ್ಯೆ ಅಂತ ಹೇಳಲಾಗುತ್ತಿದೆ.












