ನವದೆಹಲಿ(ಫೆ.06): ಸಿಎಎ ಕುರಿತಾದ ಕಾಂಗ್ರೆಸ್ ನಿಲುವನ್ನು ಟೀಕಿಸಿರುವ ಪ್ರಧಾನಿ ಮೋದಿ, ಸ್ವಾತಂತ್ರ್ಯ ದೊರೆತ ಕ್ಷಣದಲ್ಲಿ ಪಾಕಿಸ್ತಾನದ ಅಲ್ಪಸಂಖ್ಯಾತರ ಪರ ಧ್ವನಿ ಎತ್ತಿದ್ದ ಕಾಂಗ್ರೆಸ್ ಮತೀಯವಾದಿ ಪಕ್ಷವಾಗಿತ್ತು ಎಂದು ಚುಚ್ಚಿದ್ದಾರೆ.

ಸ್ವಾತಂತ್ರ್ಯ ದೊರೆತ ಬಳಿಕ ಪಾಕಿಸ್ತಾನದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಪರವಿದ್ದ ಕಾಂಗ್ರೆಸ್ ಪಕ್ಷ, ಇದೀಗ ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು.

ಗಾಂಧಿ ನಿಮಗೆ ಟ್ರೇಲರ್ ಇದ್ದಂತೆ, ನಮಗೆ ಜೀವನ: ವಿಪಕ್ಷಗಳ ಕಾಲೆಳೆದ ಮೋದಿ!

ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಸ್ವಾತಂತ್ರ್ಯದ ವೇಳೆ ಮತಾಂಧವಾಗಿದ್ದ ಕಾಂಗ್ರೆಸ್ ಪಕ್ಷ ಈಗ ಜಾತ್ಯಾತೀತ ಪಕ್ಷವಾಗಿ ಮಾರ್ಪಟ್ಟಿದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಾಕಿಸ್ತಾನದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಪರ ಇತ್ತು ಎಂಬುದಕ್ಕೆ ಇತಿಹಾಸದಲ್ಲಿ ಸಾಕ್ಷಿಯಿದೆ. ಈಗ ರಾಜಕೀಯ ಕಾರಣಗಳಿಗೆ ಕಾಂಗ್ರೆಸ್ ಸಿಎಎ ವಿರೋಧಿಸುತ್ತಿರುವುದು ಹಾಸ್ಯಾಸ್ಪದ ಎಂದು ಮೋದಿ ಕುಹುಕವಾಡಿದರು.

ದೇಶದ ಅಭಿವೃದ್ಧಿಗೆ ನಮ್ಮ ಸರ್ಕಾರ ನಿರಂತರವಾಗಿ ದುಡಿಯುತ್ತಿದ್ದು, ಇದಕ್ಕೆ ಪೂರಕವಾಗಿ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹಿಂಜರಿಯುವುದಿಲ್ಲ ಎಂದು ಪ್ರಧಾನಿ ಸದನಕ್ಕೆ ಸ್ಪಷ್ಟಪಡಿಸಿದರು.

ಯಾರಿಗೋ ಪ್ರಧಾನಿಯಾಗುವ ಬಯಕೆಯಿತ್ತು, ಅದಕ್ಕೆ ದೇಶ ಇಬ್ಭಾಗವಾಯ್ತು: ಮೋದಿ!

ರಾಷ್ಟ್ರಪತಿಗಳ ಭಾಷಣ ನವ ಭಾರತದ ನಿರ್ಮಾಣಕ್ಕೆ ಪೂರಕವಾಗಿದ್ದು, ದೇಶದ ಏಕತೆ ಹಾಗೂ ಅಖಂಡತೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ಸದೃಢ ದೇಶವನ್ನು ನಿರ್ಮಾಣ ಮಾಡೋಣ ಎಂದು ಈ ವೇಳೆ ಪ್ರಧಾನಿ ಕರೆ ನೀಡಿದರು.