ನವದೆಹಲಿ(ಫೆ.06): ಕೇವಲ ಪ್ರಧಾನಿಯಾಗುವ ತಮ್ಮ ಬಯಕೆ ಈಡೇರಿಸಿಕೊಳ್ಳಲು ದೇಶವನ್ನೇ ಇಬ್ಭಾಗ ಮಾಡಿದ ಇತಿಹಾಸ ನಮ್ಮ ಕಣ್ಣ ಮುಂದಿದೆ ಎಂದು ಪ್ರಧಾನಿ ಮೋದಿ ಪರೋಕ್ಷವಾಗಿ ಜವಾಹರಲಾಲ್ ನೆಹರೂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೋದಿ ಸರ್ಕಾರ ಅಲ್ಪಸಂಖ್ಯಾತರು ಅದರಲ್ಲೂ ವಿಶೇಷವಾಗಿ ಮುಸ್ಲಿಮರ ಮೇಲೆ ತಾರತಮ್ಯವೆಸಗುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಪ್ರಧಾನಿ ಮೋದಿ, ಕೇವಲ ಪ್ರಧಾನಿಯಾಗುವ ಆಸೆ ಈಡೇರಿಸಿಕೊಳ್ಳಲು ಈ ದೇಶ ಇಬ್ಭಾಗ ಮಾಡಿದವರು ನಮಗೆ ಬುದ್ಧಿ ಹೇಳಲು ಬರುತ್ತಾರೆ ಎಂದು ಕಿಚಾಯಿಸಿದರು .

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ, ತಮ್ಮ ಭಾಷಣದಲ್ಲಿ ಜವಹರಲಾಲ್ ನೆಹರೂ, ಭಾರತ ವಿಭಜನೆ, ತುರ್ತು ಪರಿಸ್ಥಿತಿ ಮತ್ತು 1984ರ ಸಿಖ್ ವಿರೋಧಿ ದಂಗೆ ಬಗ್ಗೆ ಪ್ರಸ್ತಾಪಿಸಿದರು.

ಯಾರೋ ಒಬ್ಬರು ಪ್ರಧಾನಿಯಾಗಬೇಕೆಂಬ ಆಸೆಯಿಂದ ಭಾರತವನ್ನು ವಿಭಜಿಸಿ ಎರಡು ದೇಶಗಳನ್ನಾಗಿ ಹೋಳು ಮಾಡಿದರು. ದೇಶ ಇಬ್ಭಾಗವಾದ ನಂತರ ಪಾಕಿಸ್ತಾನದಲ್ಲಿ ಹಿಂದೂ, ಸಿಖ್ಖರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರಿಗೆ ಯಾವ ರೀತಿ ಕಿರುಕುಳ ನೀಡಲಾಯಿತು ಎಂಬುದು ಇಡೀ ಜಗತ್ತಿಗೆ ಗೊತ್ತು ಎಂದು ಮೋದಿ ಹರಿಹಾಯ್ದರು.

ಗಾಂಧಿ ನಿಮಗೆ ಟ್ರೇಲರ್ ಇದ್ದಂತೆ, ನಮಗೆ ಜೀವನ: ವಿಪಕ್ಷಗಳ ಕಾಲೆಳೆದ ಮೋದಿ!

1950ರಲ್ಲಿ ನೆಹರೂ-ಲಿಲಿಯಾಕತ್ ಅಲಿ ಒಪ್ಪಂದ ವೇಳೆ ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುವುದಿಲ್ಲ ಎಂದು ಒಪ್ಪಂದವಾಗಿತ್ತು. ನೆಹರೂ ಅವರಂತಹ ಜಾತ್ಯತೀತವಾದಿಗಳು ದೂರದೃಷ್ಟಿ ಹೊಂದಿದ್ದವರು ಆಗ ಏಕೆ ಎಲ್ಲಾ ನಾಗರಿಕರನ್ನು ಒಪ್ಪಂದದಲ್ಲಿ ಪರಿಗಣಿಸಿರಲಿಲ್ಲ ಎಂದು ಪ್ರಧಾನಿ ಪ್ರಶ್ನಿಸಿದರು.