ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಟ್ರಂಪ್ ನೀಡಿದ ಆಹ್ವಾನ ತಿರಸ್ಕರಿಸಿದ್ದಾರೆ. ಇಷ್ಟೇ ಅಲ್ಲ ಅಮೆರಿಕ ಭೇಟಿ ನಿರಾಕರಿಸಿ ಕ್ರೋವೇಶಿಯಾಗೆ ಭೇಟಿ ನೀಡುತ್ತಿರುವ ಮೋದಿ ಸ್ಪಷ್ಟ ಸಂದೇಶ ನೀಡಿದ್ದಾರೆ. 35 ನಿಮಿಷ ಫೋನ್ ಕಾಲ್‌ನಲ್ಲಿ ಮೋದಿ ಕೊಟ್ಟ ಸಂದೇಶವೇನು? 

ನವದೆಹಲಿ(ಜೂ.18) ಅಮೆರಿಕ ಅಧ್ಯಕ್ಷರು ಆಹ್ವಾನ ನೀಡಿದರೆ ತಿರಸ್ಕರಿಸುವ ನಾಯಕರು ವಿರಳ. ಕಾರಣ ಅಮೆರಿಕ ಜೊತ ಉತ್ತಮ ಸಂಬಂಧ ಹೊಂದಲು ಎಲ್ಲರೂ ಬಯಸುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಡೋನಾಲ್ಡ್ ಟ್ರಂಪ್ ನೀಡಿದ ಆಹ್ವಾನವನ್ನು ನಿರಾಕರಿಸಿದ್ದಾರೆ. ಕೆನಾಡ ಭೇಟಿ ನೀಡಿದ ಮೋದಿಗೆ ಟ್ರಂಪ್ ಫೋನ್ ಕರೆ ಮಾಡಿ, ಕೆನಡಾದಿಂದ ತೆರಳುವಾಗ ಪಕ್ಕದಲ್ಲೇ ಇರುವ ಅಮೆರಿಕೆಗಾ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ. ಆದರೆ ಪ್ರಧಾನಿ ಮೋದಿ, ಟ್ರಂಪ್ ಆಹ್ವಾನ ನಿರಾಕರಿಸಿದ್ದಾರೆ. ಮೊದಲೇ ನಿರ್ಧರಿಸಿರುವ ಕ್ರೋವೇಶಿಯಾ ಭೇಟಿ ನೀಡುತ್ತಿರುವ ಕಾರಣ ಅಮೆರಿಕ ಭೇಟಿ ಸಾಧ್ಯವಿಲ್ಲ ಎಂದಿದ್ದಾರೆ. ಇಷ್ಟೇ ಅಲ್ಲ 35 ನಿಮಿಷಗಳ ಫೋನ್ ಕಾಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಲ ಸ್ಪಷ್ಟ ಸಂದೇಶವನ್ನು ಟ್ರಂಪ್‌ಗೆ ರವಾನಿಸಿದ್ದಾರೆ.

35 ನಿಮಿಷ ಫೋನ್ ಕಾಲ್

ಕೆನಡಾದಿಂದ ಕ್ರೋವೇಶಿಯಾಗೆ ತೆರಳುವ ನಡುವೆ ಅಮೆರಿಕಾಗೆ ಭೇಟಿ ನೀಡುವಂತೆ ಟ್ರಂಪ್, ಮೋದಿಗೆ ಮನವಿ ಮಾಡಿದ್ದರು. ಈ ಆಹ್ವಾನ ತಿರಸ್ಕರಿಸಿದ ಪ್ರಧಾನಿ ಮೋದಿ, ತಮ್ಮ ಪೂರ್ವ ನಿಗಧಿತ ಭೇಟಿ ಮುಂದುವರಿಸಿದ್ದಾರೆ. ಆದರೆ 35 ನಿಮಿಷದ ಫೋನ್ ಕಾಲ್‌ನಲ್ಲಿ ಪ್ರಧಾನಿ ಮೋದಿ, ಅಮೆರಿಕಗೆ ಸೂಚನೆ ನೀಡಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವೆ ಅಮೆರಿಕ ಮಧ್ಯಸ್ಥಿತಿಕೆ ಬೇಡ ಎಂದಿದ್ದಾರೆ.

ಪ್ರಧಾನಿ ಮೋದಿ ತಮ್ಮ ಮಾತಿನಲ್ಲಿ, ಪಾಕಿಸ್ತಾನದ ಜೊತೆಗಿನ ವಿಚಾರಗಳಲ್ಲಿ ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಭಾರತ ಎಂದಿಗೂ ಒಪ್ಪಿಕೊಂಡಿಲ್ಲ, ಒಪ್ಪಿಕೊಳ್ಳುವುದೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವೆ ನೇರ ಮಿಲಿಟರಿ ಕಾರ್ಯಾಚರಣೆಗಳು ನಡೆದ ಸಂದರ್ಭದಲ್ಲಿ, ಭಾರತ ತನ್ನ ನಿಖರ ಪ್ರತೀಕಾರ ಕ್ರಮಗಳನ್ನು ಕೈಗೊಂಡಿದೆ ಮತ್ತು ಅವು ಉಗ್ರಗಾಮಿ ಶಿಬಿರಗಳನ್ನು ಮಾತ್ರ ಗುರಿಯಾಗಿಸಿಕೊಂಡಿದ್ದವು ಎಂದು ಅವರು ತಿಳಿಸಿದ್ದಾರೆ.

ಅಮೆರಿಕದ ಅಧ್ಯಕ್ಷ ಟ್ರಂಪ್, ಭಯೋತ್ಪಾದನೆ ವಿರುದ್ಧ ಭಾರತ ಕೈಗೊಂಡ ಕ್ರಮಗಳನ್ನು ಅರ್ಥಮಾಡಿಕೊಂಡು, ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಏಪ್ರಿಲ್ 22 ರಂದು ಪಹಲ್ಗಾಮ್ ಉಗ್ರರ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ನಂತರ ಭಾರತ 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯನ್ನು ಆರಂಭಿಸಿತು.

ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡ್ತೀವಿ - ಮೋದಿ

ಈ ಕಾರ್ಯಾಚರಣೆಯಲ್ಲಿ, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಪ್ರಮುಖ ಉಗ್ರಗಾಮಿ ಶಿಬಿರಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ ಮತ್ತು ಇದು ಪಾಕಿಸ್ತಾನದಿಂದ ಆರಂಭವಾದ ಡ್ರೋನ್ ದಾಳಿಗಳು, ಶೆಲ್ಲಿಂಗ್‌ಗಳಿಗೆ ಪ್ರತೀಕಾರ ಕ್ರಮವಾಗಿದೆ ಎಂದು ಹೇಳಲಾಗಿದೆ. 'ಗುಂಡಿನ ಉತ್ತರ ಗುಂಡಿನಿಂದಲೇ' ಎಂಬ ನೀತಿಯನ್ನು ಆಧರಿಸಿ ಭಾರತ ನಿಖರ, ಯೋಜಿತ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಿ ಮೋದಿ ವಿವರಿಸಿದ್ದಾರೆ. ಘರ್ಷಣೆ ಉಂಟಾದರೆ ಭಾರತ ಭಯೋತ್ಪಾದನೆಗೆ ತಕ್ಕ ಉತ್ತರ ನೀಡುತ್ತದೆ ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.ಭಯೋತ್ಪಾದನೆ ವಿರುದ್ಧದ ತನ್ನ ನಿಲುವು ದೃಢವಾಗಿದೆ ಎಂದು ಜಾಗತಿಕವಾಗಿ ಒತ್ತಿ ಹೇಳುತ್ತಿದೆ. 'ಆಪರೇಷನ್ ಸಿಂದೂರ್' ಕಾರ್ಯಾಚರಣೆ ಮುಂದುವರಿಯುತ್ತದೆ ಮತ್ತು ಭಾರತ ಇನ್ನು ಮುಂದೆ ಭಯೋತ್ಪಾದನೆಯನ್ನು ಪರೋಕ್ಷ ಯುದ್ಧವಾಗಿ ಅಲ್ಲ, ನೇರ ದಾಳಿಯಾಗಿಯೇ ಪರಿಗಣಿಸುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.