ಮೋದಿ ಅಧ್ಯಕ್ಷತೆಯಲ್ಲಿ G20 ಪೂರ್ವಭಾವಿ ಸಭೆ, ಅನಾರೋಗ್ಯದಲ್ಲೂ ಮಾಜಿ ಪ್ರಧಾನಿ ದೇವೇಗೌಡ ಭಾಗಿ!
ಜಿ20 ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದೆ. ಜಾಗತಿಕ ಮಟ್ಟದಲ್ಲಿ ಅತ್ಯುನ್ನತ ಜವಾಬ್ದಾರಿಯನ್ನು ಭಾರತ ಹೆಗಲಮೇಲೆ ಹೊತ್ತುಕೊಂಡಿದೆ. ಜಿ20 ಕುರಿತು ಪೂರ್ವಭಾವಿ ಸಭೆಯನ್ನು ಇಂದು ಆಯೋಜಿಸಲಾಗಿತ್ತು. ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಹಲವು ಗಣ್ಯರು ಪಾಲ್ಗೊಂಡಿದ್ದರು.
ನವದೆಹಲಿ(ಡಿ.05): ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಜಿ20 ಶೃಂಗಸಭೆಯ ಪೂರ್ವಭಾವಿ ಸಭೆ ನಡೆಸಲಾಗಿದೆ. ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ವಿಶೇಷ ಅಂದರೆ ಅನಾರೋಗ್ಯದ ನಡುವೆಯೂ ಮಾಜಿ ಪ್ರಧಾನಿ ದೇವೇಗೌಡ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡು ಎಲ್ಲರ ಗಮನಸೆಳೆದಿದ್ದಾರೆ. ಭಾರತ ಜಿ20 ಶೃಂಗಸಭೆಯ ಅಧ್ಯಕ್ಷೆ ವಹಿಸಿಕೊಂಡಿರುವ ಹಿನ್ನಲೆಯಲ್ಲಿ ಈ ವರ್ಷ ಆಯೋಜಿಸಲಿರುವ ಸಭೆಗಳು, ಕಾರ್ಯಕ್ರಮಗಳ ಕುರಿತು ರೂಪುರೇಶೆ ರಚಿಸಲು ಸರ್ವ ಪಕ್ಷ ಸಭೆ ಆಹ್ವಾನಿಸಲಾಗಿತ್ತು. ಈ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪಿಪಿಟಿ ಮೂಲಕ ಕಾರ್ಯಕ್ರಮಗಳ ವಿವರಗಳನ್ನು ಹೇಳಿದೆ.
ಪ್ರಧಾನಿ ನೇರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ವ್ಯವಾಹರ ಸಚಿವ ಜೈ ಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಸರ್ಕಾರದ ಪ್ರತಿನಿಧಿಗಳಾಗಿ ಪಾಲ್ಗೊಂಡಿದ್ದರು. ಇನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪಾಲ್ಗೊಂಡಿದ್ದರು.
ಭಾರತದ ಜಿ20 ಅಧ್ಯಕ್ಷ ಸ್ಥಾನ ಆರಂಭ, ಸರ್ವ ಸದ್ಯಸ್ಯರಿಗೆ ಟ್ಯಾಗ್ ಮಾಡಿ ಮೋದಿ ಟ್ವೀಟ್!
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದಾರೆ.
ಜಿ-20 ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಭಾರತಕ್ಕೆ ಬೆಂಬಲ ಸೂಚಿಸಿದ ದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ತಿಳಿಸಿದರು. ಈ ಸಭೆಗೂ ಮೊದಲೇ ಮೋದಿ ವಿಶ್ವದ ಹಲವು ನಾಯಕರ ಅಭಿನಂದನೆಗಳಿಗೆ ಟ್ವೀಟ್ ಮೂಲಕ ಪ್ರತಿ ನಾಯಕರಿಗೆ ಧನ್ಯವಾದ ಸೂಚಿಸಿದ್ದರು. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ, ಸ್ಪೇನ್‌ನ ಪ್ರಧಾನ ಮಂತ್ರಿ ಪೆಡ್ರೊ ಸ್ಯಾಂಚೆಝ್ , ಅಮೆರಿಕ ಅಧ್ಯಕ್ಷರಾದ ಜೋ ಬೈಡನ್ , ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಸೇರಿದಂತೆ ಹಲವು ನಾಯಕರಿಗೆ ಮೋದಿ ಧನ್ಯವಾದ ಹೇಳಿದ್ದಾರೆ.
Mann Ki Baat: ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ಬಹುದೊಡ್ಡ ಅವಕಾಶ: ಪ್ರಧಾನಿ ಮೋದಿ
ಇತ್ತ ರಾಜಸ್ಥಾನದ ಉದಯಪುರದಲ್ಲಿ ಜಿ20 ಶೃಂಗಸಭೆಯ ಮೊದಲ ಶೆರ್ಪಾ ಸಭೆ ಆಯೋಜಿಸಲಾಗಿತ್ತು. ಅಧ್ಯಕ್ಷತೆ ವಹಿಸಿಕೊಂಡ ಭಾರತದ ಅವಧಿಯಲ್ಲಿನ ಕಾರ್ಯಸೂಚಿಯನ್ನು ಈ ಸಭೆಯಲ್ಲಿ ಚರ್ಚಿಸಲಾಗಿದೆ. 4 ದಿನಗಳ ಕಾಲ ನಡೆಯಲಿರುವ ಸಭೆಯಲ್ಲಿ ಜಿ20 ದೇಶಗಳ ಪ್ರತಿನಿಧಿಗಳು ಮತ್ತು ಭಾರತ ವಿಶೇಷವಾಗಿ ಆಹ್ವಾನಿಸಿರುವ ನೈಜೀರಿಯಾ, ಬಾಂಗ್ಲಾದೇಶ, ಈಜಿಪ್‌್ಟ, ಮಾರಿಷಸ್, ನೆದರ್ಲೆಂಡ್, ಒಮಾನ್, ಸಿಂಗಾಪುರ, ಸ್ಪೇನ್ ಮತ್ತು ಯುಎಇ, ಏಷ್ಯನ್ ಡೆವಲಪ್‌ಮೆಂಟ್, ದ ಇಂಟರ್ ನ್ಯಾಷನಲ್ ಸೋಲಾರ್ ಅಲಯನ್ಸ್‌ನ ಪ್ರತಿನಿಧಿಗಳು ಭಾಗಿಯಾಗಿದ್ದಾರೆ. ಈ ವರ್ಷ ಭಾರತದ ಶೆರ್ಪಾ ಆಗಿರುವ ಅಮಿತಾಭ್ ಕಾಂತ್, ಈ ಸಭೆಯ ಅಧ್ಯಕ್ಷತೆ ವಹಿಸಿದ್ದು, ಮುಂದಿನ ಒಂದು ವರ್ಷಗಳ ಅವಧಿಯಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ಚರ್ಚಿಸಲಿರುವ ಕಾರ್ಯಸೂಚಿ, ವಿಷಯಗಳಿಗೆ ಈ 4 ದಿನಗಳ ಸಭೆ ಮುನ್ನುಡಿ ಬರೆಯಲಿದೆ.