ಬೆಂಗಳೂರು(ಮಾ.17): ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳನ್ನು ನಿಯಂತ್ರಿಸಲು ನೈಟ್‌ ಕಫä್ರ್ಯ, ಸಾರ್ವಜನಿಕ ಸಭೆ, ಸಮಾರಂಭಕ್ಕೆ ಕಡಿವಾಣ ಸೇರಿದಂತೆ ಇನ್ನಷ್ಟುಕಠಿಣ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಲಿರುವ ಮುಖ್ಯಮಂತ್ರಿಗಳೊಂದಿಗಿನ ವಿಡಿಯೋ ಸಂವಾದದಲ್ಲಿ ಸ್ಪಷ್ಟಚಿತ್ರಣ ಹೊರ ಬೀಳಲಿದೆ.

ಈ ವಿಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದ ತಂಡ ಪಾಲ್ಗೊಳ್ಳಲಿದ್ದು, ಪ್ರಧಾನಿ ನೀಡಲಿರುವ ಸಲಹೆ, ಸೂಚನೆಗಳ ಆಧಾರದ ಮೇಲೆ ಯಾವ್ಯಾವ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ.

ಸಭೆಯಲ್ಲಿ ಪ್ರಧಾನಿಗಳು ನೀಡುವ ಸಲಹೆ, ಸೂಚನೆ ನಂತರ ಸಂಜೆ ನಡೆಯುವ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಪ್ರಕಟಿಸುವ ಸಾಧ್ಯತೆಯಿದೆ.

ಬುಧವಾರ ಮಧ್ಯಾಹ್ನ 12.30ಕ್ಕೆ ಪ್ರಧಾನ ಮಂತ್ರಿ ಜೊತೆ ನಡೆಯುವ ವಿಡಿಯೋ ಸಂವಾದ ಸಭೆಯಲ್ಲಿ ರಾಜ್ಯದ ಪ್ರಸಕ್ತ ಕೋವಿಡ್‌ ಸ್ಥಿತಿಗತಿಗಳು, ಎರಡನೇ ಅಲೆಯ ಮುನ್ಸೂಚನೆ, ರಾಜ್ಯ ಕೈಗೊಂಡಿರುವ ನಿಯಂತ್ರಣ ಕ್ರಮಗಳ ಬಗ್ಗೆ ಪ್ರಧಾನಿ ಅವರಿಗೆ ಮುಖ್ಯಮಂತ್ರಿಗಳು ಮಾಹಿತಿ ನೀಡಲಿದ್ದಾರೆ.

ಎರಡನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಕೆಲವು ರಾಜ್ಯಗಳು ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಲಾಕ್‌ಡೌನ್‌, ನೈಟ್‌ ಕಫä್ರ್ಯ ಮುಂತಾದ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಆದರೆ ರಾಜ್ಯ ಇನ್ನೂ ಇಂತಹ ಕಠಿಣ ಕ್ರಮಗಳನ್ನು ಕೈಗೊಂಡಿಲ್ಲ. ಆದರೆ ಪರಿಸ್ಥಿತಿ ಬಿಗಡಾಯಿಸಿದರೆ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಮುಖ್ಯಮಂತ್ರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಎಚ್ಚರ ವಹಿಸಲು ಬಿಎಸ್‌ವೈ ಮನವಿ:

ಇದೇ ವೇಳೆ, ಕೊರೋನಾ ಅಪಾಯವನ್ನು ಕಿಂಚಿತ್ತೂ ನಿರ್ಲಕ್ಷಿಸಬೇಡಿ, ಈ ಉದಾಸೀನತೆ ನಿಮಗೆ ಮಾತ್ರವಲ್ಲ ನಿಮ್ಮ ಕುಟುಂಬ ಮತ್ತು ಸಮಗ್ರ ಸಮಾಜಕ್ಕೂ ಅಪಾಯ ತರಲಿದೆ. ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ, ಕೊರೋನಾ ವಿರುದ್ಧದ ಹೋರಾಟ ಯಶಸ್ವಿ ಆಗುವುದಿಲ್ಲ. ಎಲ್ಲ ನಿಯಮಗಳನ್ನು ಪಾಲಿಸೋಣ, ಕೊರೋನಾ ಮಣಿಸೋಣ ಎಂದು ಮಂಗಳವಾರ ಮುಖ್ಯಮಂತ್ರಿಗಳು ಟ್ವೀಟ್‌ ಮೂಲಕ ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.

ಪ್ರಧಾನಿ ಸಭೆಯ ಬಳಿಕ ತೀರ್ಮಾನ:

ಮಂಗಳವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಆರೋಗ್ಯ ಸಚಿವ ಸುಧಾಕರ್‌, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಕೋವಿಡ್‌ ಪ್ರಕರಣಗಳ ಏರಿಕೆಯ ಬಗ್ಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಮಾಲೋಚನೆ ನಡೆಸುತ್ತಾರೆ. ಆ ಬಳಿಕ ಬಹಿರಂಗ ಸಭೆ-ಸಮಾರಂಭಗಳಿಗೆ ಕಠಿಣ ನಿಯಮ ಜಾರಿಗೊಳಿಸುವ ವಿಚಾರ ನಿರ್ಧಾರ ಆಗಲಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕೋವಿಡ್‌ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಕೇರಳದಲ್ಲಿ ಕೂಡ ಏರಿಕೆಯಾಗುತ್ತಿದೆ, ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಇಲ್ಲದಿದ್ದರೆ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಮುಖ್ಯಮಂತ್ರಿಗಳು ನಾಗರಿಕರಿಗೆ ಸ್ಪಷ್ಟವಾದ ಸಂದೇಶ ಕೊಟ್ಟಿದ್ದಾರೆ. ಹಾಗಾಗಿ ಜನರು ಕಡ್ಡಾಯವಾಗಿ ಮಾಸ್ಕ್‌ ಧಾರಣೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಸುಧಾಕರ್‌ ತಿಳಿಸಿದ್ದಾರೆ.

ಇಂದಿನಿಂದ ದೊಡ್ಡ ದೊಡ್ಡ ಜಾಹಿರಾತು ಕೊಟ್ಟು ಜಾಗೃತಿ ಮೂಡಿಸುತ್ತೇವೆ. ಲಸಿಕೆ ವಿತರಣೆಯನ್ನು ಇನ್ನಷ್ಟುಹೆಚ್ಚಿಸಲಾಗುವುದು. ಇದುವರೆಗೂ 15 ಲಕ್ಷ ಜನರಿಗೆ ಕೋವಿಡ್‌ ಲಸಿಕೆ ನೀಡಿದ್ದೇವೆ. ಪ್ರತಿ ದಿನ ಪ್ರಾಥಮಿಕ ಸರ್ಕಾರಿ ಆಸ್ಪತ್ರೆಗಳಲ್ಲಿ 100 ಜನರಿಗೆ ಪರೀಕ್ಷೆ ಮಾಡಲೇಬೇಕು. ಜನರಲ್ ಆಸ್ಪತ್ರೆಗಳಲ್ಲಿ 500 ಜನರಿಗೆ ಲಸಿಕೆ ಗುರಿ ನೀಡಿದ್ದೇವೆ. ಪ್ರತಿ ಸೋಂಕಿತ ವ್ಯಕ್ತಿಗೆ 20 ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪರೀಕ್ಷೆ ಮಾಡಲೇಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

ಕಡ್ಡಾಯವಾಗಿ ಮಾಸ್ಕ್‌ ಧರಿಸಿ

ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಮುಖ್ಯಮಂತ್ರಿಗಳ ಜೊತೆ ಕೋವಿಡ್‌ ಏರಿಕೆ ಬಗ್ಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಮಾಲೋಚನೆ ನಡೆಸಲಿದ್ದಾರೆ. ಆ ಬಳಿಕ ಬಹಿರಂಗ ಸಭೆ-ಸಮಾರಂಭಗಳಿಗೆ ಕಠಿಣ ನಿಯಮ ಜಾರಿಗೊಳಿಸುವ ವಿಚಾರ ನಿರ್ಧಾರ ಆಗಲಿದೆ. ಜನರು ಕಡ್ಡಾಯವಾಗಿ ಮಾಸ್ಕ್‌ ಧಾರಣೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ.

- ಡಾ| ಕೆ. ಸುಧಾಕರ್‌ ಆರೋಗ್ಯ ಸಚಿವ