ಮಾಲ್ಡೀವ್ಸ್‌ಗೆ ಮತ್ತೊಂದು ಸ್ಟ್ರೋಕ್, ಶೀಘ್ರದಲ್ಲೇ ಲಕ್ಷದ್ವೀಪದಲ್ಲಿ ವಿಮಾನ ನಿಲ್ದಾಣ!
ಲಕ್ಷದ್ವೀಪದ ಪ್ರವಾಸೋದ್ಯಮ ಉತ್ತೇಜಿಸಲು ಪ್ರಧಾನಿ ಮೋದಿ ನೀಡಿದ ಭೇಟಿ ವಿಶ್ವದಲ್ಲೇ ಭಾರಿ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಮಾಲ್ಡೀವ್ಸ್ ಸಚಿವರ ನಿಂದನೆ, ಅಮಾನತುಗಳು ನಡೆದಿದೆ. ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಕೂಡ ಆರಂಭಗೊಂಡಿದೆ. ಇದರ ನಡುವೆ ಕೇಂದ್ರ ಸರ್ಕಾರ ಮತ್ತೊಂದು ಮಾಸ್ಟರ್‌ಸ್ಟ್ರೋಕ್ ನೀಡಲು ಸಜ್ಜಾಗಿದೆ.
ನವದೆಹಲಿ(ಜ.07) ಮಾಲ್ಡೀವ್ಸ್ ಹಾಗೂ ಭಾರತ ಇಂದು ವಿಶ್ವದೆಲ್ಲಡೆ ಭಾರಿ ಸದ್ದು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪ ಪ್ರವಾಸೋದ್ಯಮ ಉತ್ತೇಜಿಸಿದ ಬೆನ್ನಲ್ಲೇ ಮಾಲ್ಡೀವ್ಸ್ ಸಚಿವರ ನಿಂದನಾರ್ಹ ಹೇಳಿಕೆಗೆ ತಲೆದಂಡವಾಗಿದೆ. ಆದರೆ ಭಾರತದ ಆಕ್ರೋಶ ಕಡಿಮೆಯಾಗಿಲ್ಲ. ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನದ ಮೂಲಕ ಹೊಡೆತ ನೀಡಿದ್ದಾರೆ. ಇತ್ತ ಹಲವರು ಮಾಲ್ಡೀವ್ಸ್ ಪ್ರವಾಸ ರದ್ದುಗೊಳಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಕೇಂದ್ರ ಬಿಜೆಪಿ ಸರ್ಕಾರ ಮತ್ತೊಂದು ಮಾಸ್ಟರ್ ಸ್ಟ್ರೋಕ್‌ಗೆ ಸಜ್ಜಾಗಿದೆ. ಲಕ್ಷದ್ವೀಪದಲ್ಲಿ ಸುಸಜ್ಜಿತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದೆ.
ಮೋದಿ ಲಕ್ಷದ್ವೀಪಕ್ಕೆ ಬೇಟಿ ನೀಡಿದ ಬೆನ್ನಲ್ಲೇ ಗೂಗಲ್ ಸೇರಿದಂತೆ ಎಲ್ಲೆಡೆ ಲಕ್ಷದ್ವೀಪ ಟ್ರೆಂಡ್ ಆಗಿದೆ. ಕೇರಳದಿಂದ ಲಕ್ಷದ್ಪೀಪಕ್ಕೆ ತೆರಳಲು ವ್ಯವಸ್ಥೆ ಇದೆ. ಆದರೆ ದೇಶ ವಿದೇಶಗಳಿಂದ ಪ್ರವಾಸಿಗರು ನೇರವಾಗಿ ಲಕ್ಷದ್ವೀಪಕ್ಕೆ ಆಗಮಿಸಲು ನೆರವಾಗುವ ವಿಮಾನ ನಿಲ್ದಾಣವಿಲ್ಲ. ಇದೀಗ ಲಕ್ಷದ್ವೀಪದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಕುರಿತು ಶೀಘ್ರದಲ್ಲೇ ನಿರ್ಧಾರ ಘೋಷಿಸಲಾಗುತ್ತದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ ಹೇಳಿದ್ದಾರೆ.
ಮಾಲ್ಡೀವ್ಸ್ ಕಟ್ಟಿ ಬೆಳೆಸಲು ನೆರವಾದ ಬಾಲಿವುಡ್ ಇದೀಗ ತಿರುಗಿಬಿದ್ದಿದೆ, ಮಾಜಿ ಅಧ್ಯಕ್ಷ ಬೇಸರ!
ಲಕ್ಷದ್ವೀಪದಲ್ಲಿ ಶೀಘ್ರದಲ್ಲೇ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಪ್ರವಾಸಿಗರು ನ್ಯೂಜಿಲೆಂಡ್, ಸ್ವಿಟ್ಜರ್‌ಲೆಂಡ್ ಅಂತಾ ಸುತ್ತಾಡಬೇಕಿಲ್ಲ. ನಮ್ಮದೇ ಲಕ್ಷದ್ವೀಪ ಅದಕ್ಕಿಂತ ಸುಂದರವಾಗಿದೆ. ಭಾರತೀಯರೇ ಲಕ್ಷದ್ವೀಪದ ರಾಯಭಾರಿಗಳು ಎಂದು ಜಿ ಕಿಶನ್ ರೆಡ್ಡಿ ಹೇಳಿದ್ದಾರೆ. ಕೇಂದ್ರ ಸರ್ಕಾರ ಲಕ್ಷದ್ವೀಪ ಸೇರಿದಂತೆ ಭಾರತದ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ.
ಲಕ್ಷದ್ವೀಪ ಪ್ರವಾಸೋದ್ಯಮ ಉತ್ತೇಜಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಹಾಗೂ ಭಾರತವನ್ನು ಮಾಲ್ಡೀವ್ಸ್ ಸಚಿವರು ನಿಂದಿಸಿದ್ದರು. ಆದರೆ ಆಕ್ರೋಶ, ಬಾಯ್ಕಾಟ್‌ಗೆ ಬೆದರಿದ ಸರ್ಕಾರ ಮೂವರು ಸಚಿವರನ್ನು ವಜಾ ಮಾಡಿದೆ. ಭಾರತದ ಸ್ನೇಹಿತ ರಾಷ್ಟ್ರವಾಗಿದ್ದ ಮಾಲ್ಡೀವ್ಸ್‌ನಲ್ಲಿ ಇತ್ತೀಚೆಗೆ ಹೊಸ ಸರ್ಕಾರ ರಚನೆಯಾಗಿದ್ದು, ಅದು ಭಾರತವನ್ನು ಬದಿಗೊತ್ತಿ ಚೀನಾದತ್ತ ವಾಲುತ್ತಿದೆ. ಜೊತೆಗೆ, ತನ್ನ ನೆಲದಿಂದ ಸೇನೆ ಹಿಂಪಡೆಯುವಂತೆ ಭಾರತಕ್ಕೆ ಸೂಚಿಸಿದೆ. ಪ್ರವಾಸೋದ್ದಿಮೆಯ ಮೇಲೆ ಆರ್ಥಿಕತೆಯನ್ನು ಕಟ್ಟಿಕೊಂಡಿರುವ ಮಾಲ್ಡೀವ್ಸ್‌ಗೆ ಪ್ರತಿ ವರ್ಷ ಸುಮಾರು 3 ಲಕ್ಷ ಭಾರತೀಯರು ತೆರಳುತ್ತಾರೆ. ಮಾಲ್ಡೀವ್ಸ್‌ಗೆ ಭೇಟಿ ನೀಡುವ ಹೆಚ್ಚಿನ ವಿದೇಶಿ ಪ್ರವಾಸಿಗರು ಭಾರತೀಯರಾಗಿದ್ದಾರೆ. ಇದೀಗ ಕೇಂದ್ರ ಬಿಜೆಪಿ ಸರ್ಕಾರ ಮಾಲ್ಡೀವ್ಸ್‌ಗೆ ಒಂದರ ಮೇಲೊಂದರಂತೆ ಸ್ಟ್ರೋಕ್ ನೀಡುತ್ತಿದೆ.
ಆಕ್ರೋಶಕ್ಕೆ ಬೆಚ್ಚಿದ ಮಾಲ್ಡೀವ್ಸ್ ಸರ್ಕಾರ, ಭಾರತ-ಪ್ರಧಾನಿ ಮೋದಿ ನಿಂದಿಸಿದ ಸಚಿವರು ವಜಾ!