ರಾಮ ಮಂದಿರ ಪ್ರಾಣಪ್ರತಿಷ್ಠೆಗಾಗಿ ಪ್ರಧಾನಿ ನರೇಂದ್ರ ಮೋದಿ ರಾಮಜನ್ಮಭೂಮಿಯ ರಾಮ ಮಂದಿರಕ್ಕೆ ಆಗಮಿಸಿದ್ದಾರೆ.  

ಆಯೋಧ್ಯೆ(ಜ.22) ಭಗವಾನ್ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆಗಾಗಿ ಪ್ರಧಾನಿ ನರೇಂದ್ರ ಮೋದಿ ಇದೀಗ ರಾಮಜನ್ಮಭೂಮಿಗೆ ಆಗಮಿಸಿದ್ದಾರೆ. ವಾಲ್ಮಿಕಿ ಮಹರ್ಷಿ ವಿಮಾನ ನಿಲ್ದಾಣದಿಂದ ಹೆಲಿಪ್ಯಾಡ್ ಮೂಲಕ ರಾಮಜನ್ಮಭೂಮಿಗೆ ಆಗಮಿಸಿದ ಮೋದಿ, ಭವ್ಯ ರಾಮ ಮಂದಿರ ಪ್ರವೇಶಿಸಿದ್ದಾರೆ.ಪ್ರಧಾನಿ ಮೋದಿ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬೆಳ್ಳಿ ಛಾತ್ರ ಹಾಗೂ ಕೆಂಪು ಪೋಷಾಕು ಹಿಡಿದು ರಾಮ ಮಂದಿರಕ್ಕೆ ಆಗಮಿಸಿದ ಮೋದಿ, ರಾಮಲಲ್ಲಾಗೆ ಅರ್ಪಣೆ ಮಾಡಲಿದ್ದಾರೆ. 

ರಾಮ ಮಂದಿರ ಗರ್ಭಗುಡಿಗೆ ತೆರಳಿದ ಮೋದಿ, ಬೆಳ್ಳಿ ಛಾತ್ರ ಹಾಗೂ ವಸ್ತ್ರ ರಾಮಲಲ್ಲಾಗೆ ಅರ್ಪಿಸಿದ್ದಾರೆ. ಬಳಿಕ ಪ್ರಾಣಪ್ರತಿಷ್ಠೆ ಪೂಜಾ ವಿಧಿವಿಧಾನಗಳು ಆರಂಭಗೊಂಡಿತು. ಯಜಮಾನನ ಸ್ಥಾನದಲ್ಲಿ ನಿಂತು ಪ್ರಧಾನಿ ಮೋದಿ ರಾಮ ಮಂದಿರ ಪ್ರಾಣಪ್ರತಿಷ್ಠೆ ಪೂಜಾ ಕೈಂಕರ್ಯಗಳು ಮಾಡಿದ್ದಾರೆ.

ರಾಮ ಮಂದಿರ ಗರ್ಭಗುಡಿಯಲ್ಲಿ ಪ್ರತಿಪ್ಠಾಪಿಸಿರುವ ರಾಮ ಲಲ್ಲಾ ವಿಗ್ರಹಕ್ಕೆ ಪ್ರಧಾನಿ ಮೋದಿ ತಮ್ಮ ಅಮೃತ ಹಸ್ತದಿಂದ ಪ್ರಾಣಪ್ರತಿಷ್ಠೆ ನೆರವೇರಿಸಲಿದ್ದಾರೆ. ಈ ವೇಳೆ ಗರ್ಭಗುಡಿಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿ ಬೆನ್ ಪಟೇಲ್, ಆಯೋಧ್ಯೆ ಅರ್ಚರು ಇರಲಿದ್ದಾರೆ. 

12.20 ರಿಂದ 12.50ರ ನಡುವೆ ರಾಮ ಲಲ್ಲಾ ಪ್ರಾಣಪ್ರತಿಷ್ಠೆ ಹಾಗೂ ಪೂಜಾ ವಿಧಿವಿಧಾನಗಳು ನಡೆಯಲಿದೆ. ಬಳಿಕ ಪ್ರಧಾನಿ ಮೋದಿ 1.15ರ ವೇಳೆಗೆ ಅಯೋಧ್ಯೆಯಲ್ಲಿ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಗಣ್ಯರು ಹಾಗೂ ದೇಶದ ಜನತೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಸಾರ್ವಜನಿಕ ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ಕುಬೇರ ಟೀಲಾದಲ್ಲಿ ಜಟಾಯು ಪ್ರತಿಮೆ ದರ್ಶನ ಮಾಡಿ ಶಿವನಿಗೆ ವಿಶೇಷ ಪೂಜೆ ಮಾಡಲಿದ್ದಾರೆ. ಸಂಜೆ 4 ಗಂಟೆ ವೇಳೆಗೆ ಆಯೋಧ್ಯೆಯ ವಿಮಾನ ನಿಲ್ದಾಣದಿಂದ ದೆಹಲಿಗೆ ಮರಳಲಿದ್ದಾರೆ.