ಸ್ವಹಿತಾಸಕ್ತಿಗಳ ದಹನಕ್ಕೆ ದಸರೆಯು ನಾಂದಿ ಹಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕರೆ ನೀಡಿದ್ದಾರೆ. ಹಾಗೂ ಇದೇ ವೇಳೆ 10 ಸಂಕಲ್ಪಗಳನ್ನು ಕೈಗೊಳ್ಳುವಂತೆ ಜನರಿಗೆ ಕರೆ ನೀಡಿದ್ದಾರೆ.

ನವದೆಹಲಿ (ಅಕ್ಟೋಬರ್ 25, 2023): ದೇಶಕ್ಕೆ ಹಾನಿ ಮಾಡುತ್ತಿರುವ ಜಾತೀಯತೆ ಮತ್ತು ಪ್ರಾದೇಶಿಕತೆಯನ್ನು ಬೇರು ಸಮೇತ ಕೀಳಬೇಕು. ಸ್ವಹಿತಾಸಕ್ತಿಗಳ ದಹನಕ್ಕೆ ದಸರೆಯು ನಾಂದಿ ಹಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕರೆ ನೀಡಿದ್ದಾರೆ ಹಾಗೂ ಇದೇ ವೇಳೆ 10 ಸಂಕಲ್ಪಗಳನ್ನು ಕೈಗೊಳ್ಳುವಂತೆ ಜನರಿಗೆ ಕರೆ ನೀಡಿದ್ದಾರೆ.

ಇಲ್ಲಿನ ದ್ವಾರಕಾ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ರಾವಣ ದಹನ ಎಂಬುದು ಕೇವಲ ಪ್ರತಿಕೃತಿಯ ದಹನವಲ್ಲ. ಭಾರತ ಮಾತೆಯನ್ನು ಧರ್ಮ ಮತ್ತು ಪ್ರಾದೇಶಿಕತೆಯ ಹೆಸರಲ್ಲಿ ಭಾಗ ಮಾಡುತ್ತಿರುವುದರ ನಾಶವೂ ಸಹ ಆಗಿದೆ. ದೇಶಕ್ಕೆ ಹಾನಿ ತಂದೊಡ್ಡುತ್ತಿರುವ ಜಾತೀಯತೆ ಮತ್ತು ಪ್ರಾದೇಶಿಕತೆಯನ್ನು ಬೇರು ಸಮೇತ ಕಿತ್ತುಹಾಕಬೇಕು. ದಸರಾ ಹಬ್ಬ ಎನ್ನುವುದು ಕೆಟ್ಟದ್ದರ ಮೇಲೆ ಒಳ್ಳೆಯದು ವಿಜಯ ಸಾಧಿಸುವ ದಿನ. ಈ ವೇಳೆ ಸ್ವಹಿತಾಸಕ್ತಿಯ ದಹನವೂ ಆಗಬೇಕು’ ಎಂದು ವಿಪಕ್ಷಗಳ ಹೆಸರೆತ್ತದೆ ಪರೋಕ್ಷವಾಗಿ ಕುಟುಕಿದರು.

ಇದನ್ನು ಓದಿ: ಪ್ರಧಾನಿ ಮೋದಿ ಜತೆ ವೇದಿಕೆ ಹಂಚ್ಕೊಳ್ಳಲ್ಲ: ಮೈತ್ರಿ ಪಕ್ಷದ ಸಿಎಂ ಸಡ್ಡು

‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವುದಕ್ಕೆ ನಾವೆಲ್ಲರೂ ಸಾಕ್ಷಿಯಾಗುತ್ತಿದ್ದೇವೆ. ಶತಮಾನಗಳ ಕಾಲ ಕಾದ ಬಳಿಕ ಇದು ನೆರವೇರುತ್ತಿದೆ. ಇನ್ನು ಕೆಲವು ದಿನಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡು ಜನರ ತಾಳ್ಮೆಗೆ ಜಯ ತಂದುಕೊಡಲಿದೆ’ ಎಂದು ಹೇಳಿದರು.

10 ಸಂಕಲ್ಪ ಮಾಡಿ:
ಇನ್ನು ಇದೇ ವೇಳೆ, ನೀರಿನ ಸಂರಕ್ಷಣೆ, ಡಿಜಿಟಲ್‌ ವಹಿವಾಟಿಗೆ ಪ್ರೋತ್ಸಾಹ, ಸ್ವಚ್ಛತೆ, ವೋಕಲ್‌ ಫಾರ್‌ ಲೋಕಲ್‌: ಭಾರತದಲ್ಲಿ ತಯಾರಿಸಿದ ವಸ್ತುಗಳ ಖರೀದಿ, ಶ್ರೇಷ್ಠ ಕೆಲಸಗಳನ್ನು ಮಾಡುವುದು, ವಿದೇಶ ಪ್ರವಾಸಕ್ಕೂ ಮುನ್ನ ಭಾರತದಲ್ಲಿ ಪ್ರವಾಸ ಕೈಗೊಳ್ಳುವುದು, ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವುದು, ದೈನಂದಿನ ಊಟದಲ್ಲಿ ಸಿರಿಧಾನ್ಯಗಳ ಬಳಕೆ ಮಾಡುವುದು, ಯೋಗ ಮತ್ತು ಆಟಗಳ ಮೂಲಕ ಫಿಟ್‌ನೆಸ್‌ ಜೀವನದ ಭಾಗ ಮಾಡಿಕೊಳ್ಳುವುದು ಮತ್ತು ಬಡ ಕುಟುಂಬದ ಸಾಮಾಜಿಕ ಮತ್ತು ಆರ್ಥಿಕ ಜೀವನಕ್ಕೆ ನೆರವು ನೀಡುವ 10 ಸಂಕಲ್ಪಗಳನ್ನು ಕೈಗೊಳ್ಳುವಂತೆ ಕರೆ ನೀಡಿದರು.

ಇದನ್ನೂ ಓದಿ: ಕಲ್ಯಾಣ ಯೋಜನೆಗಳ ಪೂರ್ಣ ಜಾರಿಗೆ ಮೋದಿ 6 ತಿಂಗಳ ಡೆಡ್‌ಲೈನ್: ಚುನಾವಣೆಗೂ ಮುನ್ನ ದೇಶದಲ್ಲಿ ಬೃಹತ್‌ ಆಂದೋಲನ

ಸಮಾರಂಭದಲ್ಲಿ ಮೋದಿ ಅವರಿಗೆ ಶಾಲು ಹೊದೆಸಿ, ದಂಡವನ್ನು ನೀಡಿ ಸಾಂಪ್ರದಾಯಿಕವಾಗಿ ವೇದಿಕೆಗೆ ಸ್ವಾಗತಿಸಲಾಯಿತು. ವೇದಿಕೆಯ ಮೇಲಿದ್ದ ರಾಮ ಪಾತ್ರಧಾರಿಗೆ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದರು. ಬಳಿಕ ‘ಸೀತಾ ರಾಮಚಂದ್ರನಿಗೆ ಜಯವಾಗಲಿ’ ಎಂದು ಹೇಳುವ ಮೂಲಕ ಭಾಷಣ ಆರಂಭಿಸಿದ ಅವರು ದೇಶದ ಜನರಿಗೆ ನವರಾತ್ರಿಯ ಶುಭಾಶಯ ತಿಳಿಸಿದರು.

ಇದನ್ನೂ ಓದಿ: ಹಣ, ಉಡುಗೊರೆಗಾಗಿ ಸಂಸತ್ತಿನಲ್ಲಿ ಪ್ರಶ್ನೆ ಮಾಡ್ತಿದ್ದ ಟಿಎಂಸಿ ಸಂಸದೆ? ಏನಿದು ವಿವಾದ..? ಇಲ್ಲಿದೆ ವಿವರ..