ಸರ್ಕಾರಿ ಕಲ್ಯಾಣ ಕಾರ್ಯಕ್ರಮಗಳಿಗೆ ಪರಿಪೂರ್ಣ ಪ್ರಮಾಣದಲ್ಲಿ ಫಲಾನುಭವಿಗಳನ್ನು ನೋಂದಣಿ ಮಾಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು 6 ತಿಂಗಳ ಗಡುವು ಹಾಕಿಕೊಂಡಿದ್ದಾರೆ. ಇದಕ್ಕಾಗಿ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಎಂಬ ಮೆಗಾ ಅಭಿಯಾನ ಆರಂಭಿಸಲು ಮುಂದಾಗಿದ್ದಾರೆ.

ನವದೆಹಲಿ (ಅಕ್ಟೋಬರ್ 22, 2023): ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಕಲ್ಯಾಣ ಕಾರ್ಯಕ್ರಮಗಳಿಗೆ ಪರಿಪೂರ್ಣ ಪ್ರಮಾಣದಲ್ಲಿ ಫಲಾನುಭವಿಗಳನ್ನು ನೋಂದಣಿ ಮಾಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು 6 ತಿಂಗಳ ಗಡುವು ಹಾಕಿಕೊಂಡಿದ್ದಾರೆ. ಇದಕ್ಕಾಗಿ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಎಂಬ ಮೆಗಾ ಅಭಿಯಾನವನ್ನೇ ಆರಂಭಿಸಲು ಮುಂದಾಗಿದ್ದಾರೆ.

ಈ ಯಾತ್ರೆ ದೇಶಾದ್ಯಂತ ಇರುವ 2.7 ಲಕ್ಷ ಪಂಚಾಯಿತಿಗಳಿಗೆ ತೆರಳಲಿದ್ದು, ಅರ್ಹ ಫಲಾನುಭವಿಗಳನ್ನು ತಲುಪಿ ಸರ್ಕಾರಿ ಯೋಜನೆಗಳಿಗೆ ನೋಂದಣಿ ಮಾಡಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇದನ್ನು ಓದಿ: ಹಣ, ಉಡುಗೊರೆಗಾಗಿ ಸಂಸತ್ತಿನಲ್ಲಿ ಪ್ರಶ್ನೆ ಮಾಡ್ತಿದ್ದ ಟಿಎಂಸಿ ಸಂಸದೆ? ಏನಿದು ವಿವಾದ..? ಇಲ್ಲಿದೆ ವಿವರ..

ದೀಪಾವಳಿ ಹಬ್ಬದ ಬಳಿಕ ಈ ಯಾತ್ರೆ ಆರಂಭವಾಗಲಿದ್ದು, ಹಲವು ವಾರಗಳ ಕಾಲ ಮುಂದುವರಿಯಲಿದೆ. ಫಲಾನುಭವಿಗಳನ್ನು ತಲುಪುವ ಉದ್ದೇಶದಿಂದ ವಿಶೇಷ ವಿನ್ಯಾಸದ ರಥಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ವಿವರಿಸಿವೆ.

ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಲಾಭ ಪಡೆಯಲು ಅರ್ಹರಿದ್ದರೂ, ಅದರಿಂದ ವಂಚಿತರಾಗಿರುವ ಫಲಾನುಭವಿಗಳನ್ನು ಸಂಪರ್ಕಿಸಿ, ಅವರಿಗೆ ಪ್ರಯೋಜನ ಸಿಗುವಂತೆ ಮಾಡಲು ಪರಿಶ್ರಮ ಹಾಕುವಂತೆ ಸಂಪುಟ ಸಹೋದ್ಯೋಗಿಗಳಿಗೆ ಇತ್ತೀಚೆಗಷ್ಟೇ ಸಚಿವ ಸಂಪುಟ ಸಭೆಯಲ್ಲಿ ಮೋದಿ ಸೂಚನೆ ನೀಡಿದ್ದರು.

ಇದನ್ನೂ ಓದಿ: ಜಗತ್ತು ಭಯೋತ್ಪಾದನೆಯಿಂದ ನಲುಗುತ್ತಿದ್ರೂ ಒಮ್ಮತ ಸಾಧ್ಯವಾಗಿಲ್ಲ: ಪ್ರಧಾನಿ ಮೋದಿ ಬೇಸರ

ಮತ್ತೊಂದೆಡೆ, ಕಲ್ಯಾಣ ಕಾರ್ಯಕ್ರಮಗಳಿಗೆ ಫಲಾನುಭವಿಗಳ ಪರಿಪೂರ್ಣ ನೋಂದಣಿ ತ್ವರಿತಗೊಳಿಸುವ ಮಹತ್ವವನ್ನು ಅಧಿಕಾರಿಗಳ ಸಭೆಯಲ್ಲಿ ಒತ್ತಿ ಹೇಳಿದ್ದರು. ಮುಂದಿನ ಆರು ತಿಂಗಳಲ್ಲಿ ಸರ್ಕಾರದ ಎಲ್ಲ ಯೋಜನೆಗಳೂ ಪರಿಪೂರ್ಣತೆಯ ಮಟ್ಟ ತಲುಪಬೇಕು ಎಂದು ಅವರು ಗಡುವು ವಿಧಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಕೇಂದ್ರದ ಮೆಗಾ ಅಭಿಯಾನ

  • ಕೇಂದ್ರ ಸರ್ಕಾರದ ಎಲ್ಲಾ ಕಲ್ಯಾಣ ಯೋಜನೆಗಳಿಗೆ ಪೂರ್ಣ ಪ್ರಮಾಣದಲ್ಲಿ ಫಲಾನುಭವಿಗಳನ್ನು ನೋಂದಣಿ ಮಾಡಿಸಲು ಕ್ರಮ
  • 6 ತಿಂಗಳ ಕಾಲ ವಿಕಸಿತ ಭಾರತ ಸಂಕಲ್ಪ ಯಾತ್ರೆ ಮೂಲಕ ಅಧಿಕಾರಿಗಳು ಜನರ ಬಳಿಗೆ ತೆರಳಿ ಯೋಜನೆಗಳಿಗೆ ನೋಂದಣಿ ಮಾಡಿಸಬೇಕು
  • ದೇಶದಲ್ಲಿರುವ ಎಲ್ಲಾ 2.7 ಲಕ್ಷ ಗ್ರಾಮ ಪಂಚಾಯಿತಿಗಳ ಮೂಲಕ ಕಲ್ಯಾಣ ಯೋಜನೆಗಳಿಗೆ ಮೆಗಾ ನೋಂದಣಿ ಅಭಿಯಾನ
  • ಕಲ್ಯಾಣಿ ಯೋಜನೆಗಳ ಜಾರಿ ಅಭಿಯಾನಕ್ಕೆಂದೇ ವಿಶೇಷ ರಥದ ವಿನ್ಯಾಸ ಮಾಡಲು ಮೋದಿ ಸೂಚನೆ

ಇದನ್ನು ಓದಿ: ಸಂಕಷ್ಟದ ಸಮಯದಲ್ಲಿ ಭಾರತ ಇಸ್ರೇಲ್ ಜತೆ ದೃಢವಾಗಿ ನಿಂತಿದೆ: ಇಸ್ರೇಲ್‌ ಪ್ರಧಾನಿಗೆ ಮೋದಿ ಅಭಯ

ಯಾವ್ಯಾವ ಯೋಜನೆಗೆ ಅನ್ವಯ?:
ಪ್ರಧಾನಮಂತ್ರಿ ಆವಾಸ್‌ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌, ಪಿಎಂ-ಕಿಸಾನ್‌, ಫಸಲ್‌ ಬಿಮಾ ಯೋಜನೆ, ಪೋಷಣ ಅಭಿಯಾನ, ಉಜ್ವಲಾ ಯೋಜನೆ, ಆಯುಷ್ಮಾನ್‌ ಭಾರತ್‌, ಜನೌಷಧಿ ಯೋಜನೆ, ಗರೀಬ್‌ ಕಲ್ಯಾಣ್‌ ಅನ್ನಯೋಜನೆ, ಕೌಶಲ್ಯಾಭಿವೃದ್ಧಿ ಯೋಜನೆ, ಇತ್ತೀಚೆಗೆ ಆರಂಭವಾಗಿರುವ ವಿಶ್ವಕರ್ಮ ಯೋಜನೆಗಳಿಗೆ ಪರಿಪೂರ್ಣವಾಗಿ ಫಲಾನುಭವಿಗಳನ್ನು ಅಭಿಯಾನದ ಸಂದರ್ಭದಲ್ಲಿ ನೋಂದಣಿ ಮಾಡಿಸಲಾಗುತ್ತದೆ.

ಯೋಜನೆಗಳಿಗೆ ಫಲಾನುಭವಿಗಳನ್ನು ಪರಿಪೂರ್ಣ ಪ್ರಮಾಣದಲ್ಲಿ ನೋಂದಣಿ ಮಾಡಿಸುವುದರಿಂದ ತಾರತಮ್ಯ ನಿವಾರಣೆಯಾಗಲಿದೆ. ಪ್ರತಿಯೊಬ್ಬರಿಗೂ ಕಲ್ಯಾಣ ಕಾರ್ಯಕ್ರಮ ತಲುಪಿದಂತಾಗುತ್ತದೆ ಎಂದು ಮೋದಿ ಅವರು ಹೇಳುತ್ತಲೇ ಬಂದಿದ್ದಾರೆ.