ನವದೆಹಲಿ (ಮಾ.01): ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವ ಹೊತ್ತಿನಲ್ಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ, ತಮಿಳು ಭಾಷೆಯನ್ನು ಬಹುವಾಗಿ ಹೊಗಳಿದ್ದಾರೆ. ಜೊತೆಗೆ, ತಮಿಳು ಭಾಷೆ ಕಲಿಯಲಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ‘ಮನ್‌ ಕೀ ಬಾತ್‌’ನಲ್ಲಿ ಮಾತನಾಡಿ ‘ಇತ್ತೀಚೆಗೆ ನನಗೆ ಒಬ್ಬರು ಪ್ರಶ್ನೆ ಕೇಳಿದರು. ‘ಪ್ರಧಾನಿಯಾಗಿ ಹಾಗೂ ಮುಖ್ಯಮಂತ್ರಿಯಾಗಿ ನೀವು ಯಾವುದಾದರೂ ಅವಕಾಶ ಕಳೆದುಕೊಂಡಿದ್ದೀರಾ?’ ಎಂಬುದು ಆ ಪ್ರಶ್ನೆಯಾಗಿತ್ತು. ಸಣ್ಣ ಪ್ರಶ್ನೆಯಾದರೂ ನನ್ನನ್ನು ಅದು ವಿಚಲಿತಗೊಳಿಸಿತು. ಅದಕ್ಕೆ ನಾನು, ‘ವಿಶ್ವದ ಅತ್ಯಂತ ಪ್ರಾಚೀನ ಭಾಷೆಯಾದ ತಮಿಳು ಕಲಿಯಲು ನನಗೆ ಆಗಲಿಲ್ಲ. ಆ ನಿಟ್ಟಿನಲ್ಲಿ ನಾನು ಸಾಕಷ್ಟುಪ್ರಯತ್ನ ಮಾಡಲಿಲ್ಲ’ ಎಂದು ಉತ್ತರಿಸಿದೆ’ ಎಂದರು. ಇದೇ ವೇಳೆ, ‘ತಮಿಳು ಅತ್ಯಂತ ಸುಂದರ ಭಾಷೆ’ ಎಂದು ಬಣ್ಣಿಸಿದರು.

ಮೋದಿ ಸರ್ಕಾರದಿಂದ ಭರ್ಜರಿ ಕೊಡುಗೆ : ಬಡ ಕುಟುಂಬಕ್ಕೆ ಉಚಿತ ಎಲ್‌ಪಿಜಿ ...

ಇದಾದ ಕೆಲವು ಗಂಟೆಗಳಲ್ಲೇ ತಮಿಳುನಾಡಿನ ವಿಲ್ಲುಪುರಂನಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅಮಿತ್‌ ಶಾ, ‘ನಾನು ನಿಮ್ಮೊಂದಿಗೆ ವಿಶ್ವದ ಅತಿ ಪುರಾತನ ಮತ್ತು ಭಾರತದ ಅತ್ಯಂತ ಸವಿಯಾದ ಭಾಷೆಯಾದ ತಮಿಳುನಲ್ಲಿ ಮಾತನಾಡಲಾಗದ್ದಕ್ಕೆ ಬೇಸರವಾಗುತ್ತಿದೆ. ಇದಕ್ಕಾಗಿ ನಾನು ನಿಮ್ಮ ಕ್ಷಮೆ ಕೋರುತ್ತೇನೆ’ ಎನ್ನುವ ಮೂಲಕ ತಮಿಳುನಾಡಿನ ಮತದಾರರ ಮನಗೆಲ್ಲುವ ಯತ್ನ ಮಾಡಿದರು.