* ಉ.ಪ್ರ. ಕ್ರಿಮಿನಲ್‌ಗಳ ಆಸ್ತಿಗೆ ಜೆಸಿಬಿ ಹಚ್ಚಿದ್ದ ಯೋಗಿ* ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆ* ಉ.ಪ್ರ. ಸಿಎಂ, ಸಚಿವರ ಸಭೆಯಲ್ಲಿ ಪ್ರಧಾನಿ ಶ್ಲಾಘನೆ* ವಿರಮಿಸದೇ 2024ರ ಚುನಾವಣೆ ಸಿದ್ಧತೆಗೆ ಸೂಚನೆ

ನವದೆಹಲಿ(ಮೇ.17): ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದಲ್ಲಿ ಕ್ರಿಮಿನಲ್‌ಗಳ ವಿರುದ್ಧ ಕೈಗೊಂಡ ‘ಬುಲ್ಡೋಜರ್‌ ಅಭಿಯಾನ’ಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ‘ಈಗ ವಿರಮಿಸುವ ಸಮಯವಲ್ಲ. 2024ಕ್ಕೆ (ಲೋಕಸಭೆ ಚುನಾವಣೆಗೆ) ಸಿದ್ಧತೆ ಆರಂಭಿಸಿ’ ಎಂದು ಸೂಚನೆ ನೀಡಿದ್ದಾರೆ.

ನೇಪಾಳ ಪ್ರವಾಸದಿಂದ ಮರಳಿದ ಕೂಡಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಾಗೂ ಅವರ ಸಚಿವ ಸಂಪುಟದ ಜತೆ ದಿಲ್ಲಿಯಲ್ಲಿ ಸಭೆ ನಡೆಸಿದ ಮೋದಿ, ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಸುಧಾರಿಸಿದೆ ಎಂದು ಅಭಿನಂದಿಸಿದರು.

ಇತ್ತೀಚೆಗೆ ಯೋಗಿ ಸರ್ಕಾರ ಕ್ರಿಮಿನಲ್‌ಗಳ ಆಸ್ತಿಪಾಸ್ತಿ ನಾಶಕ್ಕೆ ಬುಲ್ಡೋಜರ್‌ಗಳನ್ನು ಬಳಸಿತ್ತು ಹಾಗೂ ಇತರ ಕೆಲ ಬಿಜೆಪಿ ರಾಜ್ಯಗಳು ಅದನ್ನು ಅನುಸರಿಸಿದ್ದವು ಎಂಬುದು ಗಮನಾರ್ಹ.

ಈ ನಡುವೆ, ಕ್ಷೇತ್ರದಲ್ಲೇ ಹೆಚ್ಚು ಕಾಲ ಕಳೆದು ಜನರೊಂದಿಗೆ ಹೆಚ್ಚು ಬೆರೆಯಬೇಕು. ಸರ್ಕಾರದ ಯೋಜನೆಗಳು ಬಡವರನ್ನು ತಲುಪುವಂತೆ ನೋಡಿಕೊಳ್ಳಬೇಕು. ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯ ಇರಬೇಕು ಎಂದು ಸೂಚಿಸಿದರು ಎಂದು ಮೋದಿ ತಿಳಿದುಬಂದಿದೆ.

ರಾಮನ ಬಳಿ ಬಿಲ್ಲು, ಯೋಗಿ ಬಳಿ ಬುಲ್ಡೋಜರ್‌: ಸಾಕ್ಷಿ ಮಹಾರಾಜ್‌

‘ಭಗವಾನ್‌ ರಾಮನ ಬಳಿ ಧನಸ್ಸು ಹಾಗೂ ಕೃಷ್ಣನ ಬಳಿ ಸುದರ್ಶನ ಚಕ್ರವಿದ್ದಂತೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಬಳಿ ಮಾಫಿಯಾಗಳ ಅಕ್ರಮ ಆಸ್ತಿಯನ್ನು ನೆಲಸಮ ಮಾಡಲು ಬುಲ್ಡೋಜರ್‌ ಇದೆ’ ಎಂದು ಬಿಜೆಪಿ ನಾಯಕ ಸಾಕ್ಷಿ ಮಹಾರಾಜ್‌ ಶನಿವಾರ ಹೇಳಿದ್ದಾರೆ.

ಉನ್ನಾವ್‌ ಸಂಸದರಾಗಿರುವ ಮಹಾರಾಜ್‌, ‘ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿಕೊಂಡು ನಿರ್ಮಿಸಿದ ಕಟ್ಟಡಗಳನ್ನು ನೆಲಸಮ ಮಾಡಿದ್ದ ಕ್ರಮಕ್ಕೆ ಉತ್ತರ ಪ್ರದೇಶದ ಶೇ. 99 ಜನರು ಸಂತೋಷ ವ್ಯಕ್ತಪಡಿಸಿದ್ದಾರೆ. ರಾಮ ಕೃಷ್ಣರ ಬಳಿ ಧನಸ್ಸು, ಚಕ್ರವಿದ್ದಂತೇ ಬಾಬಾ (ಯೋಗಿ ಆದಿತ್ಯನಾಥ್‌) ಬಳಿ ಬುಲ್ಡೋಜರ್‌ ಇದೆ’ ಎಂದಿದ್ದಾರೆ.

ಸಿಎಎ ವಿರೋಧಿ ಹೋರಾಟದ ಸ್ಥಳದಲ್ಲಿ ಬುಲ್ಡೋಜರ್‌ ಸದ್ದು

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ತಿಂಗಳುಗಳ ಕಾಲ ಹೋರಾಟ ನಡೆದಿದ್ದ ದೆಹಲಿಯ ಶಹೀನ್‌ ಬಾಗ್‌ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸೋಮವಾರ ಒತ್ತುವರಿ ತೆರವುಗೊಳಿಸಲು ಬುಲ್ಡೋಜರ್‌ ಪ್ರತ್ಯಕ್ಷವಾದ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ದಕ್ಷಿಣ ದೆಹಲಿ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ನೂರಾರು ಪೊಲೀಸರಿದ್ದರೂ ಮಹಿಳೆಯರು ಬುಲ್ಡೋಜರ್‌ ಮುಂದೆ ನಿಂತು ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದರಿಂದ ತೆರವು ಕಾರ್ಯಾಚರಣೆ ನಡೆಸಲು ಸಾಧ್ಯವಾಗಿಲ್ಲ.

ಈ ಮಧ್ಯೆ, ಈ ಕಾರ್ಯಾಚರಣೆ ವಿರುದ್ಧ ಸಿಪಿಎಂ ಸುಪ್ರೀಂಕೋರ್ಚ್‌ ಮೆಟ್ಟಿಲೇರಿ, ಮಧ್ಯಪ್ರವೇಶಿಸುವಂತೆ ಮನವಿ ಮಾಡಿತಾದರೂ, ನ್ಯಾಯಾಲಯ ಆ ಕೋರಿಕೆಯನ್ನು ತಿರಸ್ಕರಿಸಿದೆ. ಸಿಪಿಎಂನವರು ಏಕೆ ಈ ಅರ್ಜಿ ಸಲ್ಲಿಸಿದ್ದಾರೆ? ಯಾವ ಮೂಲಭೂತ ಹಕ್ಕು ಉಲ್ಲಂಘನೆಯಾಗಿದೆ? ರಾಜಕೀಯ ಪಕ್ಷಗಳ ಪರವಾಗಿ ಅರ್ಜಿ ಸಲ್ಲಿಸಲು ಇದು ವೇದಿಕೆಯಲ್ಲ. ಹೈಕೋರ್ಚ್‌ ಮೊರೆ ಹೋಗಿ ಎಂದು ವಕೀಲರಿಗೆ ಸುಪ್ರೀಂಕೋರ್ಚ್‌ ತಾಕೀತು ಮಾಡಿದೆ.

ಏ.16ರಂದು ದೆಹಲಿಯಲ್ಲಿ ಕೋಮುಗಲಭೆ ನಡೆದಿದ್ದ ಜಹಾಂಗೀರ್‌ಪುರ ಬಡಾವಣೆಯಲ್ಲೂ ಕಳೆದ ತಿಂಗಳು ಇದೇ ರೀತಿ ಬುಲ್ಡೋಜರ್‌ಗಲು ಗರ್ಜನೆ ಮಾಡಿದ್ದವು. ನ್ಯಾಯಾಲಯದ ಮಧ್ಯಪ್ರವೇಶದ ಬಳಿಕ ವಾಪಸಾಗಿದ್ದವು.

ಗಲಭೆಕೋರರಿಗೆ ಬಿಸಿ ಮುಟ್ಟಿಸಲು ಗಲಭೆ ಆರೋಪಿಗಳು ಮಾಡಿಕೊಂಡಿರುವ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮೊದಲು ಉತ್ತರಪ್ರದೇಶ ಸರ್ಕಾರ ಆರಂಭಿಸಿತ್ತು. ಅದು ಮಧ್ಯಪ್ರದೇಶ ಮತ್ತಿತರ ರಾಜ್ಯಗಳಲ್ಲೂ ಜಾರಿಗೆ ಬಂದು ಈಗ ದೆಹಲಿಗೂ ವಿಸ್ತರಿಸಿದೆ.