ಶಾಂತಿ ಕಾಪಾಡಿ, ವ್ಹೀಲ್ ಚೇರ್‌ನಲ್ಲಿದ್ದೇ ಚುನಾವಣೆ ಎದುರಿಸ್ತೀನಿ: ಜನತೆಗೆ ಮಮತಾ ಸಂದೇಶ!
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ| ನಾಮಪತ್ರ ಸಲ್ಲಿಸುವ ವೇಳೆ ಹಲ್ಲೆ ನಡೆಸಿದ ನಾಲ್ಕೈದು ಮಂದಿ| ಮಮತಾ ಬ್ಯಾನರ್ಜಿ ಕಾಲು, ಕುತ್ತಿಗೆಗೆ ಗಾಯ| ಆಸ್ಪತ್ರೆಯಿಂದಲೇ ಮಮತಾ ವಿಡಿಯೋ ಸಂದೇಶ
ಕೋಲ್ಕತ್ತಾ(ಮಾ.11): ಬುಧವಾರದಂದು ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಡೆದ ಹಲ್ಲೆಯಿಂದಾಗಿ ಸಿಎಂ ಮಮತಾ ಬ್ಯಾನರ್ಜಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಗಳು ಆರಂಭವಾಗಿವೆ. ಅತ್ತ ಟಿಎಂಸಿ ಇದೊಂದು ಪೂರ್ವನಿಯೋಜಿತ ಕೃತ್ಯ ಎಂದು ಆರೋಪಿಸಿ ಚುನಾವಣಾ ಆಯೋಗದ ಬಳಿ ಘಟನೆಯ ವಿಡಿಯೋ ಜಾರಿಗೊಳಿಸುವಂತೆ ಮನವಿ ಮಾಡಿದೆ. ಈ ಮೂಲಕ ಸತ್ಯ ಹೊರಗೆಳೆಯಿರಿ ಎಂದು ಒತ್ತಾಯಿಸಿದೆ. ಆದರೆ ಇತ್ತ ಬಿಜೆಪಿ ಇದು ಮಮತಾ ಬ್ಯಾನರ್ಜಿ ರೂಪಿಸಿರುವ ನಾಟಕ ಎಂದಿದೆ. ಈಗಾಗಲೇ ಮಮತಾ ಬ್ಯಾನರ್ಜಿ ಮಾರ್ಚ್ 14ರವರೆಗಿನ ತಮ್ಮೆಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಇಷ್ಟೇ ಅಲ್ಲದೇ ಆಸ್ಪತ್ರೆಯಿಂದಲೇ ತನ್ನ ಬೆಂಬಲಿಗರಿಗಾಗಿ ವಿಡಿಯೋ ಒಂದನ್ನು ಶೇರ್ ಮಾಡಿರುವ ಮಮತಾ, ವ್ಹೀಲ್ ಚೇರ್‌ನಲ್ಲೇ ಬಂದು ಚುನಾವಣಾ ಪ್ರಚಾರ ನಡೆಸುವುದಾಗಿಯೂ ಹೇಳಿದ್ದಾರೆ.
ಮಮತಾ ಹೇಳಿದ್ದೇನು?
* ತನಗೆ ಗಂಭೀರ ಗಾಯಗಳಾಗಿವೆ. ಕೈ, ಕಾಲುಗಳು ಬಹಳ ನೋವಾಗುತ್ತಿದೆ. ಕೆಲ ದಿನಗಳಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ವ್ಹೀಲ್‌ಚೇರ್‌ನಲ್ಲೇ ಚುನಾವಣಾ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ.
* ತನ್ನ ತಲೆಗೂ ಗಾಯಗಳಾಗಿವೆ ಎಂದಿರುವ ಮಮತಾ ತನ್ನ ಬೆಂಬಲಿಗರ ಬಳಿ ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಶೀಘ್ರದಲ್ಲೇ ಆಸ್ಪತ್ರೆಯಿಂದ ಹೊರಬರುತ್ತೇನೆ. ನಡೆದಾಡಲು ಸಮಸ್ಯೆಯಾಗಬಹುದು, ಆದರೆ ನಾನದನ್ನು ಮ್ಯಾನೇಜ್ ಮಾಡುತ್ತೇನೆ ಎಂದಿದ್ದಾರೆ.
* ಕೋಲ್ಕತ್ತಾದ SSKM ಆಸ್ಪತ್ರೆ ಜಾರಿಗೊಳಿಸಿದ ಹೆಲ್ತ್ ಬುಲೆಟಿನ್ ಅನ್ವಯ ಮಮತಾ ಬ್ಯಾನರ್ಜಿಯ ಎಡಗಾಲಿಗೆ ಏಟಾಗಿದೆ. MRI ಸ್ಕ್ಯಾನ್ ಮಾಡಲಾಗಿದೆ, ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. 6 ವೈದ್ಯರ ತಂಡ ಅವರ ಆರೋಗ್ಯದ ಮೆಲೆ ನಿಗಾ ಇರಿಸಿದೆ ಎಂದಿದ್ದಾರೆ.
ಚುನಾವಣೆ ಯಾವಾಗ?
ಪಶ್ಚಿಮ ಬಂಗಾಳದ 294 ವಿಧಾನಭಾ ಚುನಾವಣೆಗೆ ಎಂಟು ಹಂತದಲ್ಲಿ ಚುನಾವಣೆ ನಡೆಯಲಿದೆ. 294 ರಲ್ಲಿ 30 ಕ್ಷೇತ್ರಗಳ ಮತದಾನ ಮಾರ್ಚ್ 27ರಂದು ನಡೆಯಲಿದೆ. ಎರಡನೇ ಹಂತದಲ್ಲಿ 30 ಕ್ಷೇತ್ರಗಳಿಗೆ ಏಪ್ರಿಲ್ 1, ಮೂರನೇ ಹಂತದಲ್ಲಿ 31 ನೇ ಹಂತದಲ್ಲಿ ಏಪ್ರಿಲ್ 6 ರಂದು, ನಾಲ್ಕನೇ ಹಂತದಲ್ಲಿ 44 ಕ್ಷೇತ್ರಗಳಿಗೆ ಏಪ್ರಿಲ್ 10, ಐದನೇ ಹಂತದಲ್ಲಿ 45 ಕ್ಷೇತ್ರಗಳಿಗೆ ಏಪ್ರಿಲ್ 17, ಆರನೇ ಹಂತದಲ್ಲಿ 43 ಕ್ಷೇತ್ರಗಳಿಗೆ ಏಪ್ರಿಲ್ 22, ಏಳನೇ ಹಂತದಲ್ಲಿ 36 ಕ್ಷೇತ್ರಗಳಿಗೆ ಏಪ್ರಿಲ್ 26 ಹಾಗೂ ಎಂಟನೇ ಹಂತದಲ್ಲಿ 35 ಕ್ಷೇತ್ರಗಳಿಗೆ ಏಪ್ರಿಲ್ 29 ರಂದು ಮತದಾನ ನಡೆಯಲಿದೆ.