ನೂಪುರ್ ಶರ್ಮಾ ವಿರುದ್ಧದ ಸುಪ್ರೀಂಕೋರ್ಟ್ ಜಡ್ಜ್ ಅಭಿಪ್ರಾಯ ವಾಪಸ್ ಪಡೆಯುವಂತೆ ಸಿಜೆಐಗೆ ಅರ್ಜಿ

Nupur Sharma controversy: ನುಫೂರ್‌ ಶರ್ಮಾ ವಿರುದ್ಧ ತಾವು ಮಾಡಿರುವ ಮೌಖಿಕ ಅವಲೋಕನಗಳನ್ನು ಹಿಂಪಡೆಯುವಂತೆ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠಕ್ಕೆ ನಿರ್ದೇಶನ ನೀಡುವಂತೆ ಕೋರಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರಿಗೆ ಪತ್ರ ಸಲ್ಲಿಸಲಾಗಿದೆ.

Plea filed to CJI to withdraw observations made by him against BJP Nupur Sharma mnj

ನವದೆಹಲಿ (ಜು. 01):  ಅಮಾನತುಗೊಂಡಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ವಕ್ತಾರೆ ನುಫೂರ್‌ ಶರ್ಮಾ ವಿರುದ್ಧ ತಾವು ಮಾಡಿರುವ ಮೌಖಿಕ ಅವಲೋಕನಗಳನ್ನು ಹಿಂಪಡೆಯುವಂತೆ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠಕ್ಕೆ ನಿರ್ದೇಶನ ನೀಡುವಂತೆ ಕೋರಿ ಗೌ ಮಹಾಸಭಾ (Gau Mahasabha) ನಾಯಕ ಹಾಗೂ ಸಾಮಾಜಿಕ ಕಾರ್ಯಕರ್ತ ಅಜಯ್ ಗೌತಮ್ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರಿಗೆ ಪತ್ರ ಸಲ್ಲಿಸಿದ್ದಾರೆ. ನೂಪುರ್ ಶರ್ಮಾ ಅವರ ವಿರುದ್ಧ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಇಂದು ಮಾಡಿದ ಅವಲೋಕನಗಳನ್ನು ಪರಿಗಣಿಸುವುದಿಲ್ಲ ಎಂದು ಘೋಷಿಸಲು ಕೋರಿ ಗೌತಮ್ ಅವರು ಸಿಜೆಐಗೆ  ಪತ್ರ ಬರೆದಿದ್ದಾರೆ

ನೂಪುರ್‌ಗೆ ನ್ಯಾಯಯುತ ವಿಚಾರಣೆ ಸಿಗಬೇಕೆಂಬ ದೃಷ್ಟಿಯಿಂದಾಗಿ,  ನೂಪುರ್ ಶರ್ಮಾ ವಿಷಯದಲ್ಲಿ ತಮ್ಮ ವೀಕ್ಷಣೆಯನ್ನು ಹಿಂತೆಗೆದುಕೊಳ್ಳಲು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಪೀಠಕ್ಕೆ ಸೂಕ್ತ ಆದೇಶಗಳು ಅಥವಾ ನಿರ್ದೇಶನಗಳನ್ನು ನೀಡುವಂತೆ ಅರ್ಜಿಯಲ್ಲಿ, ಕೋರಿಲಾಗಿದೆ. ‌

ಭಾರತೀಯ ಸಂವಿಧಾನದ ಸೂಕ್ತ ವಿಭಾಗದ ಅನ್ವಯ ದೆಹಲಿಯಲ್ಲಿ ನೂಪುರ್ ಶರ್ಮಾ ಅವರ ಎಲ್ಲಾ ಪ್ರಕರಣಗಳನ್ನು ಸುವೋ ಮೋಟು ವರ್ಗಾಯಿಸಲು ನಿರ್ದೇಶನವನ್ನು ಕೋರಿದೆ. ಅಲ್ಲದೇ  ನೂಪುರ್ ಶರ್ಮಾ ಅವರಿಗಿರುವ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಕರಣವನ್ನು ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗೆ ನಿರ್ದೇಶಿಸುವಂತೆ  ಅರ್ಜಿಯಲ್ಲಿ ಕೋರಲಾಗಿದೆ. ‌

ಇದನ್ನೂ ಓದಿ: ದೇಶದ ಈಗಿನ ಪರಿಸ್ಥಿತಿ ನನಗೆ ಭಯ ಮೂಡಿಸಿದೆ ಎಂದ ಅಮರ್ತ್ಯ ಸೆನ್‌!

"ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಅಭಿಪ್ರಾಯಗಳನ್ನು ವಾಪಸ್ ಪಡೆಯಬೇಕು, ಜಸ್ಟೀಸ್ ಸೂರ್ಯಕಾಂತ್ ಟೀಕೆಗಳು ಅನವಶ್ಯಕ ಎಂದು ಘೋಷಿಸಬೇಕು, ನೂಪುರ್ಗೆ ನ್ಯಾಯಯುತ ವಿಚಾರಣೆ ಸಿಗಬೇಕೆಂಬ ದೃಷ್ಟಿಯಿಂದ ಈ ಅರ್ಜಿ ಸಲ್ಲಿಸಲಾಗಿದೆ,  ನ್ಯಾಯಮೂರ್ತಿ ಸೂರ್ಯಕಾಂತ್ರ ಮೌಖಿಕ ಅಭಿಪ್ರಾಯ ವಾಪಸ್ ಪಡೆಯಬೇಕು, ಜಸ್ಟೀಸ್ ಸೂರ್ಯಕಾಂತ್ ಅವರ ಹೇಳಿಕೆಗಳು ಅನಾವಶ್ಯಕವಾಗಿದ್ದವು" ಎಂದು  ಸಾಮಾಜಿಕ ಕಾರ್ಯಕರ್ತ ಅಜಯ್ ಗೌತಮ್ ಪತ್ರದಲ್ಲಿ ಆಗ್ರಹಿಸಿದ್ದಾರೆ. 

"ಉದಯಪುರ ಹತ್ಯೆಗೆ ನೂಪುರ್ ಕಾರಣ ಎನ್ನುವ ಮೂಲಕ ಹಂತಕರನ್ನ ಸಮರ್ಥಿಸಿದ್ದಾರೆ, ಉದಯಪುರ ಶಿರಚ್ಛೇದ ಮಾಡಿದ್ದನ್ನು ಸಮರ್ಥಿಸಿ ಹಂತಕರಿಗೆ ಕ್ಲೀನ್ಚಿಟ್ ನೀಡಲಾಗಿದೆ,   ಯಾವುದೇ ಕೋರ್ಟಿನ ವಿಚಾರಣೆ, ತೀರ್ಪು ಇಲ್ಲದೇ ಇಂಥಾ ಹೇಳಿಕೆ ನೀಡಬಹುದೇ?, ನೂಪುರ್ ಹೇಳಿಕೆ ತಪ್ಪು ಎಂದು ಯಾವ ನ್ಯಾಯಾಲಯದಿಂದಲೂ ತೀರ್ಮಾನವಾಗಿಲ್ಲ, ಈ ಹೇಳಿಕೆ ಪ್ರಕರಣದ ಮೇಲೆ, ವಿಚಾರಣೆಯ ಮೇಲೆ ಪರಿಣಾಮ ಬೀರುವುದಿಲ್ಲವೇ..? ನೂಪುರ್ ಶರ್ಮಾ ವಿರುದ್ಧದ ಎಲ್ಲ ಕೇಸ್ಗಳನ್ನು ದೆಹಲಿಗೆ ವರ್ಗಾಯಿಸಬೇಕು, ಸಂವಿಧಾನದ ವಿಧಿ 22(2) ಅಡಿಯಲ್ಲಿ ಎಲ್ಲ ಕೇಸ್ಗಳನ್ನು ದೆಹಲಿಗೆ ವರ್ಗಾಯಿಸಬೇಕು" ಎಂದು ಅವರು ಆಗ್ರಹಿಸದ್ದಾರೆ. 

ಇಡೀ ದೇಶಕ್ಕೆ ಬೆಂಕಿ ಹಚ್ಚಿದ್ದು ನೂಪುರ್‌ ಶರ್ಮ: ನೂಪುರ್‌ ಶರ್ಮ ತಮ್ಮ ವಿರುದ್ಧ ದೇಶದ ಮೂಲೆಮೂಲೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ವಿಚಾರಣೆಯನ್ನು ದೆಹಲಿಗೆ ಹಸ್ತಾಂತರಿಸಬೇಕು. ಎಲ್ಲಾ ಎಫ್‌ಐಆರ್‌ಗಳನ್ನೂ ದೆಹಲಿಗೆ ಹಸ್ತಾಂತರಿಸಿ ವಿಚಾರಣೆ ಇಲ್ಲೇ ನಡೆಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಪೀಠವು  "ದೇಶದ ಭದ್ರತೆಗೆ ನೂಪುರ್‌ ಶರ್ಮ ಬೆದರಿಕೆ ಒಡ್ಡಿದ್ದಾರೆ," ಎಂದು  ಅಭಿಪ್ರಾಯಪಟ್ಟಿದ್ದರು. 

ಇದನ್ನೂ ಓದಿ: ಕನ್ಹಯ್ಯಲಾಲ್ ಕುಟುಂಬಕ್ಕೆ ಸಹಾಯ, 24 ಗಂಟೆಯಲ್ಲಿ 1 ಕೋಟಿ ರೂಪಾಯಿ ದೇಣಿಗೆ!

"ಇಡೀ ದೇಶಕ್ಕೆ ಬೆಂಕಿ ಹಚ್ಚುವಂತ ಹೇಳಿಕೆಗಳನ್ನು ನೀಡಿ, ಸಮಾಜದ ಶಾಂತಿಗೆ ಧಕ್ಕೆ ಉಂಟುಮಾಡಿದ್ದು ನೂಪುರ್‌ ಶರ್ಮ. ದೇಶದಲ್ಲಿ ಶಾಂತಿ ಹದಗೆಡಲು ಮತ್ತು ಉದ್ವಿಘ್ನ ವಾತಾವರಣ ನಿರ್ಮಾಣವಾಗಲು ನೂಪುರ್ ಶರ್ಮ ಕಾರಣ. ಇಡೀ ದೇಶದ ಕ್ಷಮೆ ಯಾಚಿಸಬೇಕು ಅವರು," ಎಂದು ಸುಪ್ರೀಂ ಕೋರ್ಟ್‌ ತರಾಟೆ ತೆಗೆದುಕೊಂಡಿದ್ದು, ಟಿವಿ ವಾಹಿನಿಯಲ್ಲೇ ನೂಪುರ್‌ ಶರ್ಮ ಇಡೀ ದೇಶದ ಕ್ಷಮೆ ಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.  

"ಈ ಅರ್ಜಿ ಆಕೆಯ ಮನಸ್ಥಿತಿಯನ್ನು ತೋರಿಸುತ್ತಿದೆ. ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಂದೆ ಹಾಜರಾಗಲು ಅವರ ಪ್ರತಿಷ್ಠೆ ಮತ್ತು ಧಿಮಾಕು ಅಡ್ಡ ಬರುತ್ತಿರಬೇಕು. ಒಂದು ಪಕ್ಷದ ವಕ್ತಾರೆ ಸಮಾಜದ ಶಾಂತಿ ಕದಡುವಂತ ಹೇಳಿಕೆ ಕೊಡುವಂತಿಲ್ಲ. ಕೆಲವೊಮ್ಮ ಅಧಿಕಾರದ ಮದ ತಲೆಗೇರುತ್ತದೆ. ಆಗ ಇಂತಾ ವ್ಯಕ್ತಿಗಳು ತಾವು ಸರ್ವಶ್ರೇಷ್ಟರು, ತಮಗೆ ಅನಿಸಿದ್ದನ್ನೆಲ್ಲಾ ಮಾಡಬಹುದು ಅಂದುಕೊಳ್ಳುತ್ತಾರೆ. ಜತೆಗೆ ಈ ರೀತಿಯ ಹೇಳಿಕೆ ಕೊಡಲು ಆಕೆಗೆ ಪ್ರೇರೇಪಿಸಿದವರ ಮೇಲೆ ಆಕೆ ಯಾಕೆ ದೂರು ನೀಡಿಲ್ಲ," ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿತ್ತು 

Latest Videos
Follow Us:
Download App:
  • android
  • ios