ಕರಾಳ ಗುರುವಾರ ವಿಮಾನ ಅಪಘಾತದಲ್ಲಿ 240ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಅಹಮದಾಬಾದ್ ನಲ್ಲಿ ನಡೆದ ಈ ದುರ್ಘಟನೆ ಇಡೀ ದೇಶವನ್ನು ದುಃಖದಲ್ಲಿ ಮುಳುಗಿಸಿದೆ. ಈ ಮಧ್ಯೆ ಅದೇ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ ವ್ಯಕ್ತಿಯೊಬ್ಬನ ವಿಡಿಯೋ ವೈರಲ್ ಆಗ್ತಿದೆ.
ಗುರುವಾರ ಅಹಮದಾಬಾದ್ (Ahmedabad)ನಲ್ಲಿ ನಡೆದ ವಿಮಾನ ಅಪಘಾತ (plane crash)ದಲ್ಲಿ 240ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಏರ್ ಇಂಡಿಯಾ (Air India )ವಿಮಾನ A171 ಲಂಡನ್ ಗೆ ಹಾರಾಟ ಶುರು ಮಾಡಿದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ಘಟನೆ ನಡೆದ ಒಂದು ದಿನದ ನಂತ್ರ ಒಂದೊಂದೇ ವಿಷ್ಯಗಳು ಹೊರಗೆ ಬರ್ತಿವೆ. ಈಗ ಏರ್ ಇಂಡಿಯಾ ವಿಮಾನ A171ನ ವಿಡಿಯೋ ಒಂದು ವೈರಲ್ ಆಗ್ತಿದೆ. ವಿಮಾನ ಅಪಘಾತಕ್ಕೀಡಾಗುವ ಎರಡು ಗಂಟೆ ಮೊದಲು ತೆಗೆದ ವಿಡಿಯೋ ಇದಾಗಿದೆ. ಎರಡು ಗಂಟೆ ಮೊದಲು ಇದೇ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ ಪ್ರಯಾಣಿಕರೊಬ್ಬರು, ವಿಮಾನದ ಸ್ಥಿತಿಯನ್ನು ಸೆರೆ ಹಿಡಿದಿದ್ದರು. ವಿಮಾನದಲ್ಲಿ ಯಾವೆಲ್ಲ ವ್ಯವಸ್ಥೆ ಅವ್ಯವಸ್ಥೆಯಾಗಿದೆ ಎಂಬುದನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಅಪಘಾತಕ್ಕಿಂತ ಎರಡು ಗಂಟೆ ಮೊದಲು ತೆಗೆದ ವಿಡಿಯೋ ಅಂತ ಹೇಳಲಾಗಿದೆ.
ಆಕಾಶ್ ವ್ಯಾಟ್ಸ್ ಎಂಬ ಉದ್ಯಮಿ, ಸೋಶಿಯಲ್ ಮೀಡಿಯಾ ಎಕ್ಸ್ ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅಪಘಾತ ನಡೆದ ಎರಡು ಗಂಟೆ ಮೊದಲು ನಾನು ದೆಹಲಿಯಿಂದ ಅಹಮದಾಬಾದ್ ಗೆ ಇದೇ ವಿಮಾನದಲ್ಲಿ ಬಂದಿದ್ದೆ ಎಂದು ಅವರು ಬರೆದುಕೊಂಡಿದ್ದಾರೆ. ವಿಮಾನದಲ್ಲಿ ಅಸಾಮಾನ್ಯ ವಿಷಯಗಳನ್ನು ನಾನು ನೋಡಿದೆ. @airindia ಗೆ ಟ್ವೀಟ್ ಮಾಡಲು ವೀಡಿಯೊ ಮಾಡಿದ್ದೆ. ವಿಮಾನದ ಬಗ್ಗೆ ವಿಡಿಯೋ ಮೂಲಕ ಹೆಚ್ಚಿನ ಮಾಹಿತಿ ನೀಡ್ತೆನೆ ಅಂತ ಶೀರ್ಷಿಕೆ ಹಾಕಿದ್ದಾರೆ.
ವ್ಯಾಟ್ಸ್ ವಿಮಾನದ ಒಳಗಿನ ವೀಡಿಯೊಗಳನ್ನು ಅಪ್ಲೋಡ್ ಮಾಡಿದ್ದಾರೆ. ವಿಮಾನದಲ್ಲಿ ಎಸಿ ಇಲ್ಲ. ಅನೇಕರು ಬೆವರುತ್ತಿದ್ದಾರೆ. ಎಸಿ ವರ್ಕ್ ಆಗ್ತಿಲ್ಲ ಎನ್ನುವ ಕಾರಣಕ್ಕೆ ಪೇಪರ್ ನಲ್ಲಿ ಗಾಳಿ ಬೀಸಿಕೊಳ್ತಿದ್ದಾರೆ ಅಂತ ಆಕಾಶ್ ವಿಡಿಯೋದಲ್ಲಿ ಹೇಳಿದ್ದಾರೆ. ನಾವು ವಿಮಾನದಲ್ಲಿ ಅಲ್ಲ ಟ್ಯಾಕ್ಸಿಯಲ್ಲಿ ಇದ್ದ ಅನುಭವ ಆಗ್ತಿದೆ. ಎಸಿ ಮಾತ್ರವಲ್ಲ ಮನರಂಜನಾ ವ್ಯವಸ್ಥೆ ಕೂಡ ಸರಿಯಾಗಿಲ್ಲ. ಸೀಟ್ ಮುಂದಿರುವ ಸ್ಕ್ರೀನ್ ವರ್ಕ್ ಆಗ್ತಿಲ್ಲ ಎಂದು ಆಕಾಶ್ ವಿಡಿಯೋದಲ್ಲಿ ಹೇಳಿದ್ದಾರೆ. ವಿಮಾನದಲ್ಲಿ ಲೈಟ್ ಆನ್ ಆಗ್ತಿಲ್ಲ. ಸಿಬ್ಬಂದಿಗೆ ಕರೆ ಮಾಡಲು ಇಟ್ಟಿರುವ ಫೋನ್ ಕೂಡ ವರ್ಕ್ ಆಗ್ತಿಲ್ಲ. ಏರ್ ಇಂಡಿಯಾ ನೀಡ್ತಿರುವ ವ್ಯವಸ್ಥೆ ಇದೇನಾ ಅಂತ ಆಕಾಶ್ ವಿಡಿಯೋದಲ್ಲಿ ಪ್ರಶ್ನೆ ಮಾಡಿರೋದನ್ನು ನೀವು ಕೇಳ್ಬಹುದು. ಏರ್ ಇಂಡಿಯಾ ವಿಮಾನದಲ್ಲಿ ನಾನು ದೆಹಲಿಗೆ ವಾಪಸ್ ಆಗೋದಿಲ್ಲ ಅಂತ ಆಕಾಶ್ ವಿಡಿಯೋದಲ್ಲಿ ಹೇಳಿದ್ದರು.
ಆಕಾಶ್ ಪೋಸ್ಟ್ ಮಾಡಿರುವ ಈ ವಿಡಿಯೋ ವೇಗವಾಗಿ ವೈರಲ್ ಆಗಿದೆ. ಎರಡು ಗಂಟೆಯಲ್ಲಿ ನಾಲ್ಕು ಮಿಲಿಯನ್ ಗಿಂತಲೂ ಹೆಚ್ಚು ವೀವ್ಸ್ ಪಡೆದಿದೆ. ಅನೇಕರು ಇದು ಅಪಘಾತಕ್ಕೀಡಾದ ವಿಮಾನ ಅನ್ನೋದನ್ನು ಒಪ್ಪಿಕೊಳ್ಳೋಕೆ ಸಿದ್ಧವಿಲ್ಲ. ಎಸಿ ವರ್ಕ್ ಆಗ್ದಿರೋದಕ್ಕೂ ಅಪಘಾತಕ್ಕೂ ಸಂಬಂಧವಿಲ್ಲ ಅಂತ ಕೆಲವರು ಕಮೆಂಟ್ ಮಾಡಿದ್ದಾರೆ. ಆಕಾಶ್ ವಿಡಿಯೋದಲ್ಲಿ ಎಷ್ಟು ಸತ್ಯಾಸತ್ಯತೆ ಇದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಅಹಮದಾಬಾದ್ ನಲ್ಲಿಏನಾಯ್ತು? : ಜೂನ್ 12ರಂದು ಅಹಮದಾಬಾದ್ನಿಂದ ಮಧ್ಯಾಹ್ನ 13.38 ಕ್ಕೆ ಹೊರಟ ವಿಮಾನದಲ್ಲಿ 242 ಪ್ರಯಾಣಿಕರು ಮತ್ತು ಸಿಬ್ಬಂದಿ ಪ್ರಯಾಣ ಬೆಳೆಸಿದ್ದರು. ಇವರಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 1 ಕೆನಡಾ ಪ್ರಜೆ ಮತ್ತು 7 ಪೋರ್ಚುಗೀಸ್ ಪ್ರಜೆಗಳಿದ್ದರು. ಒಬ್ಬೇ ಒಬ್ಬ ಪ್ರಯಾಣಿಕ ಮಾತ್ರ ಬದುಕುಳಿದಿದ್ದು, ಉಳಿದೆಲ್ಲ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಅಹಮದಾಬಾದ್ನ ಬಿಜೆ ವೈದ್ಯಕೀಯ ಹಾಸ್ಟೆಲ್ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದ್ದು, ಅದರ ಅವಶೇಷಗಳು ಕಟ್ಟಡದ ಛಾವಣಿಯ ಮೇಲೆ ಬಿದ್ದಿವೆ. ಇನ್ನೂ ಅನೇಕ ಸ್ಥಳಗಳಿಂದ ಹೊಗೆ ಹೊರಬರುತ್ತಿರುವುದು ಕಂಡುಬಂದಿದೆ. ಬೆಂಕಿ ನಂದಿಸುವ ಕೆಲ್ಸವನ್ನು ಅಗ್ನಿಶಾಮಕ ದಳ ಮುಂದುವರೆಸಿದೆ.
