ಮೇ ಡೇ, ಮೇ ಡೇ, ಮೇ ಡೇ.. ಒತ್ತಡ ಸಾಕಾಗ್ತಿಲ್ಲ, ಶಕ್ತಿ ಇಲ್ಲ, ವಿಮಾನ ಮೇಲೆತ್ತಲು ಸಾಧ್ಯ ಆಗ್ತಿಲ್ಲ...- ಗುಜರಾತ್‌ನ ಅಹಮದಾಬಾದ್‌ನಲ್ಲಿ ಗುರುವಾರ 270 ಜನರ ಬಲಿ ಪಡೆದ ನತದೃಷ್ಟ ಏರ್‌ ಇಂಡಿಯಾ ವಿಮಾನದ ಪೈಲಟ್‌ ಕಳುಹಿಸಿದ ಕೊನೆಯ ಸಂದೇಶ ಇದು.

ನವದೆಹಲಿ: ಮೇ ಡೇ, ಮೇ ಡೇ, ಮೇ ಡೇ.. ಒತ್ತಡ ಸಾಕಾಗ್ತಿಲ್ಲ, ಶಕ್ತಿ ಇಲ್ಲ, ವಿಮಾನ ಮೇಲೆತ್ತಲು ಸಾಧ್ಯ ಆಗ್ತಿಲ್ಲ...

- ಗುಜರಾತ್‌ನ ಅಹಮದಾಬಾದ್‌ನಲ್ಲಿ ಗುರುವಾರ 270 ಜನರ ಬಲಿ ಪಡೆದ ನತದೃಷ್ಟ ಏರ್‌ ಇಂಡಿಯಾ ವಿಮಾನದ ಪೈಲಟ್‌ ಕಳುಹಿಸಿದ ಕೊನೆಯ ಸಂದೇಶ ಇದು.

ವಿಮಾನವು ಭೂಮಿಯ ಗುರುತ್ವಾಕರ್ಷಣ ಸೆಳೆತವನ್ನು ಮೀರಿ ನೆಲದಿಂದ ಮೇಲೇಳಲು ಮತ್ತು ಗಾಳಿಯ ಪ್ರತಿರೋಧವನ್ನು ತಡೆದು ಮುಂದೆ ಸಾಗಲು ಮತ್ತು ಮೇಲೆ ಏರಲು ಅಗತ್ಯವಾದ ಶಕ್ತಿಯನ್ನು ವಿಮಾನದ ಎರಡೂ ಎಂಜಿನ್‌ಗಳು ನೀಡಬೇಕು. ಅದು ಸಾಧ್ಯವಾಗದೇ ಹೋದಲ್ಲಿ ಮೇಲಕ್ಕೆ ಏರುವ ಬದಲು ವಿಮಾನ ಮತ್ತೆ ನೆಲ ಮುಖವಾಗುತ್ತದೆ. ಗುರುವಾರ ಏರಿಂಡಿಯಾ ವಿಮಾನ ಪತನಗೊಳ್ಳುವುದಕ್ಕೂ ಮುನ್ನ 650 ಅಡಿ ಮೇಲಕ್ಕೆ ಸಾಗಿತ್ತು. ಬಳಿಕ ಮತ್ತಷ್ಟು ಮೇಲೆ ಏರುವ ಬದಲು ನಿಧಾನವಾಗಿ ಮುಂದಕ್ಕೆ ಸಾಗತೊಡಗಿತ್ತು. ಈ ಹಂತದಲ್ಲೇ ಪೈಲಟ್‌ ಮೇ ಡೇ ಸಂದೇಶ ಕಳುಹಿಸಿ ‘ಒತ್ತಡ ಸಾಕಾಗ್ತಿಲ್ಲ, ಶಕ್ತಿ ಇಲ್ಲ, ವಿಮಾನ ಮೇಲೆತ್ತಲು ಸಾಧ್ಯ ಆಗ್ತಿಲ್ಲ’ ಎನ್ನುವ ಮೂಲಕ ವಿಮಾನ ಸಂಚಾರದಲ್ಲಿನ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದರು. ಬಳಿಕ ಏರ್‌ ಟ್ರಾಫಿಕ್‌ ಕಂಟ್ರೋಲರ್‌ ಜೊತೆಗಿನ ವಿಮಾನದ ಸಂಪರ್ಕ ಕಡಿತಗೊಂಡು ವಿಮಾನವೂ ಪತನಗೊಂಡಿತ್ತು.

ದುರಂತ ನಡೆದ ಮೂರು ದಿನಗಳ ಬಳಿಕವೂ ದುರ್ಘಟನೆಗೆ ಕಾರಣ ಪತ್ತೆಯಾಗದೇ ಇರುವ ಹೊತ್ತಿನಲ್ಲೇ ಪೈಲಟ್‌ ರವಾನಿಸಿದ ಸಂದೇಶವು ವಿಮಾನದ ಸುರಕ್ಷತೆಯ ಕುರಿತು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.

ಅನುಮಾನ:

ವಿಮಾನ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಇಂಥ ಸಂದೇಶ ರವಾನೆಯಾಗಿದ್ದು, ಹಾರಾಟಕ್ಕೆ ಮುನ್ನವೇ ವಿಮಾನದಲ್ಲಿ ಲೋಪ ಏನಾದರೂ ಇತ್ತಾ? ವಿಮಾನದ ಎಂಜಿನ್‌ನಲ್ಲಿ ಏನಾದರೂ ಲೋಪವಿತ್ತಾ? ಟೇಕಾಫ್‌ ವೇಳೆ ವಿಮಾನದ ರೆಕ್ಕೆಗಳ ಮಡಿಕೆಗಳು(ಫ್ಲಾಪ್ಸ್‌) ಮತ್ತು ಗೇರ್‌ ಕೂಡ ಅಹಸಜ ಸ್ಥಿತಿಯಲ್ಲಿದ್ದು ಏಕೆ? ಟೇಕಾಫ್‌ ನಿಯಮಗಳನ್ನು ಪೈಲಟ್‌ ಸರಿಯಾಗಿ ಪಾಲಿಸಿದ್ದರೇ? ಇಲ್ಲವೇ? ವಿಮಾನದ ಎಂಜಿನ್‌ಗೆ ಹಕ್ಕಿಗಳ ಹಿಂಡೇನಾದರೂ ಬಡಿದಿತ್ತೇ? ವಿಮಾನದ ಇಂಧನ ಕಲುಷಿತಗೊಂಡು ಈ ದುರಂತ ನಡೆದಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಿಮಾನ ದುರಂತ ಸ್ಥಳಕ್ಕೆ ಖರ್ಗೆ, ಡಿಕೆಶಿ ಭೇಟಿ 

ಅಹಮದಾಬಾದ್ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುಜರಾತ್ ವಿಮಾನ ದುರಂತ ಸ್ಥಳಕ್ಕೆ ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಆ ಬಳಿಕ ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ತೆರಳಿ ಅಪಘಾತದಲ್ಲಿ ಗಾಯಗೊಂಡವರಿಗೆ ಸಾಂತ್ವನ ಹೇಳಿದರು. ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಖರ್ಗೆ, ‘ಕೇಂದ್ರ ಸರ್ಕಾರವು ವಿಮಾನ ಅಪಘಾತದ ಬಲಿಪಶುಗಳ ಕುಟುಂಬಗಳಿಗೆ ಪರಿಹಾರ ನೀಡಬೇಕು ಮತ್ತು ಘಟನೆಯ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಈ ವೇಳೆ ಕರ್ನಾಟಕದ ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌, ಗುಜರಾತ್‌ ಕಾಂಗ್ರೆಸ್‌ ನಾಯಕ ಶಕ್ತಿಸಿಂಹ ಗೋಹಿಲ್‌ ಹಾಗೂ ಇತರ ಸ್ಥಳೀಯ ಕಾಂಗ್ರೆಸ್ ಮುಖಂಡರು ಇದ್ದರು.