- Home
- News
- India News
- ಮದುವೆಗೆ ಸಿದ್ಧವಾಗಿದ್ದವಳು, ಮಸಣ ಸೇರಿದಳು: ವಿಮಾನ ದುರಂತದಲ್ಲಿ ಮೃತಪಟ್ಟ ಗಗನಸಖಿಯ ಮನೆಯಲ್ಲಿ ಶೋಕ!
ಮದುವೆಗೆ ಸಿದ್ಧವಾಗಿದ್ದವಳು, ಮಸಣ ಸೇರಿದಳು: ವಿಮಾನ ದುರಂತದಲ್ಲಿ ಮೃತಪಟ್ಟ ಗಗನಸಖಿಯ ಮನೆಯಲ್ಲಿ ಶೋಕ!
ಲಂಡನ್‌ಗೆ ಹೊರಟಿದ್ದ ವಿಮಾನ ದುರಂತದಲ್ಲಿ ಗಗನಸಖಿ ರೋಶ್ನಿ ಸಾವನ್ನಪ್ಪಿದ್ದಾರೆ. ಮದುವೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಈ ದುರಂತ ಸಂಭವಿಸಿದೆ. ಕುಟುಂಬದವರ ಆಕೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಅಹಮದಾಬಾದ್‌ನಲ್ಲಿ ಗುರುವಾರ ಲಂಡನ್‌ಗೆ ಹೊರಟಿದ್ದ ವಿಮಾನ ಅಪಘಾತವಾಗಿ ನೆಲಕ್ಕೆ ಬಿದ್ದಾಗ ಹಲವಾರು ಕನಸುಗಳು ಹಾಗೂ ಕಥೆಗಳನ್ನೂ ಬೂದಿ ಮಾಡಿತು. ಇಡೀ ದೇಶ ಮತ್ತು ಜಗತ್ತನ್ನು ಬೆಚ್ಚಿಬೀಳಿಸಿದ ಈ ಭೀಕರ ಅಪಘಾತದಲ್ಲಿ ಒಬ್ಬ ಬ್ರಿಟಿಷ್ ಪ್ರಜೆಯನ್ನು ಹೊರತುಪಡಿಸಿ ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದರು.
ವಿಮಾನದಲ್ಲಿದ್ದ ಪ್ರಯಾಣಿಕರ ಕಥೆಗಳ ನಡುವೆ, ದುರದೃಷ್ಟಕರ ವಿಮಾನದಲ್ಲಿದ್ದ ವಿಮಾನ ಸಿಬ್ಬಂದಿಗಳಲ್ಲಿ ಒಬ್ಬರಾದ ರೋಶ್ನಿ ಸೊಂಘರೆ ಬಗ್ಗೆ ಅಂತಹ ಒಂದು ಭಾವುಕ ಕಥೆ ಮುನ್ನಲೆಗೆ ಬಂದಿದೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ದೊಂಬಿವಿಲಿ ಪಟ್ಟಣದ ರಾಜಾಜಿ ಪಥ್ ಮೂಲದವರಾದ ರೋಶ್ನಿ ಮುಂದಿನ ವರ್ಷ ಹೊಸ ಜೀವನ ಆರಂಭಿಸುವ ಖುಷಿಯಲ್ಲಿದ್ದರು. 2026ರ ಮಾರ್ಚ್‌ನಲ್ಲಿ ಮರ್ಚಂಟ್ ನೇವಿ ಅಧಿಕಾರಿಯನ್ನು ಆಕೆ ವಿವಾಹವಾಗಬೇಕಿತ್ತು. ಅದಕ್ಕಾಗಿ ಮನೆಯಲ್ಲಿ ಸಿದ್ಧತೆಗಳು ಕೂಡ ಆರಂಭವಾಗಿದ್ದವು. ಆದರೆ, ಈಗ ಅದು ಮೌನ ಹಾಗೂ ನೆನಪುಗಳಲ್ಲಿ ಮಾತ್ರವೇ ಉಳಿಯಲಿದೆ.
26 ವರ್ಷ ರೋಶ್ನಿ ಘಟನೆ ನಡೆಯುವ ಮೂರು ದಿನಗಳ ಹಿಂದೆಯಷ್ಟೇ ಮನೆಯಿಂದ ಹೊರಟಿದ್ದಳು. ಎಂದಿನಂತೆ ಗಗನಸಖಿಯಾಗಿ ತಮ್ಮ ಅಂತಾರಾಷ್ಟ್ರೀಯ ಪ್ರವಾಸಕ್ಕೆ ಸಿದ್ಧರಾಗಿದ್ದರು. ಈ ಬಾರಿ ಅವರು ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗಬೇಕಿತ್ತು. ಆದರೆ, ಈ ದುರಂತೆ ಆಕೆಯ 50 ವರ್ಷದ ತಂದೆ ರಾಜೇಂದ್ರ, ತಾಯಿ ಶೋಭಾ ಹಾಗೂ ಕಿರಿಯ ಸಹೋದರ ವಿಘ್ನೇಶ್‌ಗೆ ಭಾರೀ ಆಘಾತ ನೀಡಿದೆ.
"ಆಕೆ ಈ ಮನೆಯ ಹೃದಯ ಬಡಿತವಾಗಿದ್ದಳು. ನಾವು ಅವಳ ನಿಶ್ಚಿತಾರ್ಥವನ್ನು ನವೆಂಬರ್‌ನಲ್ಲಿ ಮಾಡಿ ಮಾರ್ಚ್‌ನಲ್ಲಿ ಮದುವೆ ಮಾಡುವ ನಿರ್ಧಾರ ಮಾಡಿದ್ದೆವು. ವಿಧಿ ಅವಳೊಂದಿಗೆ ಬಹಳ ಕ್ರೂರವಾಗಿ ನಡೆದುಕೊಂಡಿದೆ' ಎಂದು ಆಕೆಯ ಆಪ್ತ ಸಂಬಂಧಿಯೊಬ್ಬರು ತಿಳಿಸಿದ್ದಾರೆ.
ಸೊಂಘರೆ ಕುಟುಂಬವು ಕರಾವಳಿಯ ರತ್ನಗಿರಿ ಜಿಲ್ಲೆಯ ಮಂದಂಗಡ್‌ನವರಾಗಿದ್ದು, ಕೆಲಸಕ್ಕಾಗಿ ಮುಂಬೈಗೆ ತೆರಳಿ ನಂತರ ಎರಡು ವರ್ಷಗಳ ಹಿಂದೆ ದೊಂಬಿವಿಲಿಗೆ ಸ್ಥಳಾಂತರಗೊಂಡಿದ್ದರು.
ರೋಶ್ನಿಯ ತಂದೆ ತಮ್ಮ ಇಬ್ಬರು ಮಕ್ಕಳಿಗೆ ಶಿಕ್ಷಣ ನೀಡಲು ಅವಿರತವಾಗಿ ಶ್ರಮಿಸಿದ್ದರು. ಅವರು ಫ್ಲೈಟ್ ಅಟೆಂಡೆಂಟ್ ಕೋರ್ಸ್ ಅನ್ನು ಸಂಪೂರ್ಣವಾಗಿ ಮುಗಿಸಿದ್ದರು ಎಂದು ತಿಳಿಸಿದ್ದಾರೆ.
ಸ್ಪೈಸ್‌ಜೆಟ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದ ರೋಶ್ನಿ ಬಳಿಕ ಏರ್ ಇಂಡಿಯಾಕ್ಕೆ ಬಂದಿದ್ದರು. ಈ ವೇಳೆ ಅವರು ಅಂತಾರಾಷ್ಟ್ರೀಯ ಅಸೈನ್‌ಮೆಂಟ್ ಆರಿಸಿಕೊಂಡಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. "ಅವಳು ಮತ್ತೆ ವಿಮಾನ ಹಾರಾಟ ನಡೆಸಲು ತುಂಬಾ ಸಂತೋಷದಿಂದ ಇದ್ದಳು. ನಾವೆಲ್ಲರೂ ಅವಳ ಮದುವೆಗಾಗಿ ಎದುರು ನೋಡುತ್ತಿದ್ದೆವು. ಎಲ್ಲವೂ ಸರಿಯಾಗಿ ನಡೆಯುತ್ತಿತ್ತು" ಎಂದು ಅವಳ ಚಿಕ್ಕಪ್ಪ ಪ್ರವೀಣ್ ಸುಖದೇರೆ ತಿಳಿಸಿದ್ದಾರೆ.
ವಿಮಾನ ಅಪಘಾತದ ಸುದ್ದಿ ತಿಳಿದ ತಕ್ಷಣ, ರೋಶ್ನಿಯವರ ಕುಟುಂಬ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತು. ಆದರೆ, ಆಕೆಯ ಸಂಪರ್ಕ ಸಿಗದೇ ಇದ್ದಾಗ ಭಯಗೊಂಡಿದ್ದರು. ಆಕೆಯ ತಂದೆ ಮತ್ತು ಸಹೋದರ ರೋಶ್ನಿ ಬದುಕಿರುವ ಭರವಸೆಯೊಂದಿಗೆ ಅಹಮದಾಬಾದ್‌ಗೆ ಬಂದಿದ್ದರು.
ರೋಶ್ನಿಯ ನಿಶ್ಚಿತ ವರ, ಗುಹಾಘರ್ ತಾಲೂಕಿನ ಮರ್ಚಂಟ್ ನೇವಿ ಅಧಿಕಾರಿಯಾಗಿದ್ದು, ಪ್ರಸ್ತುತ ಥಾಣೆಯಲ್ಲಿ ನೆಲೆಸಿದ್ದಾರೆ. ಅವರು ಕುಟುಂಬದ ಸಂಪರ್ಕದ ಮೂಲಕ ಅವರನ್ನು ಭೇಟಿಯಾಗಿದ್ದರು. "ಅವಳು ಕಷ್ಟಪಟ್ಟು ಸಂಪಾದಿಸಿದ್ದೆಲ್ಲವೂ ಸಿಗುವ ಸಮಯದಲ್ಲಿ ಎಲ್ಲರನ್ನೂ ಬಿಟ್ಟುಹೋಗಿದ್ದಾಳೆ" ಎಂದು ನೆರೆಹೊರೆಯವರು ಕಣ್ಣೀರಾಗಿದ್ದಾರೆ.
ಗಗನಸಖಿ ಆಗಿರುವ ಜೊತೆಗೆ, ಅವರು 54,000 ಕ್ಕೂ ಹೆಚ್ಚು ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ಗಳನ್ನು ಹೊಂದಿರುವ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕೂಡ ಆಗಿದ್ದಾರೆ. ಅವರ ಇನ್ಸ್‌ಟಾ ಖಾತೆಯು ಈಗ ಸಂತಾಪ ಸಂದೇಶಗಳಿಂದ ತುಂಬಿದೆ. "ರೋಶ್ನಿ, ನೀವು ಎತ್ತರಕ್ಕೆ ಹಾರಿದ್ದೀರಿ. ನೀವು ಸ್ವಲ್ಪ ಹೆಚ್ಚು ದೂರ ಹಾರಿದ್ದೀರಿ" ಎಂದು ಹೆಚ್ಚಿನವರು ಕಾಮೆಂಟ್ ಮಾಡಿದ್ದಾರೆ.