ದುಬೈಯಿಂದ ಇಸ್ರೇಲ್‌ ನ ತೆಲ್‌ ಅವೀವ್‌ ಗೆ ತೆರಳುತ್ತಿದ್ದ ವಿಮಾನ ಹೈಜಾಕ್ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಡಿಟೇಲ್ಸ್‌ ಹೊರಗೆ ಬರ್ತಿದೆ. ಆದ್ರೆ ಕೋ ಪೈಲಟ್‌ ಬಗ್ಗೆ ಏಜೆನ್ಸಿ ಮಾಹಿತಿ ಮುಚ್ಚಿಟ್ಟಿದ್ದು, ಅಲ್ಪಸ್ವಲ್ಪ ಮಾಹಿತಿ ಮಾತ್ರ ಹೊರ ಬಿದ್ದಿದೆ.

ದುಬೈಯಿಂದ ಇಸ್ರೇಲ್ನ ತೆಲ್ ಅವೀವ್ಗೆ ತೆರಳುತ್ತಿದ್ದ ವಿಮಾನದಲ್ಲಿ ಏಕಾಏಕಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ವಿಮಾನದ ಕಾಕ್ಪಿಟ್ನಲ್ಲಿದ್ದ ಕೋ-ಪೈಲಟ್ ಏಕಾಏಕಿ ಹಿಂಸಾತ್ಮಕವಾಗಿ ವರ್ತಿಸಿ, ಪೈಲಟ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದ. ವಿಮಾನ ಹೈಜಾಕ್‌ ಮಾಡಲು ಪ್ರಯತ್ನಿಸಿದ್ದ ಎನ್ನಲಾಗಿದೆ. ಘಟನೆ ವೇಳೆ ವಿಮಾನ ನಿಯಂತ್ರಣ ಕಳೆದುಕೊಂಡು ವೇಗವಾಗಿ ಕೆಳಕ್ಕೆ ಇಳಿಯಲು ಆರಂಭಿಸಿತ್ತು. ಕೇವಲ ಎರಡು ನಿಮಿಷಗಳೊಳಗೆ ವಿಮಾನ ಸುಮಾರು 17,400 ಅಡಿ ಕೆಳಗೆ ಇಳಿದಿತ್ತು ಎಂದು ಫ್ಲೈಟ್ ಟ್ರ್ಯಾಕಿಂಗ್ ಡೇಟಾ ತಿಳಿಸಿದೆ.

ಸ್ಥಳೀಯ ಕಾಲಮಾನ ಪ್ರಕಾರ ಬುಧವಾರ ಬೆಳಗ್ಗೆ 8:31ಕ್ಕೆ ಫ್ಲೈಟ್ FZ1073 ಡಿಸ್ಟ್ರೆಸ್ ಕಾಲ್ ಕಳುಹಿಸಿತ್ತು. ಕೆಲವೇ ನಿಮಿಷಗಳ ಬಳಿಕ 7500 ಕೋಡ್ ಕೂಡ ಕಳುಹಿಸಲಾಗಿತ್ತು. ವಿಮಾನ ಹೈಜಾಕ್ ಆಗಿರುವ ಸಂದರ್ಭದಲ್ಲಿ ಈ ಕೋಡ್ ಬಳಸಲಾಗುತ್ತದೆ.

ಕೋ ಪೈಲಟ್‌ ನಿಂದ ದಾಳಿ

ಮಾಹಿತಿಯ ಪ್ರಕಾರ, ಕೋ-ಪೈಲಟ್ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಕ್ಯಾಪ್ಟನ್ ಗಂಭೀರವಾಗಿ ಗಾಯಗೊಂಡಿದ್ದರೂ ವಿಮಾನದ ನಿಯಂತ್ರಣವನ್ನು ಬಿಟ್ಟುಕೊಡಲಿಲ್ಲ ಎನ್ನಲಾಗಿದೆ. ಈ ನಡುವೆ ವಿಮಾನ ವೇಗವಾಗಿ ಕೆಳಕ್ಕೆ ಇಳಿಯುತ್ತಿದ್ದುದರಿಂದ ಪರಿಸ್ಥಿತಿ ಮತ್ತಷ್ಟು ಆತಂಕಕಾರಿಯಾಗಿತ್ತು. ವಿಮಾನದಲ್ಲಿ 170ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು.

ಕ್ಯಾಪ್ಟನ್ ಸ್ಮಿತ್ ಕಾಕ್ಪಿಟ್ ಬಾಗಿಲು ತೆರೆದಿದ್ದು, ಇದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿ ಒಳಗೆ ಹೋಗಲು ಸಾಧ್ಯವಾಯಿತು. ಅವರು ದಾಳಿ ನಡೆಸಿದ್ದ ಕೋ-ಪೈಲಟ್ನನ್ನು ನಿಯಂತ್ರಿಸಲು ಸಹಾಯ ಮಾಡಿದರು ಎನ್ನಲಾಗಿದೆ. ಘಟನೆಯ ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದತ್ತ ತಿರುಗಿಸಲಾಯಿತು. ವಿಮಾನದಲ್ಲಿದ್ದ ಇಬ್ಬರು ಆಫ್-ಡ್ಯೂಟಿ ಪೈಲಟ್ಗಳು ನಿಯಂತ್ರಣವನ್ನು ವಹಿಸಿಕೊಂಡು ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ವಿಮಾನದಲ್ಲಿದ್ದ ಕ್ಯಾಪ್ಟನ್ ಮತ್ತು ಕೋ-ಪೈಲಟ್ ಇಬ್ಬರೂ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಯಾಪ್ಟನ್ ಸ್ಮಿತ್ ಅವರನ್ನು ತಬೂಕ್ನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಕೋ ಪೈಲಟ್ ಯಾರು?

ಕೋ-ಪೈಲಟ್ ಒಮಾನ್ ದೇಶದ ಪ್ರಜೆ ಎಂದು ವರದಿಯಾಗಿದೆ. ಆದರೆ ಆತನಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ. ವಿಮಾನವನ್ನು ವೇಗವಾಗಿ ಕೆಳಕ್ಕೆ ಇಳಿಸಿ ಕ್ರ್ಯಾಶ್ ಮಾಡಲು ಪ್ರಯತ್ನ ನಡೆದಿತ್ತು ಎಂದು ಪ್ರಯಾಣಿಕರಿಂದ ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ. ಘಟನೆಯ ಬಳಿಕ ವಿಮಾನದಲ್ಲಿದ್ದ ಬಹುತೇಕ ಪ್ರಯಾಣಿಕರು ಮತ್ತೊಂದು ಫ್ಲೈಟ್ ಮೂಲಕ ಇಸ್ರೇಲ್ಗೆ ತೆರಳಿದ್ದಾರೆ.