* ಗೋವಾದಲ್ಲಿ ಬಿಜೆಪಿ ಜಯ ಖಚಿತ: ಶಾ* ಬಿಜೆಪಿಯ ಚಿನ್ನದ ಗೋವಾ ಬೇಕೆ? ಕಾಂಗ್ರೆಸ್‌ನ ಗಾಂಧಿ ಪರಿವಾರ ಗೋವಾ ಬೇಕೆ?* ಗೋವಾ ಮತದಾರರಿಗೆ ಬಿಜೆಪಿ ನಾಯಕ ಅಮಿತ್ ಶಾ ಪ್ರಶ್ನೆ* ಮಣಿಪುರದಲ್ಲಿ ‘ಟಿಕೆಟ್ ಗಲಾಟೆ’: ಬಿಜೆಪಿಗರಿಂದಲೇ ಮೋದಿ ಪ್ರತಿಕೃತಿ ದಹನ
ಪೊಂಡಾ(ಗೋವಾ)(ಜ. 31) ಬಿಜೆಪಿ (BJP) ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು, ‘ನಿಮಗೆ ಬಿಜೆಪಿಯ ಚಿನ್ನದ ಗೋವಾ ಬೇಕಾ ಅಥವಾ ಕಾಂಗ್ರೆಸ್‌ನ (Congress) ಗಾಂಧಿ ಪರಿವಾರದ ಗೋವಾ ಬೇಕೇ ಎಂಬುದನ್ನು ನೀವೇ ತೀರ್ಮಾನ ಮಾಡಿಕೊಳ್ಳಿ’ ಎಂದು ಹೇಳಿದ್ದಾರೆ. ಅಲ್ಲದೆ ಬಿಜೆಪಿಯಿಂದ ಮಾತ್ರವೇ ಕರಾವಳಿಯ ಪುಟ್ಟರಾಜ್ಯದ ಅಭಿವೃದ್ಧಿ ಸಾಧ್ಯ. ಇಲ್ಲಿ ಬಿಜೆಪಿ ಜಯ ಖಚಿತ ಎಂದು ಹೇಳಿದರು.
ಭಾನುವಾರ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾ ಅವರು, ‘ಕಾಂಗ್ರೆಸ್‌ನ ಗಾಂಧೀ ಪರಿವಾರವು ಗೋವಾವನ್ನು ತಮ್ಮ ಪ್ರವಾಸದ ತಾಣವಾಗಿ ಪರಿಗಣಿಸುತ್ತದೆ. ಆದರೆ ಬಿಜೆಪಿಯು ಗೋವಾ ಮುಖ್ಯಮಂತ್ರಿಯಾಗಿದ್ದ ದಿ. ಮನೋಹರ್ ಪರ್ರಿಕರ್ ಅವರ ಚಿನ್ನದ ಗೋವಾದ ಕನಸನ್ನು ನನಸು ಮಾಡಿದೆ’ ಎಂದು ಹೇಳಿದರು.
‘ಇನ್ನು ಗೋವಾದಲ್ಲಿ ಚುನಾವಣಾ ಅಖಾಡಕ್ಕಿಳಿದ ಟಿಎಂಸಿ, ಆಪ್, ಎನ್‌ಸಿಪಿ ಪಕ್ಷಗಳು ತಮ್ಮ ನೆಲೆಯನ್ನು ವಿಸ್ತರಿಸಿಕೊಳ್ಳಲು ಅಥವಾ ತಮ್ಮ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಮಾನ್ಯತೆಗಾಗಿ ಸ್ಪರ್ಧಿಸುತ್ತಿವೆ. ಈ ಪಕ್ಷಗಳಿಂದ ಗೋವಾದಲ್ಲಿ ಸರ್ಕಾರ ರಚನೆ ಅಸಾಧ್ಯ. ಬಿಜೆಪಿಯಿಂದ ಮಾತ್ರವೇ ಸರ್ಕಾರ ರಚನೆ ಸಾಧ್ಯ. ರಾಜಕೀಯ ಸ್ಥಿರತೆ ಇರದಿದ್ದರೆ, ಅಭಿವೃದ್ಧಿ ನಿರೀಕ್ಷೆ ಸಾಧ್ಯವೇ ಇಲ್ಲ’ ಎಂದು ಹೇಳಿದರು.
5 States Election: ಯೋಗಿ ಗೆಲುವಿಗೆ ಅಮಿತ್ ಶಾ ಪ್ರತಿಜ್ಞೆ, ಉತ್ತರ ಪ್ರದೇಶದಲ್ಲಿ ಸಂಚಲನ
ಪಂಜಾಬ್ ಚುನಾವಣೆ: ಸಿಎಂ ಚನ್ನಿ 2 ಕ್ಷೇತ್ರಗಳಿಂದ ಕಣಕ್ಕೆ: ಚಂಡೀಗಢ: ಫೆ.20ರಂದು ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ 2 ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧೆ ಮಾಡಲಿದ್ದಾರೆ. ಚಮಕೂರ್ ವಿಧಾನಸಭಾ ಕ್ಷೇತ್ರ ಮತ್ತು ಬದೌರ್ ವಿಧಾನಸಭಾ ಕ್ಷೇತ್ರದಿಂದ ಅವರು ಸ್ಪರ್ಧೆ ಮಾಡಲಿದ್ದಾರೆ. ಭಾನುವಾರ 9 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಇದರಲ್ಲಿ ಚೆನ್ನಿ ಬದೌರ್ (ಎಸ್ಸಿ) ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದನ್ನು ಘೋಷಿಸಲಾಗಿದೆ. ಈ ಹಿಂದೆ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲೂ ಚಮಕೂರ್ ಕ್ಷೇತ್ರದಿಂದ ಚೆನ್ನಿ ಅವರ ಹೆಸರನ್ನು ಆಯ್ಕೆ ಮಾಡಲಾಗಿತ್ತು. ಚೆನ್ನಿ ಅವರು ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿಯಾಗಿದ್ದಾರೆ. ಕ್ಯಾ. ಅಮರೀಂದರ್ ಸಿಂಗ್ ಅವರ ರಾಜೀನಾಮೆ ನಂತರ ಇವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿತ್ತು.
ಮಣಿಪುರದಲ್ಲಿ ‘ಟಿಕೆಟ್ ಗಲಾಟೆ’: ಬಿಜೆಪಿಗರಿಂದಲೇ ಮೋದಿ ಪ್ರತಿಕೃತಿ ದಹನ: ಮಣಿಪುರದಲ್ಲಿ ಮುಂದಿನ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಬಿಡುಗಡೆಯಾದ ಬೆನ್ನಲ್ಲೇ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹಲವು ಬಿಜೆಪಿ ಕಾರ್ಯಕರ್ತರು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಎನ್. ಬೀರೇನ್ ಸಿಂಗ್ ಅವರ ಪ್ರತಿಕೃತಿ ದಹಿಸಿದ್ದಾರೆ. ಪಕ್ಷದ ವಿರುದ್ಧ ಘೊಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಇಂಫಾಲ್‌ನಲ್ಲಿರುವ ಬಿಜೆಪಿ ಕಚೇರಿಗೆ ಭದ್ರತೆ ಒದಗಿಸಲಾಗಿದೆ. ಹಲವು ಬಿಜೆಪಿ ನಾಯಕರು ಪಕ್ಷ ತೊರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದ 10 ಜನರಿಗೆ ಟಿಕೆಟ್ ನೀಡಿರುವುದೇ ಈ ಅಸಮಾಧಾನಕ್ಕೆ ಕಾರಣವಾಗಿದೆ.
ಬಿಜೆಪಿ ಕ್ರಿಮಿನಲ್ ಅಭ್ಯರ್ಥಿಗಳ ಶತಕಕ್ಕೆ ಕೇವಲ 1 ಬಾಕಿ: ಲಖನೌ: ಉತ್ತರ ಪ್ರದೇಶದಲ್ಲಿ ಚುನಾವಣೆ ಹಿನ್ನಲೆಯಲ್ಲಿ ವಾಕ್ಸಮರ ಮುಂದುವರೆದಿದ್ದು, ಕ್ರಿಮಿನಲ್ ಹಿನ್ನಲೆ ಹೊಂದಿರುವ ಇನ್ನೊಬ್ಬ ಅಭ್ಯರ್ಥಿಗೆ ಬಿಜೆಪಿಗೆ ಟಿಕೆಟ್ ನೀಡಿದರೆ, ಕ್ರಿಮಿನಲ್ ಅಭ್ಯರ್ಥಿಗಳ ಸಂಖ್ಯೆ 100 ತಲುಪಲಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾನುವಾರ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಬಿಜೆಪಿ ಈಗಾಗಲೇ ಕ್ರಿಮಿನಲ್ ಹಿನ್ನಲೆ ಹೊಂದಿರುವ 99 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಯೋಗಿ ಆದಿತ್ಯನಾಥ್ ಶತಕ ಬಾರಿಸಲು ಇನ್ನೂ ಒಬ್ಬನೇ ಒಬ್ಬ ಕ್ರಿಮಿನಲ್ ಹಿನ್ನಲೆ ಉಳ್ಳ ಅಭ್ಯರ್ಥಿಗೆ ಟಿಕೆಟ್ ನೀಡುವುದು ಬಾಕಿ ಇದೆ’ ಎಂದು ಹೇಳಿದ್ದಾರೆ. ಚುನಾವಣೆಗಾಗಿ 294 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.
