ತಮಿಳುನಾಡಿನ ಕಲ್ಪಾಕಂನಲ್ಲಿರುವ ಸಂಪೂರ್ಣ ಸ್ವದೇಶಿ ಫಾಸ್ಟ್ ಬ್ರೀಡರ್ ರಿಯಾಕ್ಟರ್ ನಿರ್ಣಾಯಕ ಹಂತ ತಲುಪಿದ್ದು, ಪರಮಾಣು ವಿದ್ಯುತ್ ಉತ್ಪಾದನೆಯಲ್ಲಿ ಭಾರತ ಐತಿಹಾಸಿಕ ಮೈಲುಗಲ್ಲು ಸಾಧಿಸಿದೆ. ಈ ತಂತ್ರಜ್ಞಾನವು ಬಳಸಿದ ಇಂಧನದಿಂದಲೇ ಹೊಸ ಇಂಧನ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ..

  • ಕಲ್ಪಾಕಂ ಘಟಕ ಸಂಪೂರ್ಣ ಸ್ವದೇಶಿ ವಿನ್ಯಾಸ ಮತ್ತು ಸ್ವದೇಶಿ ನಿರ್ಮಿತ
  • ಇಲ್ಲಿ ಯುರೇನಿಯಂ ಬಳಸಿದ ಬಳಿಕ ಲಭ್ಯ ಪ್ಲುಟೋನಿಯಂ ಮರುಬಳಕೆ
  • ವಿದ್ಯುತ್‌ ಉತ್ಪಾದನೆಗೆ ಕಡಿಮೆ ಯುರೇನಿಯಂ ಸಾಕು, ತ್ಯಾಜ್ಯವೂ ಕಡಿಮೆ
  • ಸದ್ಯ ರಿಯಾಕ್ಟರ್‌ನಲ್ಲಿ ಅಣು ವಿದಳನ ಕ್ರಿಯೆ ಸುಸ್ಥಿರ ಹಂತಕ್ಕೆ ತಲುಪಿದೆ
  • ಇದು ಇಂಧನ ಉತ್ಪಾದನೆಗೆ ಮುನ್ನಾ ಇರುವ ಪ್ರಮುಖ ಹಂತವಾಗಿದೆ

ನವದೆಹಲಿ: ತಮಿಳುನಾಡಿನ ಕಲ್ಪಾಕಂ ಅಣು ವಿದ್ಯುತ್‌ ಸ್ಥಾವರದಲ್ಲಿನ ಸಂಪೂರ್ಣ ಸ್ವದೇಶಿ ನಿರ್ಮಿತ ಪ್ರೋಟೋಟೈಪ್‌ ಫಾಸ್ಟ್ ಬ್ರೀಡರ್ ರಿಯಾಕ್ಟರ್‌ (ಪಿಎಫ್‌ಬಿಆರ್‌) ಇದೀಗ ನಿರ್ಣಾಯಕ ಹಂತ ತಲುಪಿದ್ದು, ಪೂರ್ಣ ಸ್ವಾವಲಂಬಿ ಪರಮಾಣು ವಿದಳನ ಪ್ರಕ್ರಿಯೆ ಆರಂಭಿಸಿದೆ. ಇದನ್ನು ಪರಮಾಣು ವಿದ್ಯುತ್‌ ಉತ್ಪಾದನೆಯಲ್ಲಿ ಬಹುದೊಡ್ಡ ಮೈಲುಗಲ್ಲು ಎಂದೇ ಪರಿಗಣಿಸಲಾಗಿದೆ ಹಾಗೂ ರಷ್ಯಾ ಬಳಿಕ ಈ ಸಾಧನೆ ಮಾಡಿದ 2ನೇ ದೇಶ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದೆ.

ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿದ್ದು, ‘ಇದು ಭಾರತದ ಪರಮಾಣು ಪ್ರಯಾಣದಲ್ಲಿ ನಿರ್ಣಾಯಕ ಕ್ಷಣ’ ಎಂದು ಬಣ್ಣಿಸಿದ್ದಾರೆ.

ದೇಶದ ಉಳಿದೆಲ್ಲಾ ಪರಮಾಣು ಸ್ಥಾವರಗಳಲ್ಲಿನ ತಂತ್ರಜ್ಞಾನಗಳು ವಿದೇಶಿ ಆಗಿರುವ ನಡುವೆ, ಕಲ್ಪಾಕಂ ಸ್ಥಾವರವನ್ನು ಸಂಪೂರ್ಣವಾಗಿ ಭಾರತದಲ್ಲಿಯೇ ವಿನ್ಯಾಸಗೊಳಿಸಿ ಮತ್ತು ನಿರ್ಮಿಸಲಾಗಿದೆ ಎಂಬುದು ಗಮನಾರ್ಹ. ಇಲ್ಲಿ ಇದೀಗ ಆರಂಭವಾಗಿರುವ ವಿದಳನ ಕ್ರಿಯೆಯಿಂದಾಗಿ ಮುಂದಿನ ದಿನಗಳಲ್ಲಿ ಒಮ್ಮೆಗೆ 500 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಆಗಲಿದ್ದು, 5 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್‌ ಸರಬರಾಜು ಮಾಡಬಹುದಾಗಿದೆ.

ಸಾಧನೆಯೇನು?:

ಸಾಮಾನ್ಯವಾಗಿ ಮೊದಲ ಹಂತದಲ್ಲಿ ವಿದ್ಯುತ್‌ ಉತ್ಪಾದಿಸಲು ಅಣು ಸ್ಥಾವರಗಳಲ್ಲಿ ಯುರೇನಿಯಂ ಅನ್ನು ಇಂಧನವಾಗಿ ಬಳಸಲಾಗುತ್ತದೆ. ಪೂರೈಸಲಾದ ಯುರೇನಿಯಂ ಬಳಸಿ ಎಷ್ಟಾಗುವುದೋ ಅಷ್ಟೇ ವಿದ್ಯುತ್‌ಅನ್ನು ಈವರೆಗೆ ಉತ್ಪಾದಿಸಲಾಗುತ್ತಿತ್ತು. ಅದರಿಂದ ಬರುತ್ತಿದ್ದ ಪ್ಲುಟೋನಿಯಂ ತ್ಯಾಜ್ಯವಾಗುತ್ತಿತ್ತು. ಆದರೆ ಇದೀಗ ಕಲ್ಪಾಕಂನಲ್ಲಿ ಆರಂಭವಾಗಿರುವ ವಿದಳನ ಪ್ರಕ್ರಿಯೆಯಲ್ಲಿ, ಪ್ಲುಟೋನಿಯಂಅನ್ನು ಕೂಡ ಬಳಸಿಕೊಳ್ಳಲಾಗುವುದು. ಈ 2ನೇ ಹಂತದಿಂದ ಯುರೇನಿಯಂ ಆವಶ್ಯಕತೆ ತಗ್ಗುವುದರ ಜತೆಗೆ, ಪ್ಲುಟೋನಿಯಂ ವ್ಯರ್ಥವಾಗಿ ಹೋಗುವುದೂ ತಪ್ಪುತ್ತದೆ. ಈ ಮೂಲಕ, ಇಂಧನವನ್ನು ಉರಿಸುತ್ತಲೇ ತನಗೆ ಬೇಕಾದುದಕ್ಕಿಂತ ಹೆಚ್ಚಿನ ಇಂಧನವನ್ನು ತಯಾರಿಸಿಕೊಳ್ಳುತ್ತದೆ.

ಅಂತೆಯೇ, ಈ ಪ್ರಕ್ರಿಯೆಯ ವೇಳೆ ಉತ್ಪಾದನೆಯಾಗುವ ಉಷ್ಣಾಂಶವನ್ನು ತಗ್ಗಿಸಲು ನೀರಿನ ಬದಲು ದ್ರವರೂಪದಲ್ಲಿರುವ ಸೋಡಿಯಂಅನ್ನು ಬಳಸಲಾಗುವುದು. ಇದರಿಂದ ನ್ಯೂಟ್ರಾನ್‌ಗಳ ಚಲನೆಯ ವೇಗ ತಗ್ಗದೆ, ವಿದ್ಯುತ್‌ ಉತ್ಪಾದನಾ ಪ್ರಕ್ರಿಯೆಯು ನಿರಂತವಾಗಿ ನಡೆಯುತ್ತಾ ಇರುವುದು.

ಇನ್ನೊಂದು ಮೈಲುಗಲ್ಲಿಗೆ ಮುನ್ನುಡಿ:

ಗಮನಿಸಬೇಕಾದ ಅಂಶವೆಂದರೆ, ಭಾರತದಲ್ಲಿ ಯುರೇನಿಯಂ ಅಲ್ಪಪ್ರಮಾಣದಲ್ಲಿ ಲಭ್ಯವಿದೆ. ಆದರೆ ಥೋರಿಯಂ ಕೇರಳ ಮತ್ತು ತಮಿಳುನಾಡಿನ ಕಡಲಕಿನಾರೆಯ ಮರಳಿನಲ್ಲಿ ಹೇರಳವಾಗಿ ದೊರಕುತ್ತದೆ. ಅದನ್ನು ಕೂಡ ಅಣು ವಿದ್ಯುತ್‌ ಸ್ಥಾವರಗಳಲ್ಲಿ ಬಳಸಬಹುದು. ಇದನ್ನು ಸಾಕಾರಗೊಳಿಸುವಲ್ಲಿ ಸದ್ಯದ ಸಾಧನೆ ಪ್ರಮುಖ ಪಾತ್ರವನ್ನು ವಹಿಸುತ್ತದೆ.

3ನೇ ಹಂತದಡಿ ರಿಯಾಕ್ಟರ್‌ನ ಒಳಗೆ ಥೋರಿಯಂ ಮತ್ತು 2ನೇ ಹಂತದಲ್ಲಿ ಉತ್ಪಾದನೆಯಾದ ಇಂಧನವನ್ನು ಹಾಕಲಾಗುತ್ತದೆ. ಇದರಿಂದ ಯುರೇನಿಯಂ-233ಅನ್ನು ಉತ್ಪಾದನೆ ಮಾಡಬಹುದು. ಈ ಯುರೇನಿಯಂ ಸುಲಭವಾಗಿ ವಿಭಜನೆಗೊಂಡು ಅತಿಹೆಚ್ಚು ಉಷ್ಣಾಂಶ ಬಿಡುಗಡೆ ಮಾಡುವ ಕಾರಣ ಅಪಾರ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಸಾಧ್ಯವಾಗುತ್ತದೆ.

ಇದು ಕಾರ್ಯರೂಪಕ್ಕೆ ಬಂದರೆ, ಪರಮಾಣು ವಿದ್ಯುತ್‌ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬನೆಯನ್ನು ಸಾಧಿಸಬಹುದು.

ಪ್ರಧಾನಿ ಅಭಿನಂದನೆ:

ಪ್ರಧಾನಿ ಮೋದಿ ಈ ಬೆಳವಣಿಗೆಯನ್ನು ಶ್ಲಾಘಿಸಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ‘ಕಲ್ಪಾಕಂನಲ್ಲಿರುವ ಸ್ಥಳೀಯವಾಗಿ ನಿರ್ಮಿಸಲಾದ ಪಿಎಫ್‌ಬಿಆರ್‌ ನಿರ್ಣಾಯಕ ಘಟ್ಟವನ್ನು ತಲುಪಿದೆ. ಇದು ನಮ್ಮ ವೈಜ್ಞಾನಿಕ ಸಾಮರ್ಥ್ಯದ ಆಳ ಮತ್ತು ನಮ್ಮ ಎಂಜಿನಿಯರಿಂಗ್ ಉದ್ಯಮದ ಬಲವನ್ನು ಪ್ರತಿಬಿಂಬಿಸುತ್ತದೆ. ಭಾರತದಲ್ಲಿ ಹೇರಳವಾಗಿರುವ ಥೋರಿಯಂ ನಿಕ್ಷೇಪಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ’ ಎಂದು ಹೇಳಿದ್ದಾರೆ.

ಪೂರ್ಣ ಸ್ವದೇಶಿ ಘಟಕ:

ಪಿಎಫ್‌ಬಿಆರ್‌ ಅನ್ನು ಪರಮಾಣು ಶಕ್ತಿ ಇಲಾಖೆಯ ಅಧೀನದಲ್ಲಿರುವ ಇಂದಿರಾ ಗಾಂಧಿ ಪರಮಾಣು ಸಂಶೋಧನಾ ಕೇಂದ್ರ(ಐಜಿಸಿಎಆರ್‌) ವಿನ್ಯಾಸ ಮಾಡಿದ್ದು, ಭಾರತೀಯ ನಾಭಿಕಿಯಾ ವಿದ್ಯುತ್ ನಿಗಮ್ ಲಿ.(ಭವಾನಿ) ನಿರ್ಮಾಣ ಮಾಡಿದೆ.