ಮಹಾರಾಷ್ಟ್ರದ ಲಾತೂರ್‌ನಲ್ಲಿ, 89 ವರ್ಷದ ವೃದ್ಧೆಯೊಬ್ಬರು ತಮ್ಮನ್ನು ನೋಡಿಕೊಳ್ಳುತ್ತಾರೆಂಬ ನಂಬಿಕೆಯ ಮೇಲೆ ಮೊಮ್ಮಕ್ಕಳಿಗೆ 7.5 ಎಕರೆ ಜಮೀನನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ, ಆಸ್ತಿ ಪಡೆದ ನಂತರ ಮೊಮ್ಮಕ್ಕಳು ಅವರನ್ನು ಅಲಕ್ಷಿಸಿದಾಗ ಕೋರ್ಟ್ ಮೆಟ್ಟಿಲೇರಿ ಗೆಲುವು ಕಂಡಿದ್ದಾರೆ.
ಲಾತೂರ್ (ಜೂ.11): ಕುಟುಂಬದವರು ನೀಡುವ ಭರವಸೆ ಅಥವಾ ಮಾತುಗಳನ್ನು ನೀವು ಎಷ್ಟು ಮಟ್ಟಿಗೆ ನಂಬುತ್ತೀರಿ? ಅನೇಕ ಹಿರಿಯ ನಾಗರಿಕರು, ತಮ್ಮ ಜೀವಮಾನದ ಆಸ್ತಿಯನ್ನು ಮಕ್ಕಳಿಗೆ ಅಥವಾ ಮೊಮ್ಮಕ್ಕಳಿಗೆ ವರ್ಗಾಯಿಸುವುದು ಕೇವಲ ಒಂದು ಆರ್ಥಿಕ ನಿರ್ಧಾರ ಮಾತ್ರವಲ್ಲ. ತಮ್ಮ ಇಳಿವಯಸ್ಸಿನಲ್ಲಿ ಪ್ರೀತಿಪಾತ್ರರು ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ, ಆಸರೆಯಾಗುತ್ತಾರೆ ಮತ್ತು ಭದ್ರತೆ ನೀಡುತ್ತಾರೆ ಎಂಬ ದೊಡ್ಡ ನಂಬಿಕೆ ಹಾಗೂ ಆಸೆಯೊಂದಿಗೆ ಅವರು ಈ ನಿರ್ಧಾರ ಕೈಗೊಳ್ಳುತ್ತಾರೆ. ಆದರೆ, ಆ ನಂಬಿಕೆಗೆ ದ್ರೋಹವಾದಾಗ ಏನಾಗುತ್ತದೆ?
ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಇಂತಹದ್ದೇ ಒಂದು ಘಟನೆ ಈಗ ಇಡೀ ದೇಶದ ಗಮನ ಸೆಳೆದಿದೆ. ಹಿರಿಯ ನಾಗರಿಕರಿಗೆ ದೇಶದ ಕಾನೂನು ವ್ಯವಸ್ಥೆ ಎಷ್ಟು ದೊಡ್ಡ ಶಕ್ತಿಯಾಗಿ ನಿಲ್ಲಬಲ್ಲದು ಎಂಬುದನ್ನು ಈ ಪ್ರಕರಣ ಸಾಬೀತುಪಡಿಸಿದೆ. ಆಸ್ತಿ ಕೈ ಸೇರಿದ ತಕ್ಷಣ ತನ್ನನ್ನು ಅಲಕ್ಷಿಸಿದ ಮೊಮ್ಮಗ ಮತ್ತು ಮರಿಮೊಮ್ಮಗನಿಗೆ ಬುದ್ಧಿ ಕಲಿಸಿರುವ 89 ವರ್ಷದ ವೃದ್ಧೆಯೊಬ್ಬರು, ಕೋರ್ಟ್ ಮೆಟ್ಟಿಲೇರಿ ತಮಗೆ ಸೇರಬೇಕಾದ 7.5 ಎಕರೆ ಕೃಷಿ ಭೂಮಿಯನ್ನು ಯಶಸ್ವಿಯಾಗಿ ವಾಪಸ್ ಪಡೆದಿದ್ದಾರೆ. ಹಿರಿಯ ನಾಗರಿಕರ ಟ್ರಿಬ್ಯುನಲ್ (ನ್ಯಾಯಮಂಡಳಿ) ವೃದ್ಧೆ ಮಾಡಿಕೊಟ್ಟಿದ್ದ ಗಿಫ್ಟ್ ಡೀಡ್ ರದ್ದುಗೊಳಿಸಿ ಈ ಐತಿಹಾಸಿಕ ಆದೇಶ ನೀಡಿದೆ.
ಪಿಟಿಐ (PTI) ವರದಿ ಮಾಡಿರುವ ಪ್ರಕಾರ, ಲಾತೂರ್ ಜಿಲ್ಲೆಯ ಕರ್ಸಾ ಗ್ರಾಮದ ನಿವಾಸಿಯಾದ ಹೌಸಾಬಾಯಿ ಲಹಾದೆ ಎಂಬ 89 ವರ್ಷದ ವೃದ್ಧೆಗೆ ನ್ಯಾಯಮಂಡಳಿಯು ಮೂರು ಹೆಕ್ಟೇರ್ (ಸುಮಾರು 7.5 ಎಕರೆ) ಕೃಷಿ ಭೂಮಿಯ ಮಾಲೀಕತ್ವ ಹಕ್ಕನ್ನು ಮರುಸ್ಥಾಪಿಸಿದೆ.
ಆಸ್ತಿ ಪಡೆದು ಅಜ್ಜಿಯನ್ನು ಕೈಬಿಟ್ಟ ಮೊಮ್ಮಕ್ಕಳು
ಟ್ರಿಬ್ಯುನಲ್ ದಾಖಲೆಗಳ ಪ್ರಕಾರ, ಹೌಸಾಬಾಯಿ ಅವರು ತಮ್ಮ ಇಳಿವಯಸ್ಸಿನಲ್ಲಿ ತನ್ನನ್ನು ಚೆನ್ನಾಗಿ ಆರೈಕೆ ಮಾಡುತ್ತಾರೆ ಮತ್ತು ಜೀವನಕ್ಕೆ ಆಸರೆಯಾಗುತ್ತಾರೆ ಎಂಬ ಒಪ್ಪಂದ ಹಾಗೂ ನಂಬಿಕೆಯ ಮೇಲೆ ತಮ್ಮ 7.5 ಎಕರೆ ಜಮೀನನ್ನು ಮೊಮ್ಮಗ ಮತ್ತು ಮರಿಮೊಮ್ಮಗನ ಹೆಸರಿಗೆ ನೋಂದಾಯಿತ ಉಡುಗೊರೆ ಪತ್ರದ (Registered Gift Deed) ಮೂಲಕ ವರ್ಗಾವಣೆ ಮಾಡಿಕೊಟ್ಟಿದ್ದರು.
ಆದರೆ, ಆಸ್ತಿ ಕೈ ಸೇರಿದ ಕೆಲವೇ ದಿನಗಳಲ್ಲಿ ಇಡೀ ಕಥೆ ಬದಲಾಯಿತು. ಜಮೀನು ತಮ್ಮ ಹೆಸರಿಗೆ ಬರುತ್ತಿದ್ದಂತೆ ಮೊಮ್ಮಕ್ಕಳು ವೃದ್ಧೆ ಹೌಸಾಬಾಯಿ ಅವರನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದ ನುಣುಚಿಕೊಂಡರು. ತನಗೆ ವಂಚನೆಯಾಗಿರುವುದು ಮತ್ತು ಇಳಿವಯಸ್ಸಿನಲ್ಲಿ ಅನಾಥೆಯಾಗಿರುವುದು ಅರಿವಿಗೆ ಬರುತ್ತಿದ್ದಂತೆ ಧೃತಿಗೆಡದ ಹೌಸಾಬಾಯಿ, 'ಹಿರಿಯ ನಾಗರಿಕರ ಮತ್ತು ಪೋಷಕರ ಪೋಷಣೆ ಹಾಗೂ ಕಲ್ಯಾಣ ಕಾಯ್ದೆ, 2007' (Maintenance and Welfare of Parents and Senior Citizens Act, 2007) ಅಡಿಯಲ್ಲಿ ನ್ಯಾಯ ಕೋರಿ ಟ್ರಿಬ್ಯುನಲ್ ಮೆಟ್ಟಿಲೇರಿದರು. ಮಾರ್ಚ್ 18 ರಂದೇ ಹೊರಡಿಸಲಾಗಿದ್ದ ಈ ಆದೇಶದ ಪ್ರತಿ ಇದೀಗ ಲಭ್ಯವಾಗಿದೆ.
ಕಾನೂನುಬದ್ಧ ಆದೇಶ ಹೊರಡಿಸಿದ ಟ್ರಿಬ್ಯುನಲ್
ಭೂಮಿ ವರ್ಗಾವಣೆಯ ಸಂದರ್ಭದಲ್ಲಿ ವಿಧಿಸಲಾಗಿದ್ದ ಷರತ್ತುಗಳನ್ನು ಮತ್ತು ಭರವಸೆಗಳನ್ನು ಮೊಮ್ಮಕ್ಕಳು ಗೌರವಿಸಿದ್ದಾರೆಯೇ ಇಲ್ಲವೇ ಎಂಬುದರ ಮೇಲೆ ಈ ಇಡೀ ಪ್ರಕರಣ ನಿಂತಿತ್ತು. ಆಸರೆ ಸಿಗದೆ ಬೀದಿಗೆ ಬಿದ್ದಿದ್ದ ಹೌಸಾಬಾಯಿ ಅವರ ಅರ್ಜಿಯನ್ನು ಸ್ವೀಕರಿಸಿದ ಟ್ರಿಬ್ಯುನಲ್, ನೋಂದಾಯಿತ ಉಡುಗೊರೆ ಪತ್ರ, ಸಾಕ್ಷ್ಯಾಧಾರಗಳು ಮತ್ತು ಇರಡೂ ಕಡೆಯ ವಾದ-ಪ್ರತಿವಾದಗಳನ್ನು ಕೂಲಂಕಷವಾಗಿ ಪರಿಶೀಲಿಸಿತು.
ಎಲ್ಲಾ ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ, ಆಸ್ತಿ ವರ್ಗಾವಣೆಗೆ ಸಂಬಂಧಿಸಿದ ಪ್ರಮುಖ ಷರತ್ತುಗಳು ಉಲ್ಲಂಘನೆಯಾಗಿರುವುದನ್ನು ಟ್ರಿಬ್ಯುನಲ್ ಖಚಿತಪಡಿಸಿಕೊಂಡಿತು. ಹಿರಿಯ ನಾಗರಿಕರಿಗೆ ನೀಡುವ ಇಂತಹ ಭರವಸೆಗಳನ್ನು ಕೇವಲ ಅನೌಪಚಾರಿಕ ಕೌಟುಂಬಿಕ ವ್ಯವಸ್ಥೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಮಂಡಳಿ ಸ್ಪಷ್ಟಪಡಿಸಿತು.
ಹಿರಿಯ ನಾಗರಿಕರ ಟ್ರಿಬ್ಯುನಲ್‌ನ ಅಧ್ಯಕ್ಷರಾದ (Presiding Officer) ರೋಹಿಣಿ ನರ್ಹೆ-ವಿರೋಲೆ ಅವರು ಈ ಸಂದರ್ಭದಲ್ಲಿ ಮಹತ್ವದ ಅವಲೋಕನ ಮಾಡಿದ್ದು, "ವೃದ್ಧಾಪ್ಯದಲ್ಲಿ ಆರೈಕೆ ಮಾಡುವ ಭರವಸೆಯ ಮೇಲೆ ಆಸ್ತಿಯನ್ನು ವರ್ಗಾವಣೆ ಮಾಡಿದಾಗ, ಆ ಭರವಸೆಗಳು ಕೇವಲ ನೈತಿಕ ಜವಾಬ್ದಾರಿಯಾಗಿ ಉಳಿಯುವುದಿಲ್ಲ, ಬದಲಿಗೆ ಅವು ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಷರತ್ತುಗಳಾಗಿರುತ್ತವೆ" ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಉಡುಗೊರೆ ಪತ್ರ ರದ್ದು, ಪಹಣಿ ಬದಲಾವಣೆಗೂ ಬ್ರೇಕ್!
ಮೊಮ್ಮಕ್ಕಳು ತಮ್ಮ ಜವಾಬ್ದಾರಿಯನ್ನು ಉಲ್ಲಂಘಿಸಿರುವುದರಿಂದ ಈ ಗಿಫ್ಟ್ ಡೀಡ್ ಅನ್ನು ರದ್ದುಗೊಳಿಸಲು ಸಂಪೂರ್ಣ ಕಾನೂನು ಅವಕಾಶವಿದೆ ಎಂದು ತಿಳಿಸಿದ ಟ್ರಿಬ್ಯುನಲ್, ಮೊಮ್ಮಗ ಮತ್ತು ಮರಿಮೊಮ್ಮಗನ ಪರವಾಗಿ ಮಾಡಲಾಗಿದ್ದ ನೋಂದಾಯಿತ ಉಡುಗೊರೆ ಪತ್ರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿತು. ಈ ಮೂಲಕ ಭೂಮಿಯ ಸಂಪೂರ್ಣ ಒಡೆತನ ಮತ್ತೆ ಹೌಸಾಬಾಯಿ ಅವರ ಕೈ ಸೇರಿತು.
ಅಷ್ಟೇ ಅಲ್ಲದೆ, ಭೂಮಿ ವರ್ಗಾವಣೆಯಾದ ನಂತರ ಕಂದಾಯ ದಾಖಲೆಗಳಲ್ಲಿ ಮಾಡಲಾಗಿದ್ದ ಎಲ್ಲಾ ಪಹಣಿ/ಮ್ಯುಟೇಷನ್ (Mutation Entries) ಬದಲಾವಣೆಗಳನ್ನು ತಕ್ಷಣವೇ ರದ್ದುಗೊಳಿಸುವಂತೆ ಕಂದಾಯ ಅಧಿಕಾರಿಗಳಿಗೆ ಟ್ರಿಬ್ಯುನಲ್ ನಿರ್ದೇಶನ ನೀಡಿದೆ. ಮ್ಯುಟೇಷನ್ ಎಂಟ್ರಿಗಳು ರದ್ದಾಗುತ್ತಿದ್ದಂತೆ, ಜಮೀನು ಕಾನೂನುಬದ್ಧವಾಗಿ ಅದರ ಮೂಲ ಮಾಲೀಕರಾದ ಹೌಸಾಬಾಯಿ ಅವರ ಹೆಸರಿಗೆ ಮರಳಿದೆ. ಭವಿಷ್ಯದಲ್ಲಿ ಈ ಆಸ್ತಿಗೆ ಸಂಬಂಧಿಸಿದಂತೆ ಯಾರೂ ಕೂಡ ಯಾವುದೇ ರೀತಿಯ ಹಸ್ತಕ್ಷೇಪ, ಅಡೆತಡೆ ಅಥವಾ ವಿವಾದವನ್ನು ಸೃಷ್ಟಿಸದಂತೆ ನೋಡಿಕೊಳ್ಳಬೇಕು ಎಂದೂ ಅಧಿಕಾರಿಗಳಿಗೆ ಕಠಿಣ ಆದೇಶ ನೀಡಲಾಗಿದೆ.
ಹಿರಿಯ ನಾಗರಿಕರ ರಕ್ಷಣೆಗೆ ಇರುವ ಕಾಯ್ದೆ
ಭಾರತದಾದ್ಯಂತ ಅನೇಕ ವಯಸ್ಸಾದ ಪೋಷಕರು ಮತ್ತು ಅಜ್ಜ-ಅಜ್ಜಿಯರು ತಮ್ಮ ಕೊನೆಯ ದಿನಗಳಲ್ಲಿ ಮಕ್ಕಳು ತಮ್ಮನ್ನು ಸಾಕುಬಹುದೆಂಬ ನಿರೀಕ್ಷೆಯೊಂದಿಗೆ ಆಸ್ತಿಯನ್ನು ಬರೆದುಕೊಡುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಈ ವ್ಯವಸ್ಥೆ ಸುಗಮವಾಗಿ ನಡೆಯುತ್ತದೆಯಾದರೂ, ಕೆಲವು ಕಡೆ ವಂಚನೆಗಳು ಮತ್ತು ವಿವಾದಗಳು ಎದುರಾಗುತ್ತವೆ. ಇಂತಹ ಸಂದರ್ಭಗಳಲ್ಲಿ ವೃದ್ಧ ಪೋಷಕರನ್ನು ಅಲಕ್ಷ್ಯ ಮತ್ತು ದೌರ್ಜನ್ಯದಿಂದ ರಕ್ಷಿಸಲು ಹಾಗೂ ಅವರಿಗೆ ಕಾನೂನುಬದ್ಧ ಆರೈಕೆಯನ್ನು ಖಚಿತಪಡಿಸಲು ಜಾರಿಗೆ ತರಲಾದ 2007 ರ ಪೋಷಕರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆಯು ಹೌಸಾಬಾಯಿ ಅವರ ಪಾಲಿಗೆ ವರದಾನವಾಗಿ ಪರಿಣಮಿಸಿದೆ.


