Asianet Suvarna News Asianet Suvarna News

ಅಪನಗದೀಕರಣ ಪ್ರಶ್ನಿಸಿದ್ದ ಅರ್ಜಿಗಳ ಕುರಿತು ಜ.2ಕ್ಕೆ ಸುಪ್ರೀಂಕೋರ್ಟ್ ತೀರ್ಪು

2016ರಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿದ್ದ ನೋಟು ರದ್ದತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಜ.2ರಂದು ತೀರ್ಪು ಪ್ರಕಟಿಸುವುದಾಗಿ ಘೋಷಿಸಿದೆ.

petitions aganist demonetisation : supreme court verdict on January 2nd akb
Author
First Published Dec 23, 2022, 10:12 AM IST

ನವದೆಹಲಿ: 2016ರಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿದ್ದ ನೋಟು ರದ್ದತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಜ.2ರಂದು ತೀರ್ಪು ಪ್ರಕಟಿಸುವುದಾಗಿ ಘೋಷಿಸಿದೆ. ಈ ಅರ್ಜಿಗಳ ವಿಚಾರಣೆ ನಡೆಸುತ್ತಿರುವ 5 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದಲ್ಲಿರುವ ನ್ಯಾ ಎಸ್‌.ಎ.ನಜೀರ್‌ ಜ.4ರಂದು ನಿವೃತ್ತರಾಗುತ್ತಿರುವುದರಿಂದ ಈಗಾಗಲೇ ಹೇಳಿರುವ ದಿನಾಂಕದಂದೇ ತೀರ್ಪು ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ. ಈ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಕೋರ್ಟ್, ನೋಟು ರದ್ದತಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಒದಗಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಡಿ.7ರಂದು ಸೂಚನೆ ನೀಡಿತ್ತು. ನೋಟು ರದ್ದತಿ ಕುರಿತಾಗಿ ಸಲ್ಲಿಕೆಯಾಗಿದ್ದ ಎಲ್ಲಾ 58 ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿರುವ ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.

ರಾಹುಲ್‌ ಜೊತೆ ಆರ್‌ಬಿಐ ಮಾಜಿ ಗವರ್ನರ್‌ ರಘುರಾಮ್‌ ಹೆಜ್ಜೆ!

ಕಳೆದ ವಾರ ರಾಜಸ್ಥಾನದಲ್ಲಿ ನಡೆದ ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್‌ ಡಾ.ರಘುರಾಮ್‌ ರಾಜನ್‌ ಅವರು ಭಾಗಿಯಾಗಿ ರಾಹುಲ್‌ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ್ದರು. ಯಾತ್ರೆ ಸವಾಯಿ ಮಾಧೋಪುರದ ಭಡೋತಿ ಪ್ರದೇಶದಿಂದ ಆರಂಭವಾದ ವೇಳೆ ರಾಜನ್‌ ಅವರು ರಾಹುಲ್‌ಗೆ ಸಾಥ್‌ ನೀಡಿದರು. ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಆರ್‌ಬಿಐ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಅವರು ರಾಹುಲ್‌ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ದ್ವೇಷದ ರಾಜಕಾರಣದ ವಿರುದ್ಧ ದೇಶವನ್ನು ಒಗ್ಗೂಡಿಸಲು ಹೆಚ್ಚುತ್ತಿರುವ ಜನರ ಸಂಖ್ಯೆಯು ನಾವು ಯಶಸ್ವಿಯಾಗುತ್ತೇವೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. 

ಈ ನಡುವೆ ರಾಹುಲ್‌ಗೆ ರಾಜನ್‌ ಬೆಂಬಲದ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ ನಾಯಕ ಅಮಿತ್‌ ಮಾಳವೀಯ ರಘುರಾಮ್‌ ಅವರು ತಮ್ಮನ್ನು ಮುಂದಿನ ಮನಮೋಹನ್‌ ಸಿಂಗ್‌ ಎಂದು ಕಲ್ಪಿಸಿಕೊಂಡಿದ್ದಾರೆ. ಯಾತ್ರೆಯಲ್ಲಿ ರಾಜನ್‌ ಭಾಗಿಯಾಗಿರುವುದು ಆಶ್ಚರ್ಯವೇನಲ್ಲ, ಭಾರತದ ಆರ್ಥಿಕತೆ ಕುರಿತ ಅವರ ವ್ಯಾಖ್ಯಾನವನ್ನು ತಿರಸ್ಕರಿಸಬೇಕು. ಇದು ಬಣ್ಣ ಮತ್ತು ಅವಕಾಶವಾದಿತನವಗಿದೆ ಎಂದು ಟ್ವೀಟ್‌ ಮಾಡಿದ್ದರು. 2013 ರಿಂದ 2016ರ ವರೆಗೆ ಆರ್‌ಬಿಐನ 23ನೇ ಗವರ್ನರ್‌ ಆಗಿದ್ದ ರಾಜನ್‌, ಅಧಿಕಾರದಲ್ಲಿ ಇದ್ದ ಅವಧಿಯಲ್ಲೂ ಮೋದಿ ಸರ್ಕಾರದ ಜೊತೆ ಸಾಕಷ್ಟುಮುಸುಕಿನ ಗುದ್ದಾಟ ನಡೆಸಿದ್ದರು. ನಿವೃತ್ತಿಯಾದ ಬಳಿಕವೂ ಸತತವಾಗಿ ಅಪನಗದೀಕರಣ ಸೇರಿದಂತೆ ಮೋದಿ ಸರ್ಕಾರದ ಆರ್ಥಿಕ ನೀತಿಗಳ ಕಟು ಟೀಕಾಕಾರಾಗಿದ್ದರು. 

2000 ರೂ ನೋಟು ರದ್ದಿಗೆ ಆಗ್ರಹ

6 ವರ್ಷಗಳ ಹಿಂದೆ ಅಪನಗದೀಕರಣದ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ 2000 ರು. ಮುಖಬೆಲೆಯ ನೋಟುಗಳನ್ನು ಹಂತಹಂತವಾಗಿ ಮಾರುಕಟ್ಟೆಯಿಂದ ಹಿಂಪಡೆಯುವಂತೆ ಸ್ವತಃ ಬಿಜೆಪಿ ಸಂಸದರೊಬ್ಬರು ಸಂಸತ್ತಿನಲ್ಲಿ ಆಗ್ರಹಿಸಿದ ಘಟನೆ ನಡೆದಿದೆ. ರಾಜ್ಯಸಭೆಯ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಂಸದ ಹಾಗೂ ಬಿಹಾರದ ಮಾಜಿ ಡಿಸಿಎಂ ಸುಶೀಲ್‌ ಕುಮಾರ್‌ ಮೋದಿ, 2000 ರು. ಮುಖಬೆಲೆಯ ನೋಟುಗಳು ದೇಶದ ಬಹುತೇಕ ಎಟಿಎಂಗಳಿಂದ ಕಣ್ಮರೆಯಾಗಿವೆ. ಸದ್ಯದಲ್ಲೇ ಅವು ಚಲಾವಣೆ ಕಳೆದುಕೊಳ್ಳಲಿವೆ ಎಂಬ ವದಂತಿಯೂ ಇದೆ. ರಿಸರ್ವ್ ಬ್ಯಾಂಕ್‌ ಕಳೆದ 3 ವರ್ಷಗಳಿಂದ 2000 ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸುತ್ತಿಲ್ಲ. ಈ ಎಲ್ಲ ವಿಷಯಗಳ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

1000 ರು. ಮುಖ ಬೆಲೆಯ ನೋಟು ಸ್ಥಗಿತಗೊಳಿಸಿ 2000 ರೂ ಮುಖಬೆಲೆಯ ನೋಟು ಬಿಡುಗಡೆ ಮಾಡಿದ್ದರ ಹಿಂದೆ ಯಾವುದೇ ತರ್ಕ ಇಲ್ಲ. 2000 ರೂ ನೋಟುಗಳನ್ನು ಹಣ ಸಂಗ್ರಹಿಸಿಡಲು ಬಳಸಲಾಗುತ್ತಿದೆ. ಹೀಗಾಗಿ 2000 ರು. ನೋಟುಗಳನ್ನು ಹಂತಹಂತವಾಗಿ ವಾಪಸ್‌ ಪಡೆಯಬೇಕು. ನೋಟು ವಿನಿಮಯ ಮಾಡಿಕೊಳ್ಳಲು ಜನರಿಗೆ 2 ವರ್ಷ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

Follow Us:
Download App:
  • android
  • ios