ಟಿಪ್ಪು ಜಯಂತಿ ರ್‍ಯಾಲಿಗೆ ಪುಣೆ ಪೊಲೀಸರು ಅನುಮತಿ ನಿರಾಕರಿಸಿದ್ದನ್ನು ಪ್ರಶ್ನಿಸಿ, ಎಐಎಂಐಎಂ ಪಕ್ಷದ ಮುಖಂಡ ಫೈಯಾಜ್‌ ಶೇಖ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಕಾನೂನು ಸುವ್ಯವಸ್ಥೆ ಕಾರಣ ಮುಂದಿಟ್ಟುಕೊಂಡು ರ್‍ಯಾಲಿಗೆ ಅನುಮತಿ ನಿರಾಕರಿಸಲಾಗದು ಎಂದು ಹೈಕೋರ್ಟ್‌ ಸಲಹೆ ನೀಡಿದೆ.

ಮುಂಬೈ (ಡಿ.13): ಟಿಪ್ಪು ಜಯಂತಿ ಆಚರಣೆಗೆ ನಿಷೇಧವೇನಾದರೂ ಇದೆಯೇ ಎಂದು ಬಾಂಬೆ ಹೈಕೋರ್ಟ್‌ ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸಿದ ಪ್ರಸಂಗ ಗುರುವಾರ ನಡೆದಿದೆ. ಜತೆಗೆ, ಕಾನೂನು ಸುವ್ಯವಸ್ಥೆ ಕಾರಣ ಮುಂದಿಟ್ಟುಕೊಂಡು ರ್‍ಯಾಲಿಗೆ ಅನುಮತಿ ನಿರಾಕರಿಸಲಾಗದು. ರ್‍ಯಾಲಿಯಲ್ಲಿ ಪಾಲ್ಗೊಂಡವರೇನಾದರೂ ಪ್ರಚೋದನಾಕಾರಿ, ಅವಹೇಳನಕಾರಿ ಹೇಳಿಕೆ ನೀಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಸಲಹೆ ನೀಡಿದೆ. ಪುಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾರಣ ನೀಡಿ ಜಯಂತಿ ರ್‍ಯಾಲಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಹೀಗಾಗಿ ಕೋರ್ಟು ಈ ಮಾತು ಹೇಳಿದೆ.

ಟಿಪ್ಪುಸುಲ್ತಾನ್‌ ಜಯಂತಿ ಹಿನ್ನೆಲೆಯಲ್ಲಿ ರ್‍ಯಾಲಿಗೆ ಅನುಮತಿ ನೀಡಲು ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಎಐಎಂಐಎಂ ಪಕ್ಷದ ಮುಖಂಡ ಫೈಯಾಜ್‌ ಶೇಖ್‌ ಅರ್ಜಿ ಸಲ್ಲಿಸಿದ್ದರು. ಆಗ ಕಾನೂನು ಸುವ್ಯವಸ್ಥೆ ಕಾರಣವೊಡ್ಡಿ ಪುಣೆ ಪೊಲೀಸರು ರ್‍ಯಾಲಿಗೆ ಅನುಮತಿ ನಿರಾಕರಿಸಿದ್ದರು. ಅಲ್ಲದೆ, ರ್‍ಯಾಲಿ ಬದಲು ಖಾಸಗಿಯಾಗಿ ಕಾರ್ಯಕ್ರಮ ನಡೆಸುವಂತೆಯೂ ಸೂಚಿಸಿದ್ದರು.

ಒಂದೇ ಒಂದು ‘ಮಹಾ’ ಸೋಲಿಗೆ ಭದ್ರಕೂಟ ಛಿದ್ರಕೂಟ! ರಾಹುಲ್ ಗಾಂಧಿ ನಾಯಕತ್ವದ ವಿರುದ್ಧ ಮಿತ್ರರ ಬಂಡಾಯ!

ಇದನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಟಿಪ್ಪು ಜಯಂತಿ ಆಚರಣೆಗೇನಾದರೂ ನಿರ್ಬಂಧ ಇದೆಯೇ ಎಂದು ಪ್ರಶ್ನಿಸಿತು. ಆಗ ಸರ್ಕಾರಿ ಪರ ವಕೀಲರು ಅಂಥ ಯಾವುದೇ ನಿರ್ಬಂಧ ಇಲ್ಲ, ಆದರೆ ಕಾನೂನು ಸುವ್ಯವಸ್ಥೆ ಕಾರಣಕ್ಕೆ ರ್‍ಯಾಲಿಗೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಆಗ ನ್ಯಾಯಾಲಯವು, ಒಂದು ವೇಳೆ ನಿರ್ದಿಷ್ಟ ಪ್ರದೇಶದಲ್ಲಿ ರ್‍ಯಾಲಿ ನಡೆಸುವುದರಿಂದ ಸಮಸ್ಯೆಯಾದರೆ ಮಾರ್ಗ ಬದಲಿಸುವಂತೆ ಸೂಚಿಸಬಹುದು ಎಂದು ತಿಳಿಸಿತು. ಜತೆಗೆ, ಈ ಕುರಿತ ಅರ್ಜಿಗೆ ಸಂಬಂಧಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ಪುಣೆ ಗ್ರಾಮಾಂತರ ಪೊಲೀಸರಿಗೆ ಸೂಚಿಸಿತು.