ಗುರುಗ್ರಾಮದಲ್ಲಿ ಮಹಿಳೆಯೊಬ್ಬರು ತಮ್ಮ ಸಾಕುನಾಯಿ ಹಸ್ಕಿಯೊಂದಿಗೆ ವಾಕ್ ಮಾಡುವಾಗ ಮತ್ತೊಬ್ಬ ಮಹಿಳೆಯ ಮೇಲೆ ನಾಯಿ ಹಠಾತ್ ದಾಳಿ ನಡೆಸಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗುರುಗ್ರಾಮ: ಮಹಿಳೆಯೊಬ್ಬರ ಸಾಕುನಾಯಿಯೊಂದು ರಸ್ತೆಯಲ್ಲಿ ವಾಕ್ ಕರೆದುಕೊಂಡು ಹೋಗ್ತಿದ್ದ ವೇಳೆ ಮುಂದಿನಿಂದ ಬರುತ್ತಿದ್ದ ಮತ್ತೊರ್ವ ಮಹಿಳೆ ಮೇಲೆ ಇದ್ದಕ್ಕಿದ್ದಂತೆ ಆಕ್ರಮಣಕಾರಿಯಾಗಿ ದಾಳಿ ಮಾಡಿದೆ. ಈ ಭಯಾನಕ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ವೀಡಿಯೋ ನೋಡಿದ ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ. ಆಕ್ರಮಣಕಾರಿಯಾಗಿರುವ ಸಾಕುನಾಯಿಗಳನ್ನು ರಸ್ತೆಗಳಲ್ಲಿ ಕರೆದುಕೊಂಡು ಬಂದು ಸಾರ್ವಜನಿಕರಿಗೆ ಭಯ ಮೂಡಿಸುತ್ತಿರುವ ನಾಯಿ ಮಾಲೀಕರ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಂದಹಾಗೆ ಈ ಘಟನೆ ನಡೆದಿರುವುದು ಗುರುಗ್ರಾಮನ ಐಷಾರಾಮಿ ವಸತಿ ಸಂಕೀರ್ಣವೊಂದರ ಬಳಿ, ಮಹಿಳೆಯೊಬ್ಬರ ಹಸ್ಕಿ ತಳಿಯ ಶ್ವಾನವೊಂದು ಮಹಿಳೆಯ ಮೇಲೆ ಇದ್ದಕ್ಕಿದ್ದಂತೆ ದಾಳಿ ಮಾಡಿದೆ. ಈ ವೇಳೆ ನಾಯಿಯ ಮಾಲಕಿ ಶ್ವಾನದ ದಾಳಿಯಿಂದ ಮಹಿಳೆಯನ್ನು ಬಿಡಿಸುವುದಕ್ಕೆ ಯತ್ನಿಸಿದ್ದರೂ ಸಾಧ್ಯವಾಗಿಲ್ಲ. ನಾಯಿಯ ಹಠಾತ್ ದಾಳಿಯಿಂದ ವಾಕ್ ಮಾಡುತ್ತ ಬರುತ್ತಿದ್ದ ಮಹಿಳೆ ಹೆದರಿ ಕುಸಿದು ಬಿದ್ದಿದ್ದಾರೆ. ನಾಯಿಯ ಮಾಲಕಿಯ ಹಲವು ನಿಮಿಷಗಳ ಪ್ರಯತ್ನದ ಬಳಿಕವಷ್ಟೇ ಶ್ವಾನ ಮಹಿಳೆಯ ಕೈಯನ್ನು ಬಿಟ್ಟಿದ್ದು, ಘಟನೆಯಲ್ಲಿ ಮಹಿಳೆಗೆ ಗಂಭೀರ ಗಾಯವಾಗಿದೆ.
ರೇಬಿಸ್ ಪ್ರಕರಣದಿಂದಾಗಿ ದೇಶದೆಲ್ಲೆಡೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದರ ಬೆನ್ನಲೇ ಈ ಘಟನೆ ನಡೆದಿದೆ. ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆ ಪ್ರದೇಶದ ವಸತಿ ಸಂಕೀರ್ಣದಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಘಟನೆಯ ವೀಡಿಯೊದಲ್ಲಿ ಮಹಿಳೆಯೊಬ್ಬರು ತಮ್ಮ ಸಹಚರರ ಜೊತೆ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಫುಟ್‌ಪಾತ್‌ನಲ್ಲಿ, ಇನ್ನೊಬ್ಬ ಮಹಿಳೆ ತಮ್ಮ ಸಾಕುನಾಯಿ ಹಸ್ಕಿಯನ್ನು ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಇತ್ತ ವಾಕ್ ಮಾಡ್ತಿದ್ದ ಮಹಿಳೆ ತನ್ನ ಜೊತೆಗಿದ್ದವರ ಜೊತೆ ಹರಟೆ ಹೊಡೆಯುತ್ತಾ ಬರುತ್ತಿದ್ದರೆ, ಇತ್ತ ಇದ್ದಕ್ಕಿದ್ದಂತೆ, ನಾಯಿ ಆ ಮಹಿಳೆಯ ಮೇಲೆ ಹಾರಿದೆ.
ಇದರಿಂದಾಗಿ ಆಕೆ ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ ನಾಯಿಯ ಮಾಲಕಿ ನಾಯಿಯನ್ನು ನಿಯಂತ್ರಣಕ್ಕೆ ತರುವುದಕ್ಕಾಗಿ ಅದರ ಬೆಲ್ಟ್‌ನ್ನು ಹಿಡಿದು ಎಳೆದರು ಹಸ್ಕಿ ನಾಯಿ ಮಹಿಳೆಯ ಕೈಯನ್ನು ಬಿಟ್ಟಿಲ್ಲ. ಅಲ್ಲಿದ್ದ ಇತರರು ಕೂಡ ನಾಯಿಯನ್ನು ಒದೆಯುತ್ತಾರೆ. ಅದರೂ ನಾಯಿ ಮಹಿಳೆಯ ಕೈನಿಂದ ಬಾಯಿ ತೆಗೆಯದೇ ಗಟ್ಟಿಯಾಗಿ ಕಚ್ಚಿ ಹಿಡಿದಿದೆ. ಕನಿಷ್ಠ15 ಸೆಕೆಂಡುಗಳ ಕಾಲ, ನಾಯಿಯ ಹಲ್ಲುಗಳು ಮಹಿಳೆಯ ಕೈಯಲ್ಲಿ ಆಳವಾಗಿ ಊರಿದ್ದು, ಮಹಿಳೆ ನೋವಿನಿಂದ ಕಿರುಚುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಕೊನೆಗೂ ನಾಯಿಯನ್ನು ದೂರ ಎಳೆದು ಬಿಡಿಸಲಾಗಿದ್ದು, ದಾಳಿಗೊಳಗಾದ ಮಹಿಳೆಯನ್ನು ಅವಳ ಜೊತೆಗಿದ್ದವರು ಮೇಲೇಳಿಸುತ್ತಾರೆ.
ಈ ತಿಂಗಳ ಆರಂಭದಲ್ಲಿ ದೆಹಲಿಯಲ್ಲಿ ಪಾರ್ಕೊಂದರಲ್ಲಿ ವಾಕ್ ಮಾಡುತ್ತಿದ್ದ 55 ವರ್ಷದ ವ್ಯಕ್ತಿಯೊಬ್ಬರು ಬೀದಿನಾಯಿಗಳ ಹಿಂಡೊಂದರ ತೀವ್ರ ದಾಳಿಯಿಂದಾಗಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದರು. ಇದರ ಜೊತೆಗೆ ನಿನ್ನೆಯಷ್ಟೇ ನಮ್ಮ ಬೆಂಗಳೂರಿನಲ್ಲೂ ಬೀದಿ ನಾಯಿಯೊಂದರ ಭೀಕರ ದಾಳಿಯಿಂದ 72 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿತ್ತು. ಕೊಡಿಗೇಹಳ್ಳಿಯಲ್ಲಿ ನಡೆದ ಈ ಘಟನೆಯಲ್ಲಿ ನಾಯಿಗಳು ವೃದ್ಧರ ಮಾಂಸ ಖಂಡಗಳನ್ನು ಕಚ್ಚಿ ತಿಂದಿದ್ದವು. ಸೋಮವಾರ ಬೆಳಗಿನ ಜಾವ ಕೊಡಿಗೇಹಳ್ಳಿಯ ಟೆಲಿಕಾಂ ಲೇಔಟ್‌ನಲ್ಲಿ ಈ ಘಟನೆ ನಡೆದಿತ್ತು.
ಈಗ ಗುರುಗ್ರಾಮದಲ್ಲಿ ನಡೆದ ಈ ನಾಯಿ ದಾಳಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅನೇಕರು ಶ್ವಾನವನ್ನು ವಾಕಿಂಗ್ ಕರೆದುಕೊಂಡು ಬರುವ ಜನರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
