ಪೆಗಾಸಸ್ ವಿಚಾರವಾಗಿ ಚರ್ಚೆ, ಈ ಸುದ್ದಿ ಹಿಂದೆ ಯಾರಿದ್ದಾರೆಂದು ತಿಳಿಯೋಣ: ಆರ್‌ಸಿ
* ದೇಶಾದ್ಯಂತ ಸದ್ದು ಮಾಡುತ್ತಿದೆ ಪೆಗಾಸಸ್ ವಿವಾದ
* ಭಾರತದ 2 ಮಂತ್ರಿಗಳು, 40 ಕ್ಕೂ ಹೆಚ್ಚು ಪತ್ರಕರ್ತರು, 3 ಪ್ರತಿಪಕ್ಷದ ನಾಯಕರು ಸೇರಿ ಅನೇಕರ ಬೇಹುಗಾರಿಕೆ
* ಈ ಸುದ್ದಿ ನಕಲಿ, ಸಂಖ್ಯೆಗಳೂ ಸುಳ್ಳು ಎಂದ ಕೇಂದ್ರದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್
ನವದೆಹಲಿ(ಜು.22): ಪೆಗಾಸಸ್ ಸಾಫ್ಟ್‌ವೇರ್ ಮೂಲಕ ಭಾರತದ ವಿರೋಧ ಪಕ್ಷದ ನಾಯಕರು ಮತ್ತು ಪತ್ರಕರ್ತರ ಬೇಹುಗಾರಿಕೆ ನಡೆಸಿದ ಪ್ರಕರಣದ ಬಗ್ಗೆ ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯಿಸಿದ್ದು, ಇದು ನಕಲಿ ಸುದ್ದಿ ಎಂದಿದ್ದಾರೆ.
ಪೆಗಾಸಸ್ ಬಳಿಕ ಛತ್ತೀಸ್‌ಗಢ ಫೋನ್ ಟ್ಯಾಪಿಂಗ್ ಸದ್ದು, ಗಾಂಧಿ ಕುಟುಂಬಕ್ಕೆ ಸವಾಲು!
ಅಮೆರಿಕಾದ ಪತ್ರಕರ್ತ ಕಿಮ್ ಜೆಟ್ಟರ್ ಅವರ ಟ್ವೀಟ್, ರೀಟ್ವೀಟ್ ಮಾಡಿರುವ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಪೆಗಾಸಸ್ ಸುದ್ದಿ ನಕಲಿ, ವಂಚನೆ ಮತ್ತು ವದಂತಿ. ನಕಲಿ ಸಂಖ್ಯೆಗಳನ್ನು ಕೊಟ್ಟು ಸುತ್ತ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಯಾವುದೇ ಪುರಾವೆಗಳಿಲ್ಲದೆ ಸರ್ಕಾರದ ವಿರುದ್ಧ ಮುಗಿಬೀಳಲು ಮಾಡಿದ ಷಡ್ಯಂತ್ರ. ಈ ರೀತಿ ನಕಲಿ ಸುದ್ದಿಗಳ ಹಿಂದೆ ಯಾರು ಇದ್ದಾರೆ? ಎಂದು ಚರ್ಚಿಸೋಣ ಎಂದಿರುವ ಸಚಿವರು, ಇದರೊಂದಿಗೆ 2013 ರಲ್ಲಿ ಪ್ರಿಸ್ಮ್ ಎಕ್ಸ್‌ಪೋಸರ್ ಸಂದರ್ಭದ ಕಾಂಗ್ರೆಸ್ ದಾಖಲೆಗಳನ್ನು ನೋಡಬೇಕೆಂದು ಒತ್ತಾಯಿಸಿದ್ದಾರೆ.
ಏನಿದು ವಿವಾದ?
ಇಸ್ರೇಲಿ ಸ್ಪೈವೇರ್ ಪೆಗಾಸಸ್ ಮೂಲಕ ದೇಶ, ವಿದೇಶದ ಅನೇಕರ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ಆರೋಪ ಸದ್ದು ಮಾಡುತ್ತಿದೆ. ಸದ್ಯ ಈ ಪ್ರಕರಣ ಭಾರತದ ಅತ್ಯುನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ವಕೀಲ ಮನೋಹರ್ ಲಾಲ್ ಶರ್ಮಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಇದರಲ್ಲಿ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆಗೆ ಒತ್ತಾಯಿಸಲಾಗಿದೆ. ಇದರೊಂದಿಗೆ ಭಾರತದಲ್ಲಿ ಪೆಗಾಸಸ್ ಖರೀದಿ ನಿಷೇಧಿಸುವ ಮನವಿಯನ್ನೂ ಮಾಡಲಾಗಿದೆ.
ಏನಿದು ಪೆಗಾಸಸ್ ಸ್ಪೈವೇರ್? ಹೇಗೆ ಫೋನ್ ಒಳಗೆ ನುಸುಳುತ್ತದೆ?: ತಜ್ಞರ ಉತ್ತರ
ಭಾರತದ 2 ಮಂತ್ರಿಗಳು, 40 ಕ್ಕೂ ಹೆಚ್ಚು ಪತ್ರಕರ್ತರು, 3 ಪ್ರತಿಪಕ್ಷದ ನಾಯಕರು ಮತ್ತು ಅನೇಕ ಉದ್ಯಮಿಗಳು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರ 300 ಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳನ್ನು ಪೆಗಾಸಸ್ ಮೂಲಕ ಹ್ಯಾಕ್ ಮಾಡಲಾಗಿದೆ ಎಂದು ಫ್ರಾನ್ಸ್ ಮೂಲದ ‘ಫಾರ್ಬಿಡನ್ ಸ್ಟೋರಿಸ್’ ಎಂಬ ಸ್ವಯಂ ಸೇವಾ ಸಂಸ್ಥೆ ಹೇಳಿತ್ತು. ಬಳಕೆದಾರರ ಅರಿವಿಗೇ ಬಾರದೆ ಅವರ ಮೊಬೈಲ್ ಮೂಲಕ ಸಂಪೂರ್ಣ ಚಲನವಲನ, ಮಾಹಿತಿ ಸಂಗ್ರಹಿಸುವ ಸಾಫ್ಟ್‌ವೇರ್ ಇದು. ಒಟ್ಟು 400 ಭಾರತೀಯರ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ಆರೋಪವಿದ್ದು, ಅದರಲ್ಲಿ ಕರ್ನಾಟಕದ ರಾಜಕಾರಣಿಗಳ ಹೆಸರೂ ಇದೆ ಎಂದು ವರದಿಗಳು ತಿಳಿಸಿವೆ.
ಕಂಪನಿ ಹೇಳುವುದೇನು?
ಭಯೋತ್ಪಾದನೆ, ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸರ್ಕಾರಗಳಿಗೆ ಮತ್ತು ತನಿಖಾ ಸಂಸ್ಥೆಗಳಿಗೆ ನೆರವಾಗಲು ಇದನ್ನು ಅಭಿವೃದ್ಧಿಪಡಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ.
ಸರ್ಕಾರದ ಮೇಲೇಕೆ ಅನುಮಾನ?
ಕಂಪನಿ ತನ್ನ ಸ್ಪೈವೇರ್ ಅನ್ನು ಕೇವಲ ಸರ್ಕಾರಗಳಿಗೆ ಮಾತ್ರ ನೀಡುತ್ತದೆ. ಹೀಗಾಗಿ ಭಾರತದಲ್ಲೂ ಕದ್ದಾಲಿಕೆ ನಡೆದಿರುವ ಕಾರಣ, ಇದರ ಹಿಂದೆ ಸರ್ಕಾರದ್ದೇ ಕೈವಾಡವಿದೆ ಎಂಬುದು ವಿಪಕ್ಷಗಳ ದೂರು.
ಬಲು ದುಬಾರಿ ಸ್ಪೈವೇರ್ ಇದು
ಒಂದು ಲೈಸೆನ್ಸ್‌ಗೆ ಕನಿಷ್ಠ 70 ಲಕ್ಷ ರು. ಇದೆ. ಇದರಿಂದ ಹಲವು ಮೊಬೈಲ್‌ಗಳನ್ನು ಹ್ಯಾಕ್ ಮಾಡಬಹುದು.