Asianet Suvarna News Asianet Suvarna News

Pegasus: ಐಟಿ, ಟೆಲಿಗ್ರಾಫ್ ಕಾಯ್ದೆಯಡಿ ದೂರು ಯಾಕೆ ದಾಖಲಿಸಲಿಲ್ಲ? ಸುಪ್ರೀಂ ಪ್ರಶ್ನೆ!

* ಪೆಗಾಸಸ್ ಸ್ಪೈವೇರ್ ಪ್ರಕರಣದ ಕುರಿತು ವಿಶೇಷ ತನಿಖೆಗೆ ಮನವಿ

* ಭಾರತದ ಎಡಿಟರ್ಸ್ ಗಿಲ್ಡ್ ಸಹಿತ ಹಲವರು ಸಲ್ಲಿಸಿರುವ ಅರ್ಜಿ ವಿಚಾರಣೆ

* ಮಾಧ್ಯಮಗಳ ವರದಿ ಸರಿಯಾಗಿದ್ದರೆ ಆರೋಪಗಳು ಗಂಭೀರ ಎಂದ ಸುಪ್ರಿಂ 

Pegasus row Why anyone not filed complaint under IT Telegraph Act SC asks petitioners pod
Author
Bangalore, First Published Aug 5, 2021, 4:16 PM IST

ನವದೆಹಲಿ(ಆ.05): ಪೆಗಾಸಸ್ ವಿವಾದಕ್ಕೆ ಸಂಬಂಧಿಸಿದ ಆರೋಪಗಳು ನಿಜವೇ ಆಗಿದ್ದರೆ ನಿಜಕ್ಕೂ ಅದು ಗಂಭೀರವಾದದ್ದು ಎಂದು ದೇಶದ ಸರ್ವೋಚ್ಛ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹೀಗಿದ್ದರೂ 2019 ರಲ್ಲಿ ಈ ಬಗ್ಗೆ ಯಾಕೆ ಧ್ವನಿ ಎತ್ತಲ್ಲಿಲ್ಲ? ಶಾಸನಬದ್ಧ ನಿಬಂಧನೆಗಳ ಅಡಿಯಲ್ಲಿ ಏಕೆ ವೈಯಕ್ತಿಕ ದೂರು ನೀಡಲಿಲ್ಲ ಎಂದೂ ಪ್ರಶ್ನಿಸಿದೆ.

ಪೆಗಾಸಸ್ ಸ್ಪೈವೇರ್ ಪ್ರಕರಣದ ಕುರಿತು ವಿಶೇಷ ತನಿಖೆ ನಡೆಸುವಂತೆ ಕೋರಿ ಭಾರತದ ಎಡಿಟರ್ಸ್ ಗಿಲ್ಡ್ ಸಹಿತ ಹಲವರು ಸಲ್ಲಿಸಿರುವ ಅರ್ಜಿಗಳನ್ನು ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮಾಧ್ಯಮಗಳ ವರದಿ ಸರಿಯಾಗಿದ್ದರೆ ಇದೊಂದು ಗಂಭೀರ ಪ್ರಕರಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. 

ಕಲಾಪ ಬಲಿಯಿಂದ 133 ಕೋಟಿ ರೂ ನಷ್ಟ!

ಐಟಿ / ಟೆಲಿಗ್ರಾಫ್ ಕಾಯ್ದೆಯಡಿ ಏಕೆ ದೂರು ದಾಖಲಿಸಿಲ್ಲ?

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ವಿಭಾಗೀಯ ಪೀಠ, "ಎಡಿಟರ್ಸ್ ಗಿಲ್ಡ್ ಅರ್ಜಿಯನ್ನು ಹೊರತುಪಡಿಸಿ ನಾವು ಕೆಲವು ಪ್ರಶ್ನೆಗಳನ್ನು ಕೇಳಲು ಬಯಸುತ್ತೇವೆ ಡಬ್ಲ್ಯುಪಿ ಅಡಿಯಲ್ಲಿ ನಾವು ಕೇಳಬಹುದಾದ ಸ್ವೀಕಾರಾರ್ಹ ವಿಚಾರ ಎಂದು ಎಲ್ಲರಿಗೂ ತಿಳಿದಿದೆ. ಮೊದಲ ಬಾರಿ ಈ ವಿಚಾರ ಮೇ 2019 ಇದು ಬೆಳಕಿಗೆ ಬಂದಿತು. ಆಗ ಈ ವಿಷಯವನ್ನು ಯಾರೂ ಗಂಭೀರವಾಗಿ ಸ್ವೀಕರಿಸಿರಲಿಲ್ಲ ಯಾಕೆ ಎಂದು ಅರ್ಥವಾಗುತ್ತಿಲ್ಲ ಎಂದಿದ್ದಾರೆ. 

ಈ ಬಗ್ಗೆ  ಹೆಚ್ಚಿನ ವಿಷಯವನ್ನು ಕಲೆ ಹಾಕಲು ಪ್ರಯತ್ನಿಸಬೇಕು. ಅಲ್ಲದೆ ಅದರ ಮೇಲೆ ವರದಿಗಳು ಇರುವುದರಿಂದ ನಾವು ಯಾವುದೇ ದಾಖಲೆ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಐಟಿ ಕಾಯ್ದೆ, ಟೆಲಿಗ್ರಾಫ್ ಕಾಯ್ದೆಯ ಅಡಿಯಲ್ಲಿ ನಿಬಂಧನೆಗಳಿವೆ. ಹೀಗಿರುವಾಗ ಅವುಗಳಡಿ ಏಕೆ ದೂರು ದಾಖಲಾಗಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಏನಿದು ಪೆಗಾಸಸ್‌?

ಪೆಗಾಸಸ್‌ ಎನ್ನುವುದು ಒಂದು ಗೂಢಚರ ತಂತ್ರಾಂಶ. ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಮೊಬೈಲ್‌ ಬಳಕೆದಾರರ ಮಾಹಿತಿ ದೋಚಲು ಇದು ಸಹಕರಿಸುತ್ತಿದೆ. ಈ ಸ್ಪೈವೇರನ್ನು ಬಳಕೆ ಮಾಡಿಕೊಂಡು ವಿಶ್ವದ ಹಲವು ದೇಶಗಳ ಸರ್ಕಾರಗಳು ತಮ್ಮ ವಿರೋಧಿಗಳು, ರಾಯಭಾರಿಗಳು, ಹಿರಿಯ ಅಧಿಕಾರಿಗಳು, ಪತ್ರಕರ್ತರ ವಿರುದ್ಧ ಗೂಡಚರ್ಯೆ ನಡೆಸುತ್ತಿವೆ ಎನ್ನಲಾಗಿದೆ. ಹಾಗೆ ನೋಡಿದರೆ ಮಾಹಿತಿ-ದತ್ತಾಂಶಗಳನ್ನು ಕದಿಯುವ ಅನೇಕ ಸ್ಪೈವೇರ್‌ಗಳಿವೆ. ಇವುಗಳು ನಿರ್ದಿಷ್ಟಕಂಪನಿಯ ಆ್ಯಪ್‌ಗಳಲ್ಲದೆ ಥರ್ಡ್‌ ಪಾರ್ಟಿ ಆ್ಯಪ್‌ಗಳನ್ನು ಇನ್‌ಸ್ಟಾಲ್‌ ಮಾಡಿದಾಗ ಫೋನ್‌ಗೆ ತನ್ನಿಂತಾನೇ ಇನ್‌ಸ್ಟಾಲ್‌ ಆಗಬಹುದು. ಆದರೆ ಪೆಗಾಸಸ್‌ ಹಾಗಲ್ಲ. ಯಾವುದೇ ಆ್ಯಪ್‌ಗಳನ್ನು ಇನ್‌ಸ್ಟಾಲ್‌ ಮಾಡದಿದ್ದರೂ ವಾಟ್ಸ್‌ಆ್ಯಪ್‌ ಮೂಲಕ ಅದು ಮೊಬೈಲ್‌ನೊಳಗೆ ಸೇರಿಕೊಳ್ಳುತ್ತದೆ.

ಜನ ನೆಮ್ಮದಿಯಿಂದ ನಿದ್ರಿಸಲು ಪೆಗಾಸಸ್‌ನಂಥ ತಂತ್ರಾಂಶ ಕಾರಣ: ಇಸ್ರೇಲ್!

ಹೇಗೆ ಕೆಲಸ ಮಾಡುತ್ತದೆ?

ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಸ್ಟಾಲ್‌ ಆಗಿರುವ ವಾಟ್ಸ್‌ ಆ್ಯಪ್‌ ಸಂಖ್ಯೆಗೆ ಒಂದು ಮಿಸ್ಡ್‌ ಕಾಲ್‌ ನೀಡುವ ಮೂಲಕ ಪೆಗಾಸಸ್‌ ಗೂಢಚರ್ಯೆ ಕೆಲಸ ಆರಂಭಿಸುತ್ತದೆ. ಫೋನ್‌ ಅನ್‌ಲಾಕ್‌ ಆದ ತಕ್ಷಣ ತನ್ನಿಂತಾನೆ ಇನ್‌ಸ್ಟಾಲ್‌ ಆಗುವ ಈ ವೈರಸ್‌ ಮೊಬೈಲ್‌ನ ಸೆಕ್ಯುರಿಟಿ ಆ್ಯಪ್‌ಗಳನ್ನು ತನಗೆ ಬೇಕಾದಂತೆ ಬದಲಿಸಿಕೊಂಡು ಎಲ್ಲೋ ದೂರದಲ್ಲಿರುವ ತನ್ನ ಒಡೆಯನ ಸರ್ವರ್‌ಗೆ ನಿರಂತರವಾಗಿ ಮಾಹಿತಿ ರವಾನಿಸಲು ಆರಂಭಿಸುತ್ತದೆ. ಫೋನಿನಲ್ಲಿ ಇರುವ ಪಾಸ್‌ವರ್ಡ್‌, ಕಾಂಟಾಕ್ಟ್, ಕ್ಯಾಲೆಂಡರ್‌ ಇವೆಂಟ್‌, ಟೆಕ್ಸ್ಟ್‌ಮೆಸೇಜ್‌, ಖಾಸಗಿ ದತ್ತಾಂಶ ಇತ್ಯಾದಿ ಎಲ್ಲಾ ಖಾಸಗಿ ಮಾಹಿತಿಯು ಆ ಸರ್ವರ್‌ನಲ್ಲಿ ಸತತವಾಗಿ ದಾಖಲಾಗುತ್ತಿರುತ್ತವೆ. ಮಾತ್ರವಲ್ಲದೆ, ಮೊಬೈಲಿನ ಕ್ಯಾಮರಾ ಮತ್ತು ಮೈಕ್ರೋಫೋನ್‌ ಬಳಸಿ ಇನ್ನಿತರ ಮಾಹಿತಿಯನ್ನು ಕೂಡ ಸಂಗ್ರಹಿಸುತ್ತದೆ. ಕೆಲವೊಮ್ಮೆ ಟೆಕ್ಸ್ಟ್‌ಸಂದೇಶದ ಮೂಲಕವೂ ಈ ಸ್ಪೈವೇರನ್ನು ಮೊಬೈಲ್‌ಗೆ ಕಳುಹಿಸಲಾಗುತ್ತದೆ. ಸಂದೇಶವನ್ನು ಓಪನ್‌ ಮಾಡಿದಾಗ ಮೊಬೈಲ್‌ ಬಳಕೆದಾರರಿಗೆ ತಿಳಿಯದಂತೆ ಇದು ಮೊಬೈಲಿನಲ್ಲಿ ಇನ್‌ಸ್ಟಾಲ್‌ ಆಗುತ್ತದೆ. ನೀವು ಎಲ್ಲಿದ್ದೀರಿ ಎಂಬ ಮಾಹಿತಿಯೂ ‘ಗೂಗಲ್‌ ಲೊಕೇಶನ್‌’ ಮೂಲಕ ಹಂಚಿಕೆಯಾಗುತ್ತದೆ. ಗೌಪ್ಯ ಸ್ಥಳದಲ್ಲಿ ನೀವು ಇದ್ದರೆ ನಿಮ್ಮ ಗಮನಕ್ಕೆ ಬಾರದೇ ಮೊಬೈಲ್‌ ಕ್ಯಾಮರಾಗಳು, ಮೈಕ್ರೋಫೋನ್‌ಗಳು ತನ್ನಿಂದ ತಾನಾಗಿಯೇ ಆಕ್ಟಿವೇಟ್‌ ಆಗುತ್ತವೆ. ಈ ಮೂಲಕ ಸ್ಥಳವನ್ನು ತಿಳಿದುಕೊಳ್ಳುತ್ತವೆ.

ಭಾರತದಲ್ಲೂ ಗೂಢಚರ್ಯೆ

ಪ್ರಧಾನಿ ನರೇಂದ್ರ ಮೋದಿ ಕ್ಯಾಬಿನೆಟ್‌ನ ಇಬ್ಬರು ಸಚಿವರು, ಮೂವರು ವಿಪಕ್ಷ ನಾಯಕರು, ಓರ್ವ ನ್ಯಾಯಾಧೀಶ, ಉದ್ಯಮಿಗಳು, ಚಳವಳಿಗಾರರು ಮತ್ತು 40ಕ್ಕೂ ಹೆಚ್ಚು ಪತ್ರಕರ್ತರು ಸೇರಿದಂತೆ 300ಕ್ಕೂ ಹೆಚ್ಚು ಮೊಬೈಲ್‌ ಸಂಖ್ಯೆಗಳು ಹ್ಯಾಕ್‌ ಆಗಿರುವ ಮಾಹಿತಿ ಬಯಲಾಗಿದೆ. ಸರ್ಕಾರಕ್ಕೆ ಮಾತ್ರ ಮಾರಾಟ ಮಾಡಲಾಗುವ ಇಸ್ರೇಲ್‌ ಮೂಲದ ಕಣ್ಗಾವಲು ಕಂಪನಿ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್‌ ಸಾಫ್ಟ್‌ವೇರ್‌ನಿಂದ ಈ ಮೊಬೈಲ್‌ ಸಂಖ್ಯೆಗಳು ಹ್ಯಾಕ್‌ ಆಗಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ಒಕ್ಕೂಟ ವರದಿ ಮಾಡಿದೆ. ಆದರೆ ಯಾವುದೇ ವ್ಯಕ್ತಿಗಳ ಮೇಲೆ ಯಾವುದೇ ರೀತಿಯಲ್ಲಿ ಕಣ್ಗಾವಲು ವಹಿಸಿಲ್ಲ. ಎಂದು ಭಾರತ ಸರ್ಕಾರ ಹೇಳಿದೆ. ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು ತನ್ನೆಲ್ಲಾ ಪ್ರಜೆಗಳ ಗೌಪ್ಯತೆಯ ಹಕ್ಕು ಮೂಲಭೂತ ಹಕ್ಕು ಎಂಬುದನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ. ಜೊತೆಗೆ ಮಾಧ್ಯಮ ವರದಿಯನ್ನು ತನಿಖಾಧಿಕಾರಿ, ಪ್ರಾಸಿಕ್ಯೂಟರ್‌ ಮತ್ತು ತೀರ್ಪುಗಾರರ ಪಾತ್ರ ವಹಿಸುವ ಯತ್ನವನ್ನು ಭಾರತ ಸರ್ಕಾರ ತಳ್ಳಿ ಹಾಕಿದೆ.

ಪೆಗಾಸಸ್‌, ಕೃಷಿ ಮಸೂದೆ ಗದ್ದಲಕ್ಕೆ ಇಡೀ ವಾರದ ಕಲಾಪ ಬಲಿ!

ವಾಷಿಂಗ್ಟನ್‌ ಪೋಸ್ಟ್‌, ದಿ ಗಾರ್ಡಿಯನ್‌ ಸೇರಿದಂತೆ 16 ಅಂತಾರಾಷ್ಟ್ರೀಯ ಮಾಧ್ಯಮಗಳು ಸೇರಿದಂತೆ ಭಾರತದ ‘ದಿ ವೈರ್‌’ ವೆಬ್‌ಸೈಟ್‌ ವಿಶ್ವಾದ್ಯಂತ 50 ಸಾವಿರ ಮೊಬೈಲ್‌ ಸಂಖ್ಯೆಗಳನ್ನು ಇಸ್ರೇಲ್‌ನ ಕಣ್ಗಾವಲು ಕಂಪನಿ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್‌ ಸಾಫ್ಟ್‌ವೇರ್‌ನಿಂದ ಹ್ಯಾಕ್‌ ಮಾಡಲಾಗಿದೆ ಎಂದು ವರದಿ ಮಾಡಿದ್ದವು.

ಉಗ್ರರ ಚಲನವಲನ ಗಮನಕ್ಕೆ ಅಭಿವೃದ್ಧಿಪಡಿಸಿರುವ ಸಾಫ್ಟ್‌ವೇರ್‌

ಪೆಗಾಸಸ್‌ ಅಭಿವೃದ್ಧಿಪಡಿಸಿ ಅದನ್ನು ಪರವಾನಗಿ (ಲೈಸನ್ಸ್‌) ಮೂಲಕ ವಿವಿಧ ಸರ್ಕಾರಗಳಿಗೆ ಮಾರಾಟ ಮಾಡುವುದು ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಒಡೆತನದಲ್ಲಿರುವ ಸೈಬರ್‌ ಟೆಕ್ನಾಲಜೀಸ್‌ ಕೆಲಸ. ಈ ಕಂಪನಿ ಮೇಲೆ ವಾಟ್ಸ್‌ಆ್ಯಪ್‌ ಹೂಡಿರುವ ದಾವೆಯಲ್ಲಿ ‘ಇದು ವಾಟ್ಸ್‌ ಆ್ಯಪ್‌ನ ನಿಯಮಗಳು ಮತ್ತು ಕ್ಯಾಲಿಫೋರ್ನಿಯಾದಲ್ಲಿ ಜಾರಿಯಲ್ಲಿರುವ ಕಾನೂನುಗಳ ಉಲ್ಲಂಘನೆ ’ ಎಂದು ಹೇಳಲಾಗಿದೆ. ಆದರೆ ಈ ಆರೋಪವನ್ನು ಎನ್‌ಎಸ್‌ಒ ತಳ್ಳಿ ಹಾಕಿ ಸ್ಪಷ್ಟನೆ ನೀಡಿದೆ. ಸ್ಮಾರ್ಟ್‌ಫೋನ್‌ಗಳ ಗೂಢಚರ್ಯೆ ಮಾಡುವ ಪೆಗಾಸಸ್‌ ತಂತ್ರಾಂಶವನ್ನು ಕೇವಲ ಸರ್ಕಾರಿ ಸಂಸ್ಥೆಗಳಿಗೆ ಮಾರಾಟ ಮಾಡುತ್ತೇವೆ. ಆದರೆ ಅದನ್ನು ಪತ್ರಕರ್ತರು ಅಥವಾ ಮಾನವ ಹಕ್ಕುಗಳ ಹೋರಾಟಗಾರರ ವಿರುದ್ಧ ಬಳಸಲು ಎಂದೂ ಪರವಾನಗಿ ನೀಡಿಲ್ಲ. ಉಗ್ರರ ಚಲನವಲನಗಳನ್ನು ಗಮನಿಸಲು ಸರ್ಕಾರಗಳಿಗೆ ನೀಡಲಾಗುವ ಸಾಫ್ಟ್‌ವೇರ್‌ ಇದಾಗಿದೆ. ಇದನ್ನು ಆಯಾ ಸರ್ಕಾರಗಳು ದುರ್ಬಳಕೆ ಮಾಡಿಕೊಂಡಿರಬಹುದು ಎಂದು ಎನ್‌ಎಸ್‌ಒ ಗ್ರೂಪ್‌ ಹೇಳಿದೆ. ಇದರ ಬಳಿಕ ಕೇಂದ್ರ ಸರ್ಕಾರದ ಮೇಲೆ ಆರೋಪಗಳು ಕೇಳಿಬಂದಿವೆ.

ಮೆಕ್ಸಿಕೋದಲ್ಲಿ ಹೆಚ್ಚು ಬಳಕೆ

ಜಗತ್ತಿನ ಹಲವು ದೇಶಗಳು ಈ ಪೆಗಾಸಸ್‌ ಸ್ಪೈವೇರ್‌ ಬಳಕೆ ಮಾಡುತ್ತಿದ್ದು, ಈ ಪೈಕಿ ವಿಶ್ವದಲ್ಲೇ ಮೆಕ್ಸಿಕೊ ದೇಶದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ವ್ಯವಸ್ಥೆ ಈ ಇಸ್ರೇಲಿ ಸೈಬರ್‌ ಗೂಢಚರ್ಯೆ ಸಾಫ್ಟ್‌ವೇರನ್ನು ಬಳಸುತ್ತಿದೆ. ಅಲ್ಲಿನ ಸರ್ಕಾರ 2016-17ರಿಂದ ಅಂದಾಜು 220 ಕೋಟಿ ರು. ವೆಚ್ಚ ಮಾಡಿ 500ಕ್ಕೂ ಹೆಚ್ಚು ಮಂದಿಯ ಫೋನ್‌ಗಳ ಮೇಲೆ ಗೂಢಚರ್ಯೆ ನಡೆಸಿತ್ತು ಎನ್ನಲಾಗಿದೆ.

ದುಬಾರಿ ಬೇಹುಗಾರ ಪೆಗಾಸಸ್‌!

ಇಸ್ರೇಲ್‌ ಮೂಲದ ಈ ಪೆಗಾಸಸ್‌ ಸಾಫ್ಟ್‌ವೇರನ್ನು ಖರೀದಿಸಿ ಬಳಸಬೇಕಾದರೆ ವಾರ್ಷಿಕವಾಗಿ 70-80 ಲಕ್ಷ ಡಾಲರ್‌ (ಸುಮಾರು 56 ಕೋಟಿ) ನೀಡಬೇಕಾಗುತ್ತದೆ. ಈ ಸ್ಪೈವೇರ್‌ ಬಳಸಿ ವಾರ್ಷಿಕವಾಗಿ 500 ಫೋನ್‌ಗಳನ್ನು ಹ್ಯಾಕ್‌ ಮಾಡಬಹುದಾಗಿದೆ.

ಮೊದಲು ಪತ್ತೆಯಾಗಿದ್ದು 2016ರಲ್ಲಿ

ಪೆಗಾಸಸ್‌ ಹೆಸರು ಮೊಟ್ಟಮೊದಲಿಗೆ ಕೇಳಿ ಬಂದಿದ್ದು 2016ರಲ್ಲಿ. ಯುಎಇ ಮಾನವ ಹಕ್ಕುಗಳ ಹೋರಾಟಗಾರ ಅಹ್ಮದ್‌ ಮನ್ಸೂರ್‌ ಇದರ ಅಸ್ತಿತ್ವವನ್ನು ಬಯಲಿಗೆಳೆದಿದ್ದರು. ಪೆಗಾಸಸ್‌ ಸ್ಪೈವೇರ್‌ ತಂತ್ರಾಶದ ಮೂಲಕ ಮನ್ಸೂರ್‌ ಅವರನ್ನು ಟಾರ್ಗೆಟ್‌ ಮಾಡಲಾಗಿತ್ತು. ಸಂದೇಹಾಸ್ಪದ ಸಂದೇಶಗಳು, ಲಿಂಕ್‌ಗಳು ಬಂದಾಗ ಅದನ್ನು ಇವರು ಸೆಕ್ಯುರಿಟಿ ಎಕ್ಸ್‌ಪರ್ಟ್‌ಗೆ ಕಳುಹಿಸುತ್ತಿದ್ದರು. ಲುಕ್‌ಔಟ್‌ ಎನ್ನುವ ಸೈಬರ್‌ ಸೆಕ್ಯುರಿಟಿ ಸಂಸ್ಥೆಯು ಇದೊಂದು ಗೂಢಚರ್ಯೆ ಸ್ಪೈವೇರ್‌ ಎನ್ನುವುದನ್ನು ದೃಢಪಡಿಸಿತ್ತು.

Follow Us:
Download App:
  • android
  • ios