ವೈದ್ಯರ ಮುಂದೆ ಕುಳಿತಿದ್ದ ವ್ಯಕ್ತಿ ದಿಢೀರ್ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಡಾಕ್ಟರ್ ಸಿಪಿಆರ್ ಮೂಲಕ ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಕೊಲ್ಹಾಪುರ(ಸೆ.05): ವೈದ್ಯರ ಜೊತೆ ಮಾತನಾಡುತ್ತಿರುವಾಗಲೇ ರೋಗಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸಮಯ ಪ್ರಜ್ಞೆ ಮೆರೆದ ಡಾಕ್ಟರ್ ಸಿಪಿಐರ್ ಪ್ರಥಮ ಚಿಕಿತ್ಸೆ ಮೂಲಕ ರೋಗಿಯ ಪ್ರಾಣ ಉಳಿಸಿದ ವಿಡಿಯೋ ಭಾರಿ ವೈರಲ್ ಆಗಿದೆ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ. ವ್ಯಕ್ತಿಯೊಬ್ಬರು ವೈದ್ಯರ ಬಳಿ ಬಂದಿದ್ದಾರೆ. ವೈದ್ಯರು ಮುಂದೆ ಕೂತ ಮಾತನಾಡುತ್ತಿರುವ ವೇಳೆ ಅಸ್ವಸ್ಥಗೊಂಡಿದ್ದಾರೆ. ಮಾತನಾಡುತ್ತಲೇ ಕುಳಿತಲ್ಲೇ ಕುಸಿದಿದ್ದಾರೆ. ಇದನ್ನು ಗಮನಿಸಿದ ವೈದ್ಯರು ತಕ್ಷಣವೇ ಎದ್ದು ವ್ಯಕ್ತಿಯ ಬಳಿಕ ಬಂದು ಸಿಪಿಆರ್ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಸೂಕ್ತ ಸಮಯದಲ್ಲಿ ಸಿಕ್ಕಿದ ಸಿಪಿಆರ್‌ನಿಂದ ಕೆಲ ಹೊತ್ತಲ್ಲಿ ರೋಗಿ ಚೇತರಿಸಿಕೊಂಡಿದ್ದಾರೆ. ವೈದ್ಯರು ಸಮಯ ಪ್ರಜ್ಞೆ, ಸೂಕ್ತ ಪ್ರಥಮ ಚಿಕಿತ್ಸೆಯಿಂದ ರೋಗಿ ಬದುಕಳಿದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ರಾಜ್ಯಸಭಾ ಸದಸ್ಯ ಧನಂಜಯ್ ಮಹದಿಕ್ ಸೇರಿದಂತೆ ಹಲವರು ಈ ವಿಡಿಯೋ ಹಂಚಿಕೊಂಡಿದ್ದಾರೆ.
ರೋಗಿಯ ಪ್ರಾಣ ಉಳಿಸಿದ ವೈದ್ಯ ಅರ್ಜುನ್ ಅದ್ನಾಯಕ್. ಇದೀಗ ಡಾಕ್ಟರ್ ಅರ್ಜುನ್ ಕಾರ್ಯಕ್ಕೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಿಯಲ್ ಹೀರೋ ಎಂದಿದ್ದಾರೆ. ನೀಲಿ ಬಣ್ಣದ ಶರ್ಟ್ ಧರಿಸಿದ್ದ ವ್ಯಕ್ತಿ ಡಾಕ್ಟರ್ ಅರ್ಜುನ್ ಬಳಿ ಬಂದಿದ್ದಾರೆ. ಇತ್ತ ಅರ್ಜುನ್ ಸಹಜವಾಗಿ ರೋಗಿಯ ಆರೋಗ್ಯದ ಕುರಿತು ಮಾಹಿತಿ ಕೇಳಿದ್ದಾರೆ. ಇದರ ನಡುವೆ ಇತರ ಕೆಲವರ ಆರೋಗ್ಯ ವರದಿಗಳ ಕುರಿತು ವೈದ್ಯರು ಕಣ್ಣಾಡಿಸಿದ್ದಾರೆ. ಆದರೆ ಈ ವ್ಯಕಿ ಆರೋಗ್ಯದಲ್ಲಿ ಏರುಪೇರಾಗಲು ಶುರುವಾಗಿದೆ. ಹೇಳಿಕೊಳ್ಳಲು ಆಗದಷ್ಟು ಆಸ್ವಸ್ಥರಾಗಿದ್ದಾರೆ. ಕೈಯಿಂದ ಸನ್ನೆ ಮಾಡಿದ್ದಾರೆ. ಆದರೆ ವೈದ್ಯರು ಇತರರ ವರದಿ ನೋಡುತ್ತಿದ್ದ ಕಾರಣ ಈ ಸನ್ನೆಯನ್ನು ಗಮನಿಸಿಲ್ಲ. ಸನ್ನೆ ಬೆನ್ನಲ್ಲೇ ವ್ಯಕ್ತಿ ಕುಳಿತಲ್ಲೇ ಪ್ರಜ್ಞೆ ಕಳೆದುಕೊಂಡು ಕುಸಿದಿದ್ದಾರೆ.
ಮನುಷ್ಯನ ಜೀವ ಉಳಿಸಬಲ್ಲ ಸಿಪಿಆರ್ ಚಿಕಿತ್ಸೆ ಬಗ್ಗೆ ತಿಳಿದಿರಿ
ಇದನ್ನು ಗಮನಿಸಿದ ವೈದ್ಯರು ತಕ್ಷಣವೇ ತಮ್ಮ ಕುರ್ಚಿಯಿಂದ ಎದ್ದು ವ್ಯಕ್ತಿಯ ಬಳಿ ಬಂದಿದ್ದಾರೆ. ಬಳಿಕ ಸಿಪಿಆರ್ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಡಾಕ್ಟರ್ ಅರ್ಜುನ್ ನೀಡಿದ ಪ್ರಥಮ ಚಿಕಿತ್ಸೆಯಿಂದ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿ ಚೇತರಿಸಿಕೊಂಡಿದ್ದಾರೆ. ವ್ಯಕ್ತಿ ಚೇತರಿಸಿಕೊಂಡ ಬಳಿಕ ಕೆಲ ಹೊತ್ತು ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.
ಹೃದಯಾಘಾತದ ಪ್ರಕರಣಗಳಲ್ಲಿ 10ರಲ್ಲಿ 9 ಪ್ರಕರಣಗಳು ಸೂಕ್ತ ಪ್ರಥಮ ಚಿಕಿತ್ಸೆ ಅಂದರೆ ಸಿಪಿಆರ್ ಸಿಗದೆ ಮೃತಪಟ್ಟ ಉದಾಹರಣೆಗಳೇ ಹೆಚ್ಚು. ಹೃದಯಾಘಾತದ ಸಂದರ್ಭದಲ್ಲಿ ತಟ್ಟನೆ ಸಿಪಿಆರ್ ಮಾಡಿದರೆ 10 ರಲ್ಲಿ 9 ಜೀವಗಳನ್ನು ಉಳಿಸಬಹುದು ಅನ್ನೋದು ವೈದ್ಯರ ವರದಿ. ಇದು ನಿಡ ಕೂಡ.
ಏನಿದು ಸಿಪಿಆರ್
ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್(CPR). ವ್ಯಕ್ತಿಯ ಹೃದಯಬಡಿತ ನಿಂತು ಹೋದಾಗ, ಅಥವಾ ಮೂರ್ಛೆ ಹೋದಾಗ, ನಾಡಿ ಮಿಡಿತ ಸ್ಥಗಿತಗೊಂಡಾಗ ಸಿಪಿಆರ್ ಸೂಕ್ತ ಪ್ರಥಮ ಚಿಕಿತ್ಸೆಯಾಗಿದೆ. ಈ ವೇಳೆ ವ್ಯಕ್ತಿಯ ಎದೆ ಅಥವಾ ಶ್ವಾಸಕೋಶದ ಭಾಗವನ್ನು ಮಿತವಾಗಿ ಒತ್ತುವುದು ಅಥವಾ ಸ್ಟ್ರೋಕ್ ನೀಡಿದರೆ ವ್ಯಕ್ತಿಯ ಉಸಿರಾಟಕ್ಕೆ ನೆರವಾಗಲಿದೆ. ಇದರಿಂದ ಹೃದಯ ಹಾಗೂ ಮೆದುಳಿಗೆ ರಕ್ತ ಸಂಚಲನ ಸರಾಗವಾಗಲಿದೆ. ಇದು ಸ್ಥಗಿತಗೊಂಡ ಹೃದಯ ಬಡಿತ ಮರಳಿ ವ್ಯಕ್ತಿಯ ಜೀವ ಉಳಿಸಲು ಸಾಧ್ಯವಾಗುತ್ತದೆ.
