ಹರಿದ್ವಾರ/ನವದೆಹಲಿ(ಜು.02): ಯೋಗಗುರು ರಾಮ್‌ದೇವ್‌ ನೇತೃತ್ವದ ಪತಂಜಲಿ ಆಯುರ್ವೇದ ಪರಿಶೋಧಿಸಿರುವ ಕೊರೋನಿಲ್‌ ಮಾರಾಟಕ್ಕೆ ಕೇಂದ್ರ ಆಯುಷ್‌ ಇಲಾಖೆ ಯಾವುದೇ ತಡೆ ಹೇರಿಲ್ಲ ಎಂಬ ವಿಚಾರ ಇದೀಗ ತಿಳಿದುಬಂದಿದೆ.

ಈ ಬಗ್ಗೆ ಬುಧವಾರ ಸ್ಪಷ್ಟನೆ ನೀಡಿದ ಕೇಂದ್ರ ಆಯುಷ್‌ ಇಲಾಖೆ, ‘ಪತಂಜಲಿ ಕೊರೋನಿಲ್‌ ಅನ್ನು ಮಾರಾಟ ಮಾಡಬಹುದು. ಆದರೆ, ಅದರಿಂದ ಕೊರೋನಾ ಗುಣಮುಖವಾಗುತ್ತದೆ ಎಂಬುದಾಗಿ ಹೇಳುವಂತಿಲ್ಲ’ ಎಂದು ಸೂಚನೆ ನೀಡಿದೆ.

ಉಲ್ಟಾ ಹೊಡೆದ ಪತಂಜಲಿ: ಕೊರೋನಾ ಔಷಧ ಕಂಡುಹಿಡಿದಿದ್ದಾಗಿ ಹೇಳೇ ಇಲ್ಲ!

ಇನ್ನು ಈ ಬಗ್ಗೆ ಹರಿದ್ವಾರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಾಬಾ ರಾಮ್‌ದೇವ್‌, ‘ಪತಂಜಲಿಯ ಕೊರೋನಿಲ್‌ ಮಾರಾಟಕ್ಕೆ ನಿಷೇಧ ಹೇರಿಲ್ಲ. ಕೊರೋನಿಲ್‌ ಔಷಧ ದೇಶಾದ್ಯಂತ ಮಾರಾಟಕ್ಕೆ ಮುಕ್ತವಾಗಿದೆ’ ಎಂದಿದ್ದಾರೆ.

ಕೆಮ್ಮಿನ ಔಷಧ ಎಂದು ಲೈಸೆನ್ಸ್‌ ಪಡೆದಿದ್ದ ಪತಂಜಲಿ!

ಕೆಮ್ಮು ಮತ್ತು ಜ್ವರ ಬರದಂತೆ ತಡೆಯಲು ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧದ ಹೆಸರಲ್ಲಿ ಪತಂಜಲಿ ಸಂಸ್ಥೆ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಿತ್ತು. ಅದರಂತೆ ಕಂಪನಿಗೆ ಔಷಧ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಅದನ್ನು ಕೋವಿಡ್‌ 19ಗೆ ಔಷಧ ಕಿಟ್‌ ಎಂದು ಬಿಡುಗಡೆ ಮಾಡಿದ್ದು, ಈ ಬಗ್ಗೆ ಪತಂಜಲಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು.