ನವದೆಹಲಿ(ಸೆ.28): ಬ್ರಿಟನ್‌ ಮತ್ತು ದುಬೈನಿಂದ ಆಗಮಿಸಿದ ಪ್ರವಾಸಿಗರೇ ಭಾರತದಲ್ಲಿ ಕೊರೋನಾ ವೈರಸ್‌ ಹರಡುವಿಕೆಯ ಪ್ರಾಥಮಿಕ ಮೂಲ ಎಂದು ಐಐಟಿ ಮಂಡಿ (ಶಿಲ್ಮಾ)ದ ನಡೆಸಿದ ಅಧ್ಯಯನ ವರದಿ ತಿಳಿಸಿದೆ.ಅಂತಾರಾಷ್ಟ್ರೀಯ ಪ್ರವಾಸಿಗರಿಂದಾಗಿ ಭಾರತದಲ್ಲಿ ಕೊರೋನಾ ವೈರಸ್‌ ಹೇಗೆ ಹರಡಿತು ಎಂಬ ಕುರಿತ ಅಧ್ಯಯನ ವರದಿಯನ್ನು ಟ್ರಾವೆಲ್‌ ಮೆಡಿಸಿನ್‌ ಎಂಬ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಈ ವರದಿಯ ಪ್ರಕಾರ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ದೆಹಲಿಯಲ್ಲಿ ಉಂಟಾದ ಸೋಂಕು ಕಡಿಮೆ ಪ್ರಮಾಣದಲ್ಲಿ ಸಮುದಾಯಕ್ಕೆ ಹರಡಿದೆ. ಆದರೆ, ಗುಜರಾತ್‌, ರಾಜಸ್ಥಾನ, ಮಹಾರಾಷ್ಟ್ರ, ಕೇರಳ, ಜಮ್ಮು- ಕಾಶ್ಮೀರ ಕರ್ನಾಟಕ ರಾಜ್ಯಗಳು ಸ್ಥಳೀಯವಾಗಿ ಭಾರೀ ಪ್ರಮಾಣದಲ್ಲಿ ಸೋಂಕು ಹರಡಲು ಕಾರಣವೆನಿಸಿದೆ.

ಕೊರೋನಾ ಸೋಂಕಿತರ ಟ್ರಾವೆಲ್‌ ಹಿಸ್ಟರಿಯನ್ನು ಆಧರಿಸಿ ಸೋಂಕು ಹರಡುವಿಕೆಯನ್ನು ಪತ್ತೆ ಮಾಡಲಾಗಿದೆ ಎಂದು ಐಐಟಿ ಮಂಡಿಯ ಸಹಾಯಕ ಪ್ರಾಧ್ಯಾಪಕ ಸರಿತಾ ಆಜಾದ್‌ ತಿಳಿಸಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಪ್ರಯಾಣಿಕರ ಪೈಕಿ ದುಬೈನಿಂದ ಬಂದವರು ಭಾರತದಲ್ಲಿ ಹೆಚ್ಚಿನ ಪ್ರಮಾಣದ ಸೋಂಕು ಹರಡಲು ಕಾರಣರಾಗಿದ್ದಾರೆ ಎಂದು ಸರಿತಾ ತಿಳಿಸಿದ್ದಾರೆ.