ದೋಹಾದಿಂದ ಹೈದರಾಬಾದ್‌ಗೆ ಬಂದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರ ಲಗೇಜ್‌ಗಳನ್ನು ವಿಮಾನದಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ದೋಹಾದಲ್ಲೇ ಬಿಡಲಾಗಿತ್ತು. ಲಗೇಜ್ ತಲುಪಿಸುವಲ್ಲಿ ವಿಳಂಬ ಮತ್ತು ಸಿಬ್ಬಂದಿಯ ಅಸಭ್ಯ ವರ್ತನೆಯ ಬಗ್ಗೆ ಪ್ರಯಾಣಿಕರು ದೂರಿದ್ದಾರೆ.

ಹೈದರಾಬಾದ್ (ಜ.21): ದೋಹಾದಿಂದ ಹೈದರಾಬಾದ್‌ಗೆ ಬಂದ ಇಂಡಿಗೋ ವಿಮಾನದ ಹಲವು ಪ್ರಯಾಣಿಕರು ತಮ್ಮ ಲಗೇಜ್ ಕಾಣದೆ ಆಘಾತಕ್ಕೊಳಗಾದರು. ವಿಮಾನದಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಏರ್‌ಲೈನ್ಸ್ ಅವರ ಲಗೇಜ್‌ಗಳನ್ನು ದೋಹಾದಲ್ಲೇ ಬಿಟ್ಟು ಬಂದಿತ್ತು.

ಜನವರಿ 11 ರಂದು ದೋಹಾದಿಂದ ಹೈದರಾಬಾದ್‌ಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ ಮದನ್ ಕುಮಾರ್ ರೆಡ್ಡಿ ಕೋಟ್ಲ ಎಂಬ ಪ್ರಯಾಣಿಕರು ತಮ್ಮ ಅನುಭವವನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ರಯಾಣಿಕರ ಲಗೇಜ್‌ಗಳನ್ನು ದೋಹಾದಲ್ಲೇ ಬಿಟ್ಟು ವಿಮಾನ ಹೈದರಾಬಾದ್‌ಗೆ ಬಂದಿಳಿದ ನಂತರವೇ ಈ ವಿಷಯ ತಿಳಿಸಲಾಯಿತು ಎಂದು ಹೇಳಿದ್ದಾರೆ.

ಏರ್‌ಲೈನ್ಸ್ ನೀಡಿದ ವಿವರಣೆ 'ನಂಬಲಸಾಧ್ಯ' ಎಂದು ಲಗೇಜ್ ಇಲ್ಲದೇ ಪರದಾಡಿದ ವ್ಯಕ್ತಿ ಮದನ್ ಕುಮಾರ್ ಹೇಳಿದ್ದಾರೆ. ವಿಮಾನದಲ್ಲಿ ಸ್ಥಳವಿಲ್ಲದ ಕಾರಣ ಲಗೇಜ್ ತರಲು ಸಾಧ್ಯವಾಗಲಿಲ್ಲ ಎಂಬುದು ಅವರ ವಿವರಣೆಯಾಗಿತ್ತು. ಲಗೇಜ್ ಕಾಣದ ಹಲವು ಪ್ರಯಾಣಿಕರು ಇಂಡಿಗೋ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, 24 ಗಂಟೆಗಳ ಒಳಗೆ ಲಗೇಜ್ ತಲುಪಿಸಲಾಗುವುದು. 14ನೇ ಬೆಲ್ಟ್‌ನಲ್ಲಿ ಬಂದು ಮಾಹಿತಿ ನೀಡಬೇಕು ಎಂದು ತಿಳಿಸಲಾಯಿತು. ಪ್ರಯಾಣಿಕರು ಅದರಂತೆ ಮಾಹಿತಿ ನೀಡಿದರು.

ಆದರೆ, ಇಂಡಿಗೋ ವಿಮಾನದ ಸಿಬ್ಬಂದಿಯ ವರ್ತನೆ ತೃಪ್ತಿಕರವಾಗಿರಲಿಲ್ಲ. 20ಕ್ಕೂ ಹೆಚ್ಚು ಪ್ರಯಾಣಿಕರಿಂದ ವಿಳಾಸ ಮತ್ತು ಇತರ ಮಾಹಿತಿಯನ್ನು ಸಂಗ್ರಹಿಸಲು ವಿಳಂಬವಾಯಿತು ಎಂದು ಮದನ್ ಕುಮಾರ್ ಆರೋಪಿಸಿದ್ದಾರೆ. ಪ್ರತಿ ಪ್ರಯಾಣಿಕರಿಂದ ಮಾಹಿತಿ ಪಡೆಯಲು 20 ನಿಮಿಷಗಳನ್ನು ತೆಗೆದುಕೊಳ್ಳಲಾಯಿತು ಮತ್ತು ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದರು ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪಾಕ್​ ವಿರುದ್ಧ ಗುಡುಗಿ, ಭಾರತದ ಗುಣಗಾನ ಮಾಡಿದ 12 ಯೂಟ್ಯೂಬರ್ಸ್​ಗೆ ಗಲ್ಲು? ಮಧ್ಯರಾತ್ರಿ ನಡೆದದ್ದೇನು?

ಇನ್ನು ಎಲ್ಲ ಪ್ರಯಾಣಿಕರ ಲಗೇಜ್‌ಗಳನ್ನು ಮುಂದಿನ 24 ಗಂಟೆಗಳಲ್ಲಿ ಲಗೇಜ್ ತಲುಪಿಸುವುದಾಗಿ ಭರವಸೆ ನೀಡಿದ್ದರೂ, ಅದು ಬಂದು ನಮಗೆ ತಲುಪುವುದಕ್ಕೆ ಮೂರು ದಿನಗಳು ತೆಗೆದುಕೊಂಡಿತು. ಅಂದರೆ, ನಾವು ದೋಹಾದಿಂದ ಜ.11ರಂದು ಹೈದರಾಬಾದ್‌ಗೆ ಬಂದರೆ, ನಮ್ಮ ಲಗೇಜ್‌ಗಳು ಬಂದಿದ್ದು ಜ.14ನೇ ತಾರೀಖಿನಂದು. ಇಂಡಿಗೋ ವಿಮಾನಯಾನ ಸಂಸ್ಥೆಯು ಅತ್ಯಂತ ನಿರ್ಲಕ್ಷ್ಯದಿಂದ ಲಗೇಜ್ ತಲುಪಿಸಲಾಗಿದೆ ಎಂದು ಪ್ರಯಾಣಿಕ ಮದನ್‌ಕುಮಾರ್ ಆರೋಪಿಸಿದ್ದಾರೆ. 

ನಮ್ಮ ಲಗೇಜ್‌ಗಳನ್ನು ನಾವು ಎಷ್ಟು ಕಾಳಜಿ ಮಾಡಿ, ತೆಗೆದುಕೊಂಡು ಹೋಗುತ್ತೇವೆ. ಆದರೆ, ವಿಮಾನಯಾನ ಸಂಸ್ಥೆಯು ನಮಗೆ ಲಗೇಜ್‌ಗಳನ್ನು ಗೂಡ್ಸ್‌ ಆಟೋದಲ್ಲಿ ತೆಗೆದುಕೊಂಡು ಬಂದು ತಲುಪಿಸಿದೆ. ನಮ್ಮ ಬೆಲೆಬಾಳುವ ವಾಚ್ ಸೇರಿದಂತೆ ಹಲವು ವಸ್ತುಗಳು ಲಗೇಜ್‌ನಿಂದ ಕಾಣೆಯಾಗಿವೆ ಎಂದು ದೂರು ನೀಡಿದ್ದಾರೆ. ಇದರ ಫೋಟೋಗಳನ್ನು ಕೂಡ ಅವರು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇಂಡಿಗೋದಲ್ಲಿನ ತಮ್ಮ ಪ್ರಯಾಣದ ಅನುಭವ 'ತುಂಬಾ ಕೆಟ್ಟದಾಗಿತ್ತು' ಎಂದು ಪ್ರಯಾಣಿಕ ಮದನ್ ಕುಮಾರ್ ಹೇಳಿಕೊಂಡಿದ್ದಾರೆ.