ಖಾಸಗಿ ಬಸ್ ಭೀಕರ ಅಪಘಾತ, ಪ್ರಪಾತಕ್ಕೆ ಉರುಳಿ 8 ಪ್ರಯಾಣಿಕರು ಸಾವು, ಹಲವರಿಗೆ ಗಾಯ, 30 ರಿಂದ 35 ಮಂದಿ ಪ್ರಯಾಣಿಸುತ್ತಿದ್ದ ಬಸ್ ಪ್ರವಾತಕ್ಕೆ ಉರುಳಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದರೆ. ರಕ್ಷಣಾ ಕಾರ್ಯಾಚರಣೆ ಸಾಗಿದೆ.
ಶಿಮ್ಲಾ (ಜ.09) ಹೊಸ ವರ್ಷದಲ್ಲಿ ಅಪಘಾತದ ಪ್ರಮಾಣ ಹೆಚ್ಚಾಗುತ್ತಿದೆ. ಇಂದು ಅಯ್ಯಪ್ಪ ಭಕ್ತರ ವಾಹನ ಭೀಕರ ಅಪಘಾತದ ಸಾವು ನೋವಿನ ಬೆನ್ನಲ್ಲೇ ಇದೀಗ 30 ರಿಂದ 35 ಮಂದಿ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ನಿಯಂತ್ರಣ ತಪ್ಪಿ ಬಸ್ ಪ್ರಪಾತಕ್ಕೆ ಉರುಳಿದೆ. ಬಸ್ ಪ್ರಯಾಣಿಕರ ಪೈಕಿ 8 ಮಂದಿ ಮೃತಪಟ್ಟ ಘಟನೆ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸ್ ಹಾಗೂ ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆ ಮಾಡುತ್ತಿದೆ. ಮೂಲಗಳ ಪ್ರಕಾರ ಬಹುತೇಕ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಬಸ್
ಹಿಮಾಚಲ ಪ್ರದೇಶ ಪರ್ವತ ಶಿಖರಗಳ ರಾಜ್ಯ. ಇಲ್ಲಿ ಬಸ್ ಸೇರಿದಂತೆ ರಸ್ತೆ ಪ್ರಯಾಣ ಅತ್ಯಂತ ಸವಾಲು. ಒಂದಡೆ ದಟ್ಟ ಮಂಜು, ಮತ್ತೊಂದೆಡೆ ಕಡಿದಾದ ರಸ್ತೆಗಳಿಂದ ಪ್ರಯಾಣ ಸವಲಾಗಿದೆ. ಕುಪ್ವಿಯಿಂದ ಶಿಮ್ಲಾಗೆ ಪ್ರಯಾಣಿಕರ ಹೊತ್ತು ಸಾಗುತ್ತಿದ್ದ ಖಾಸಗಿ ಬಸ್ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಇದರ ಪರಿಣಾಮ ಘನಘೋರ ಅಪಘಾತ ಸಂಭವಿಸಿದೆ.
ಬಸ್ ಪ್ರಪಾತಕ್ಕೆ ಉರುಳಿದ ಮಾಹಿತಿ ಸಿಗುತ್ತಿದ್ದಂತೆ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಇದೇ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿರ್ಮೌರ್ ಪೊಲೀಸ್ ಎಸ್‌ಪಿ ನಿಶ್ಚಿಂತ್ ಸಿಂಗ್ ನೇಗಿ ಸೇರಿದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಭಾರಿ ಪ್ರಪಾತದಿಂದ ಗಾಯಾಳುಗಳ ಮೇಲಕ್ಕೆ ತಂದು ಆಸ್ಪತ್ರೆ ದಾಖಲಿಸುವ ಪ್ರಯತ್ನ ನಡೆಯುುತ್ತಿದೆ. ಈಗಾಗಲೇ 8 ಮಂದಿ ಮೃತಪಟ್ಟಿರುವುದಾಗಿ ನಿಶ್ಚಿಂತ್ ಸಿಂಂಗ್ ನೇಗಿ ಖಚಿತಪಡಿಸಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸಲಾಗುತ್ತಿದೆ. ಆ್ಯಂಬುಲೆನ್ಸ್ ಸೇವೆಗಳು ಸ್ಥಳದಲ್ಲಿದೆ ಎಂದು ನೇಗಿ ಹೇಳಿದ್ದಾರೆ.
ತುಮಕೂರಿನಲ್ಲಿ ಅಯ್ಯಪ್ಪ ಮಾಲಾಧಾರಿಗಳ ವಾಹನ ಅಪಘಾತ
ಇಂದು ತುಮಕೂರಿನಲ್ಲಿ ಅಯ್ಯಪ್ಪ ಮಾಲಾಧಾರಿಗಳ ಕ್ರೂಸರ್ ವಾಹನ ನಿಂತಿದ್ದ ಲಾರಿಗೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಬೆಳಗ್ಗೆ 5.30ರ ವೇಳೆಗೆ ಅಪಘಾತ ಸಂಭವಿಸಿದೆ. ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದರು. ಶಬರಿಮೆಲೆಗೆ ತೆರಳಿ ವಾಪಾಸ್ ಬರುವಾಗ ಅಪಘಾತ ನಡೆದಿದೆ. ಕ್ರೂಸರ್ ವಾಹನದಲ್ಲಿ 11 ಅಯ್ಯಪ್ಪ ಮಾಲಾಧಾರಿಗಳಿದ್ದರು. ಈ ಪೈಕಿ ನಾಲ್ವರು ಮೃತಪಟ್ಟಿದ್ದರೆ, ಇನ್ನುಳಿದವರನ್ನು ಆಸ್ಪತ್ರೆ ದಾಖಲಿಸಲಾಗಿದೆ. ಘಟನೆ ನಡೆದಿರುವಂತಹ ಸ್ಥಳ ಬ್ಲಾಕ್ ಸ್ಟಾಟ್ ಏನು ಇಲ್ಲ. ಶೌಚಾಲಯಕ್ಕೆ ಹೋಗಲು ಲಾರಿಯನ್ನ ರಸ್ತೆ ಬದಿ ನಿಲ್ಲಿಸಿದ್ದಾರೆ. ಇದರ ಹಿಂದಿನಿಂದ ಬಂದ ಕ್ರೂಸರ್ ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆ ಸಂಬಂಧ ಲಾರಿ ಚಾಲಕ ಹಾಗೂ ಕ್ರೂಸರ್ ವಾಹನದ ಚಾಲಕನ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ. ಎ1 ಆರೋಪಿಯಾಗಿ ಕ್ರೂಸರ್ ವಾಹನದ ಚಾಲಕ ಪ್ರದೀಪ್, ಹಾಗೂ ಎ2 ಆರೋಪಿಯಾಗಿ ಲಾರಿ ಚಾಲಕ ಸತೀಶ್ ಮೇಲೆ ಎಫ್ಐಆರ್ ದಾಖಲಾಗಿದೆ.


