ಇಂದೋರ್‌ನಲ್ಲಿ ಭೀಕರ ಕಾರು ಅಪಘಾತ, ಕಾರು ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಮಧ್ಯಪ್ರದೇಶ ಮಾಜಿ ಗೃಹ ಸಚಿವರ ಪುತ್ರಿ ಸೇರಿದಂತೆ ಮೂವರು ಮೃತಪಟ್ಟರೆ, ಮತ್ತೊಬ್ಬ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಇಂದೋರ್ (ಜ.09) ಕಾರು ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಫಘಾತದಲ್ಲಿ ಮಧ್ಯ ಪ್ರದೇಶ ಮಾಜಿ ಗೃಹ ಸಚಿವ ಹಾಗೂ ರಾಜ್‌ಪುರ್ ಹಾಲಿ ಶಾಸಕ ಬಾಲಾ ಬಚ್ಚನ್ ಪುತ್ರಿ ಮೃತಪಟ್ಟಿದ್ದಾರೆ. ನಾಲ್ವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮಾಜಿ ಗೃಹ ಸಚಿವರ ಪುತ್ರಿ ಪ್ರೇರಣ ಬಚ್ಚನ್ ಸೇರಿ ಮೂವರು ಮತಪಟ್ಟಿದ್ದರೆ, ಮತ್ತೊರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತೇಜಾಜಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಟ್ರಕ್ ಚಾಲಕ ಪೊಲೀಸ್ ವಶಕ್ಕೆ

ಪ್ರೇರಣ ಬಚ್ಚನ್ ಸೇರಿ ನಾಲ್ವರು ಕಾರಿನ ಮೂಲಕ ಇಂದು (ಜ.09) ಬೆಳಗ್ಗೆ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕಾರು ವೇಗವಾಗಿ ಸಾಗುತ್ತಿದ್ದಂತೆ ಅತೀ ವೇಗವಾಗಿ ಬಂದ ಟ್ರಕ್ ಡಿಕ್ಕಿಯಾಗಿದೆ.ಭೀಕರ ಅಫಘಾತದಲ್ಲಿ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಘಟನೆಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಗಾಯಗೊಂಡ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಟ್ರಕ್ ಚಾಲಕನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

ಅಪಘಾತದಲ್ಲಿ ಮೃತ ದುರ್ದೈವಿಗಳು

ಪ್ರೇರಣ ಬಚ್ಚನ್ ( ಮಾಜಿ ಗೃಹ ಸಚಿವ ಬಾಲಾ ಬಚ್ಚನ್ ಪುತ್ರಿ, ಮಧ್ಯಪ್ರದೇಶ)

ಮಾನ್ ಸಂಧು (ಮಧ್ಯಪ್ರದೇಶ)

ಪ್ರಖರ್ (ಮಧ್ಯಪ್ರದೇಶ)

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಸಂಪೂರ್ಣ ನಜ್ಜು ಗುಜ್ಜಾದ ಕಾರಿನಿಂದ ಸ್ಥಳೀಯರ ನೆರವಿನೊಂದಿಗೆ ಪೊಲೀಸರು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇತ್ತ ಗಾಯಗೊಂಡಿದ್ದ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಘಟನೆಗೆ ಕಾರಣವೇನು? ಅನ್ನೋ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ಲಭ್ಯವಿರುವ ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿದ್ದಾರೆ. ಅತೀ ವೇಗದ ಚಾಲನೆ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.

ಘಟನೆಗೆ ಆಘಾತ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ

ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ರಸ್ತೆ ಅಪಘಾತದಲ್ಲಿ ಮಧ್ಯಪ್ರದೇಶ ಮಾಜಿ ಗೃಹ ಸಚಿವರ ಪುತ್ರಿ ಮೃತಪಟ್ಟಿರುವ ಮಾಹಿತಿ ಕೇಳಿ ಆಘಾತ ಹಾಗೂ ತೀವ್ರ ನೋವುಂಟು ಮಾಡಿದೆ ಎಂದಿದ್ದಾರೆ. ಇದೇ ವೇಳೆ ವಿರೋಧ ಪಕ್ಷದ ನಾಯಕ ಉಮಂಗ್ ಸಿಂಘಾರ್ ಸೇರಿದಂತೆ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ.

ಮಡುಗಟ್ಟಿದ ದುಃಖ

ಇತ್ತ ಶಾಸಕ ಬಾಲಾ ಬಚ್ಚನ್ ಮನೆಯಲ್ಲಿ ಶೋಕ ಮಡಗಟ್ಟಿದೆ. ಮುದ್ದಿನ ಮಗಳು ಅಗಲಿಕೆಯಿಂದ ತಂದೆ ಬಾಲಾ ಬಚ್ಚನ್ ತೀವ್ರ ಆಘಾತಗೊಂಡಿದ್ದಾರೆ. ಇತ್ತ ತಾಯಿ ಸೇರಿದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶಾಸಕರ ಮನೆ ಮಂದೆ ಸ್ಥಳೀಯರು ಜಮಾಯಿಸಿದ್ದಾರೆ. ಇತ್ತ ಮೃತದೇಹಗಳನ್ನು ಸ್ಥಳೀಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹಗಳ ಹಸ್ತಾಂತರ ನಡೆಯಲಿದೆ. ಇಂದು ಸಂಜೆ ವೇಳೆ ಬಾಲಾ ಬಚ್ಚನ್ ಮನೆಗೆ ಪೇರಣ ಬಚ್ಚನ್ ಪಾರ್ಥೀವ ಶರೀರ ಆಗಮಿಸಲಿದೆ.