ಮೆನುನಿಂದ ಮಾಂಸಹಾರ ಮಾಯ: ಸಂಸತ್ ಕ್ಯಾಂಟೀನ್ ಶೀಘ್ರ ಸಸ್ಯಾಹಾರಿ!
ಸಂಸತ್ ಕ್ಯಾಂಟೀನ್ ಶೀಘ್ರ ಸಸ್ಯಾಹಾರಿ!| ಮೆನುನಿಂದ ಮಾಂಸಾಹಾರ ಮಾಯ ಸಾಧ್ಯತೆ| ಕ್ಯಾಂಟೀನ್ ಗುತ್ತಿಗೆ ಮುಂಚೂಣಿಯಲ್ಲಿ ಹಲ್ದೀರಾಂ, ಬಿಕರ್‌ನೇವಾಲಾ| ಈ ಎರಡೂ ಕಂಪನಿಗಳು ಸಸ್ಯಾಹಾರಿ
ನವದೆಹಲಿ[ಜ.15]: ಸಂಸತ್ ಕ್ಯಾಂಟೀನ್‌ನಲ್ಲಿ ಸಂಸದರು, ಸಂಸತ್ ಸಿಬ್ಬಂದಿ ಹಾಗೂ ಇತರರಿಗೆ ನೀಡಲಾಗುತ್ತಿದ್ದ ಸಬ್ಸಿಡಿ ಸೌಲಭ್ಯ ಹೋಗಿದ್ದಾಯ್ತು. ಈಗ ಮಾಂಸಾಹಾರ ಕೂಡ ‘ಮೆನು’ದಿಂದ ಮಾಯವಾಗುವ ಸಾಧ್ಯತೆ ಇದೆ.
ಸಂಸತ್ ಭವನದಲ್ಲಿನ ಕ್ಯಾಂಟೀನ್‌ಗಳನ್ನು ಈವರೆಗೂ ಭಾರತೀಯ ರೈಲ್ವೆಯ ಅಂಗ ಸಂಸ್ಥೆಯಾದ ‘ಐಆರ್‌ಸಿಟಿಸಿ’ ನಿರ್ವಹಿಸಿಕೊಂಡು ಬರುತ್ತಿದೆ. ಆದರೆ ಐಆರ್‌ಸಿಟಿಸಿ ಒದಗಿಸುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ಸಂಸದರು ಹಾಗೂ ಇತರರಿಂದ ಆಕ್ಷೇಪ ವ್ಯಕ್ತವಾಗುತ್ತಿತ್ತು.
ತಲೆ ಎತ್ತಲಿದೆ ಹೊಸ ಸಂಸತ್ ಭವನ: 75ನೇ ಸ್ವಾತಂತ್ರ್ಯ ದಿನಕ್ಕೆ ಉಡುಗೊರೆ!
ಆದ್ದರಿಂದ ಹೊಸ ಕಂಪನಿಗಳಿಗೆ ಆಹಾರ ಗುತ್ತಿಗೆ ನೀಡುವ ಸಾಧ್ಯತೆ ಇದೆ. ‘ಬಿಕಾನೇರ್‌ವಾಲಾ’ ಹಾಗೂ ‘ಹಲ್ದೀರಾಂ’ ಕಂಪನಿಗಳು ಬಿಡ್ಡಿಂಗ್‌ನಲ್ಲಿ ಮುಂಚೂಣಿಯಲ್ಲಿದ್ದು, ಎರಡರಲ್ಲಿ ಒಂದಕ್ಕೆ ಗುತ್ತಿಗೆ ಹೊಣೆ ಹೋಗುವ ನಿರೀಕ್ಷೆಯಿದೆ. ಈ ಎರಡೂ ಕಂಪನಿಗಳು ಸಸ್ಯಾಹಾರಿ ಆಹಾರ ಮಾತ್ರ ಸಿದ್ಧಪಡಿಸುವ ಕಂಪನಿಗಳಾಗಿವೆ. ಹೀಗಾಗಿ ಇದೇ ಕಂಪನಿಗಳಗೆ ಗುತ್ತಿಗೆ ಸಿಕ್ಕರೆ ಸಂಸತ್ ಕ್ಯಾಂಟೀನ್ ‘ಮೆನು’ನಲ್ಲಿ ಮಾಂಸಾಹಾರ ಸಿಗಲಿಕ್ಕಿಲ್ಲ ಎಂದು ಹೇಳಲಾಗಿದೆ.
ಈಗ ಸಂಸದೀಯ ಆಹಾರ ಸಮಿತಿ ಅಸ್ತಿತ್ವದಲ್ಲಿಲ್ಲ. ಹೀಗಾಗಿ ಗುತ್ತಿಗೆಯನ್ನು ಯಾರಿಗೆ ನೀಡಬೇಕೆಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.