ಸಾಯಲು ಇಷ್ಟವಿಲ್ಲ ಅಪ್ಪ ಕಾಪಾಡು, ಇದು 27ರ ಹರೆಯದ ಟೆಕ್ಕಿಯ ಕೊನೆಯ ಕರೆ. ತಂದೆ ಸ್ಥಳಕ್ಕೆ ಓಡೋಡಿ ಬಂದಿದ್ದಾರೆ. ಆದರೆ ಮಗನ ರಕ್ಷಿಸಲು ಸಾಧ್ಯವಾಗದೆ ಕಣ್ಣೀರಿಡುತ್ತಿದ್ದಾರೆ. ಟೆಕ್ಕಿ ಕೆಸರು ತುಂಬಿದ ಗುಂಡಿಗೆ ಬಿದ್ದು ಮೃತಪಟ್ಟ ದುರಂತ ಘಟನೆ ನಡೆದಿದೆ.
ಗ್ರೇಟರ್ ನೋಯ್ಡಾ (ಜ.18) ಕೆಲಸ ಮುಗಿಸಿ ಮನೆಗೆ ಕಾರಿನಲ್ಲಿ ಮರಳುತ್ತಿದ್ದ 27ರ ಹರೆಯದ ಟೆಕ್ಕಿ ದುರಂತ ಅಂತ್ಯಕಂಡಿದ್ದಾರೆ. ದಟ್ಟ ಮಂಜು, ಅರೆ ಬರೆ ಕಾಮಗಾರಿಗಳಿಂದ ಸ್ಪಷ್ಟ ಗೋಚರತೆ ಕೊರತೆಯಿಂದ ಕಾಮಗಾರಿಯಿಂದ ಸೃಷ್ಟಿಯಾಗಿದ್ದ ಕೆಸರು ತುಂಬಿದ ಕೊಳಕ್ಕೆ ಕಾರು ಬಿದ್ದು ಟೆಕ್ಕಿ ಮೃತಪಟ್ಟ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಯುವರಾಜ್ ಮೆಹ್ತಾ ಕಾರಿನ ಸಮೇತ ಗುಂಡಿಗೆ ಬಿದ್ದ ಬೆನ್ನಲ್ಲೇ ಸಹಾಯಕ್ಕಾಗಿ ಕೊನೆಯದಾಗಿ ತನ್ನ ತಂದೆಗೆ ಕರೆ ಮಾಡಿದ್ದಾರೆ. ಗುಂಡಿಗೆ ಕಾರು ಬಿದ್ದಿದೆ. ನನಗೆ ಸಾಯಲು ಇಷ್ಟವಿಲ್ಲ, ಕಾಪಾಡು ಅಪ್ಪ ಎಂದು ಕರೆ ಮಾಡಿದ ಹೃದಯವಿದ್ರಾವಕ ಘಟನೆ ನಡೆದಿದೆ.
ಸ್ಥಳಕ್ಕೆ ಧಾವಿಸಿ ಬಂದ ತಂದೆಗೂ ಮಗನ ರಕ್ಷಿಸಲು ಸಾಧ್ಯವಾಗಲಿಲ್ಲ
ಸೆಕ್ಟರ್ 150ರ ನಿವಾಸಿ ಯುವರಾಜ್ ಮೆಹ್ತ ಕೆಲಸ ಮುಗಿಸಿ ಶನಿವಾರ ಮುಂಜಾನೆ ವೇಳೆಗೆ ಕಾರಿನ ಮೂಲಕ ಮನೆಗೆ ಮರಳುವಾಗ ಘಟನೆ ನಡೆದಿದೆ. ದಟ್ಟವಾದ ಮಂಜು ಆವರಿಸಿದ್ದ ಕಾರಣ ದಾರಿ ಸರಿಯಾಗಿ ಕಾಣಿಸಿಲ್ಲ. ಇಷ್ಟೇ ಅಲ್ಲ ಅರೆ ಬರೆ ಕಾಮಗಾರಿ, ರಸ್ತೆಯಲ್ಲಿ ಯಾವುದೇ ರಿಫ್ಲೆಕ್ಟರ್ ಅಳವಡಿಕೆ ಮಾಡಿಲ್ಲ. ಹೀಗಾಗಿ ಮೆಹ್ತಾ ಕಾರು ನಿಯಂತ್ರಣ ತಪ್ಪಿ ಚರಂಡಿ ಗೋಡೆ ಮುರಿದು 60 ರಿಂದ 70 ಅಡಿ ಆಳದ ಗುಂಡಿಗೆ ಬಿದ್ದಿದೆ. ಮಾಲ್ ನಿರ್ಮಾಣದ ಸ್ಥಳದಲ್ಲಿ ನಿರ್ಮಾಣಗೊಂಡಿದ್ದ ಆಳವಾದ ಗುಂಡಿಗೆ ಕಾರು ಬಿದ್ದಿದೆ. ಇದು ಕೆಸರು ನೀರಿನಿಂದ ತುಂಬಿದ ಗುಂಡಿ.
ಸಹಾಯಕ್ಕಾಗಿ ತಂದೆಗೆ ಕೊನೆಯ ಕರೆ
ಗುಂಡಿಗೆ ಬಿದ್ದ ಬೆನ್ನಲ್ಲೇ ಮೆಹ್ತಾಗೆ ಗಾಯಗಳಾಗಿವೆ. ಆದರೆ ಸಹಾಯಕ್ಕಾಗಿ ಕೂಗಿದ್ದಾರೆ. ಇತ್ತ ಶ್ರಮವಹಿಸಿ ತಂದೆಗೆ ಕೊನೆಯ ಕರೆ ಮಾಡಿದ್ದಾರೆ. ಅಪ್ಪಾ ನೀರು ತುಂಬಿದ ಆಳವಾದ ಗುಂಡಿಗೆ ಕಾರು ಸಮೇತ ಬಿದ್ದಿದ್ದೇನೆ. ಕೆಸರು ತುಂಬಿಕೊಳ್ಳುತ್ತಿದೆ. ನಾನು ಮುಳುಗುತ್ತಿದ್ದೇನೆ. ದಯವಿಟ್ಟು ನನ್ನನ್ನು ರಕ್ಷಿಸಲು ಅಪ್ಪಾ. ನನಗೆ ಸಾಯಲು ಇಷ್ಟವಿಲ್ಲ ಎಂದಿದ್ದಾರೆ. ಇತ್ತ ಆತಂಕದಲ್ಲೇ ಮೆಹ್ತಾ ತಂದೆ ಸ್ಥಳಕ್ಕೆ ಧಾವಿಸಿದ್ದಾರೆ. ಇತ್ತ ಪೊಲೀಸರಿಗೂ ಫೋನ್ ಮಾಡಿದ್ದಾರೆ. ಆಳವಾದ ಗುಂಡಿಯಲ್ಲಿ ಮಗನ ರಕ್ಷಣೆ ತಂದೆಗೆ ಸಾಧ್ಯವಾಗಿಲ್ಲ. ಇದೇ ವೇಳೆ ಡೆಲಿವರಿ ಬಾಯ್ ಹುಡುಗ ಸೊಂಟಕ್ಕೆ ಹಗ್ಗ ಕಟ್ಟಿ ಯುವರಾಜ್ ಮೆಹ್ತ ಪ್ರಾಣ ಉಳಿಸುವ ಪ್ರಯತ್ನ ಮಾಡಿದ್ದಾನೆ. ಆದರೆ ಸಾಧ್ಯವಾಗಿಲ್ಲ.
5 ಗಂಟೆ ಕಾರ್ಯಾಚರಣೆ ಬಳಿಕ ಮೃತದೇಹ ಹೊರಕ್ಕೆ
ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರ ನೆರವಿನಿಂದ ನಡೆಸಿದ 5 ಗಂಟೆಗಳ ಕಾರ್ಯಾಚರಣೆಯಲ್ಲಿ ಯುವರಾಜ್ ಮೆಹ್ತಾ ಮೃತದೇಹ ಹೊರತೆಗೆಯಲಾಗಿದೆ. ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸುರಕ್ಷತಾ ಕ್ರಮಗಳಿಗಾಗಿ ಅಧಿಕಾರಿಗಳಿಗೆ ಪದೇ ಪದೇ ಮನವಿ ಮಾಡಿದರೂ ಸರ್ವಿಸ್ ರಸ್ತೆಯಲ್ಲಿ ಯಾವುದೇ ರಿಫ್ಲೆಕ್ಟರ್‌ಗಳು, ಎಚ್ಚರಿಕೆ ಫಲಕಗಳು ಅಥವಾ ಸರಿಯಾದ ಬ್ಯಾರಿಕೇಡಿಂಗ್ ಇರಲಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ. ಕಾರ್ಯಾಚರಣೆಯ ಆರಂಭಿಕ ಹಂತಗಳಲ್ಲಿ ವಿಳಂಬ ಮತ್ತು ಸಾಕಷ್ಟು ರಕ್ಷಣಾ ಸಾಧನಗಳ ಕೊರತೆಯಿದೆ ಎಂದೂ ಕೆಲವರು ಆರೋಪಿಸಿದ್ದಾರೆ.
ಮೃತನ ತಂದೆಯಿಂದ ದೂರು
ಅರ್ಧ ಕಾಮಗಾರಿಗಳು, ರಸ್ತೆಯಲ್ಲಿ ಬ್ಯಾರಿಕೇಡ್ ಇಲ್ಲದೆ ಇರುವುದು ರಿಫ್ಲೆಕ್ಟರ್ ಅಳವಡಿಸದೇ ಇರುವುದು, ಅಸಮರ್ಪಕ ಕಾಮಗಾರಿಗಳ ಪರಿಣಾಮ ನನ್ನ ಮಗ ಮೃತಪಟ್ಟಿದ್ದಾನೆ. ಹಲವು ಎಚ್ಚರಿಕೆ ನೀಡಿದರೂ ನಿರ್ಲಕ್ಷ್ಯವಹಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಘಟನೆ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ದ ಆಕ್ರೋಶಕ್ಕೆ ಕಾರಣವಾಗಿದೆ.


