ಉಗ್ರರ ಭೀತಿ: ಕಾಶ್ಮೀರದಿಂದ ಹಿಂದೂಗಳ ಸಾಮೂಹಿಕ ಗುಳೆ!

* ಹಿಂದೂ-ಸಿಖ್‌ ವೈದ್ಯರು, ಶಿಕ್ಷಕರು, ವ್ಯಾಪಾರಿಗಳು ಟಾರ್ಗೆಟ್‌

* ಹೆಚ್ಚಿದ ಉಗ್ರ ದಾಳಿ: ಕಾಶ್ಮೀರದಿಂದ ಹಿಂದೂ, ಸಿಖ್ಖರ ಸಾಮೂಹಿಕ ಗುಳೆ

* ಕಾಶ್ಮೀರ ಕಣಿವೆಯಿಂದ 900ಕ್ಕೂ ಹೆಚ್ಚು ಹಿಂದೂಗಳು ಜಮ್ಮುಗೆ

Panic stricken Kashmiri Pandits go on leave in Kashmir Valley pod

ಶ್ರೀನಗರ(ಅ.10): ಅಲ್ಪಸಂಖ್ಯಾತ ಹಿಂದೂ(Hindu) ಮತ್ತು ಸಿಖ್ಖರನ್ನು(Sikh) ಗುರಿಯಾಗಿಸಿ ಕಳೆದೊಂದು ವಾರದಿಂದ ಕಾಶ್ಮೀರ ಕಣಿವೆಯಲ್ಲಿ(Kashmir Valley) ಆರಂಭವಾಗಿರುವ ಹತ್ಯೆಯ ಪ್ರಕರಣಗಳು, ಕಾಶ್ಮೀರಿ ಪಂಡಿತರಲ್ಲಿ(Kashmiri Pandit) ಆತಂಕ ಹುಟ್ಟುಹಾಕಿದ್ದು ಅವರೆಲ್ಲಾ ಕಣಿವೆಯಿಂದ ವಲಸೆ ಆರಂಭಿಸಿದ್ದಾರೆ. ಸುಮಾರು 400ಕ್ಕೂ ಹೆಚ್ಚು ಕುಟುಂಬ​ಗಳು ‘ಅ​ಸು​ರ​ಕ್ಷಿ​ತ​’ ಕಾಶ್ಮೀರ ಕಣಿ​ವೆ​ಯಿಂದ ‘ಸು​ರ​ಕ್ಷಿ​ತ’ ಜಮ್ಮು ವಲ​ಯಕ್ಕೆ ಗುಳೆ ಶುರು ಮಾಡಿ​ಕೊಂಡಿ​ದ್ದಾ​ರೆ.

ಕಳೆದ 4-5 ದಿನಗಳಲ್ಲಿ ವೈದ್ಯರು, ಸರ್ಕಾರಿ ಶಾಲೆ ಶಿಕ್ಷಕ, ಪ್ರಾಂಶುಪಾಲ, ಬೀದಿಬದಿ ವ್ಯಾಪಾರಿ ಸೇರಿದಂತೆ ನಾಲ್ವರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಇವರೆಲ್ಲಾ ಸ್ಥಳೀಯ ಅಲ್ಪಸಂಖ್ಯಾತ ಹಿಂದೂ ಮತ್ತು ಸಿಖ್‌ ಸಮುದಾಯಕ್ಕೆ ಸೇರಿದವರು. ಉಗ್ರರು(Terrorists) ಹೀಗೆ ತಮ್ಮನ್ನೇ ಗುರಿಯಾಗಿಸಿ ದಾಳಿ ನಡೆಸಿರುವುದು, ಕೇಂದ್ರ ಸರ್ಕಾರದ ಪುನಾವಸತಿ ಯೋಜನೆಯ ಭಾಗವಾಗಿ 2015ರಲ್ಲಿ ಕಾಶ್ಮೀರಕ್ಕೆ ಮರಳಿದ್ದ ಪಂಡಿತರು ಸೇರಿದಂತೆ ಹಿಂದೂಗಳಲ್ಲಿ ಆತಂಕ ಹುಟ್ಟುಹಾಕಿದೆ. ಇದು 90ರ ದಶಕದಲ್ಲಿ ರಾಜ್ಯವನ್ನು ಆವರಿಸಿದ್ದ ಇಸ್ಲಾಮಿಕ್‌ ಉಗ್ರವಾದ(Islamic Terrorism) ಮರುಕಳಿಸಿದ ಸುಳಿವಿರಬಹುದು ಎಂಬ ಭೀತಿ ಹುಟ್ಟುಹಾಕಿದೆ.

ಹೀಗಾಗಿ ಕಾಶ್ಮೀರದಲ್ಲಿ ಪಂಡಿತರಿಗೆಂದೇ ವಿಶೇಷವಾಗಿ ಸ್ಥಾಪಿಸಲಾಗಿದ್ದ ಶೇಖ್‌ಪೋರಾ ಪ್ರದೇಶದಲ್ಲಿ ನೆಲೆಸಿದ್ದ 400ಕ್ಕೂ ಹೆಚ್ಚು ಕಾಶ್ಮೀರಿ ಪಂಡಿತ ಕುಟುಂಬಗಳು ಒಂದೋ, ಹಿಂದೂಗಳು ಬಹುಸಂಖ್ಯಾತರಾಗಿರುವ ಜಮ್ಮು(Jammu) ವಲಯಕ್ಕೆ ವಲಸೆ ಹೋಗಲು ಇಲ್ಲವೇ ರಾಜ್ಯವನ್ನೇ ತೊರೆಯಲು ಆರಂಭಿಸಿದ್ದಾರೆ. ಶೇಖ್‌​ಪೋರಾ ಈಗ ನಿರ್ಜ​ನವಾ​ಗಿ​ದೆ.

‘ಇನ್ನು ಬದ್ಗಾಂ, ಅನಂತ್‌ನಾಗ್‌, ಪುಲ್ವಾಮಾ(Pulwama) ಪ್ರದೇಶಗಳಿಂದಲೂ ಕನಿಷ್ಠ 500 ಹಿಂದೂಗಳು ಜೀವಭಯದಿಂದ ವಲಸೆ ಹೊರಟಿದ್ದಾರೆ’ ಎಂದು ಕಾಶ್ಮೀರಿ ಪಂಡಿತ ಸಂಘರ್ಷ ಸಮಿತಿ ಅಧ್ಯಕ್ಷ ಸಂಜಯ್‌ ಟಿಕು ಪ್ರತಿಕ್ರಿಯೆ ನೀಡಿದ್ದಾರೆ.

ಕರ್ತ​ವ್ಯದ ವೇಳೆ ಭದ್ರ​ತೆಯೇ ಇಲ್ಲ- ಆಕ್ರೋ​ಶ:

‘ಇಂಥ ನಿರ್ದಿಷ್ಟದಾಳಿಗಳ ಬಗ್ಗೆ ಚರ್ಚಿಸಲು ಲೆಫ್ಟಿನೆಂಟ್‌ ಗವರ್ನರ್‌ ಬಳಿ ಕಳೆದ ಜೂನ್‌ ತಿಂಗಳಲ್ಲೇ ಸಮಯ ಕೇಳಿದ್ದೆವು. ಆದರೆ ಇಲ್ಲಿಯವರೆಗೂ ಅವರು ನಮಗೆ ಮಾತುಕತೆಗೆ ಅವಕಾಶವನ್ನೇ ನೀಡಿಲ್ಲ’ ಎಂದು ಟಿಕು ನೋವು ತೋಡಿಕೊಂಡಿದ್ದಾರೆ.

‘ಕಾಶ್ಮೀರ ಪಂಡಿತರ ಪುನಾವಸತಿ ಯೋಜನೆಯ ಭಾಗವಾಗಿ ಕಾಶ್ಮೀರದಲ್ಲಿ ಪಂಡಿತ ಸಮುದಾಯಕ್ಕೆಂದೇ ಪ್ರತ್ಯೇಕ ಪ್ರದೇಶ ನಿರ್ಮಿಸಲಾಗಿತ್ತು. ಅಲ್ಲಿಗೆ ವಾಸಕ್ಕೆ ಬರುವವರಿಗೆ ಮನೆ ಮತ್ತು ಸರ್ಕಾರಿ ಉದ್ಯೋಗವನ್ನು ನೀಡಲಾಗಿತ್ತು. ಇಡೀ ಪ್ರದೇಶಕ್ಕೆ ಭದ್ರತೆಯನ್ನೂ ಒದಗಿಸಲಾಗಿದೆ. ಆದರೆ ಇಡೀ ದಿನ ನಾವು ಈ ಪ್ರದೇಶದಲ್ಲೇ ಇರಲಾಗದು. ಸರ್ಕಾರಿ ಉದ್ಯೋಗ ನಿಮಿತ್ತ ಹೊರಗೂ ಹೋಗಬೇಕಾಗುತ್ತದೆ. ಕರ್ತ​ವ್ಯ​ದ ವೇಳೆ ನಮಗೆ ಭದ್ರತೆಯೇ ಇಲ್ಲ’ ಎಂದು ಹೆಸರು ಹೇಳಬಯಸದ ಕಾಶ್ಮೀರಿ ಪಂಡಿತರೊಬ್ಬರು ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

‘1990ರಲ್ಲಿ ನಾವು ಕಣಿವೆ ತೊರೆದಿದ್ದವು. ಕೊನೆಗೆ ಸರ್ಕಾರದ ಭರವಸೆ ಅನ್ವಯ ನನ್ನ ಮಗ ಇಲ್ಲಿ ಜೀವನ ಅರಸಿ ಬಂದಿದ್ದ. ಆದರೆ ಆತನಿಗೆ ಭದ್ರತೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಉಗ್ರರ ದಾಳಿಗೆ ತಮ್ಮ ಪುತ್ರನನ್ನು ಕಳೆದುಕೊಂಡ ಶಿಕ್ಷಕ ದೀಪಕ್‌ ಚಂದ್‌ನ ತಾಯಿ ಕಾಂತಾ ದೇವಿ ಕಣ್ಣೀರಿಡುತ್ತಿದ್ದಾರೆ.

ಶ್ರೀನ​ಗರ ಸನಿದ ಶೇಖ್‌​ಪೋ​ರಾದ 39 ವರ್ಷದ ಶಿಕ್ಷಕ ವಿನೋದ್‌ ಭಟ್‌ ಪ್ರತಿ​ಕ್ರಿ​ಯಸಿ, ‘ಶ್ರೀ​ನ​ಗ​ರ​ದಲ್ಲಿ ಇಬ್ಬರು ಶಿಕ್ಷ​ಕ​ರನ್ನು ಕೊಲ್ಲ​ಲಾ​ಗಿದೆ. ಹೀಗಾಗಿ ನನಗೆ 1 ವಾರ ಕರ್ತ​ವ್ಯಕ್ಕೆ ಬರ​ಬೇಡಿ ಎಂದು ಸೂಚಿ​ಸ​ಲಾ​ಗಿದೆ. ನಾನಿದ್ದ ಸ್ಥಳ​ದಲ್ಲಿ ಭದ್ರತೆ ಏರ್ಪ​ಡಿ​ಸ​ಲಾ​ಗಿದೆ. ಆದರೆ ನನಗೆ ಇದ​ರಲ್ಲಿ ವಿಶ್ವಾ​ಸ​ವಿಲ್ಲ. ನನಗೆ ಅಂಜಿಕೆ ಆಗಿದೆ. ನನಗೆ ಪತ್ಮಿ, ಇಬ್ಬರು ಮಕ್ಕಳು, ತಾಯಿ ಇದ್ದಾ​ರೆ. ಹಿಗಾಗಿ ನಾನು ಊರು ಬಿಡ​ಬೇ​ಕಿ​ದೆ’ ಎಂದ​ರು. ‘ಪಂಡಿ​ತರ ಹತ್ಯೆ​ಯಿಂದ ಬೆಚ್ಚಿ​ದ್ದೇವೆ. ಪರಿ​ಸ್ಥಿತಿ ಹದ​ಗೆ​ಟ್ಟಿದೆ. ನಾ​ವೆಲ್ಲ ಜಮ್ಮುಗೆ ಹೋಗ​ಲಿ​ದ್ದೇ​ವೆ’ ಎಂದು ಖುಷಿ ಎಂಬ ಇನೊಬ್ಬ ಮಹಿಳೆ ನುಡಿ​ದ​ಳು.

ಏನಿದು ಸಮಸ್ಯೆ?

ಕಾಶ್ಮೀರದಲ್ಲಿ ಇದ್ದಕ್ಕಿದ್ದಂತೆ ಸ್ಥಳೀಯ ಅಲ್ಪಸಂಖ್ಯಾತರಾದ ಹಿಂದೂ, ಸಿಖ್ಖರ ಮೇಲೆ ಉಗ್ರರ ದಾಳಿ ನಡೆಯುತ್ತಿದೆ. ಕಳೆದೊಂದು ವಾರದಲ್ಲಿ ವೈದ್ಯರು, ಶಿಕ್ಷಕರು, ವ್ಯಾಪಾರಿಗಳ ಹತ್ಯೆಯಾಗಿದೆ. ಹಿಂದೂ, ಸಿಖ್ಖರನ್ನು ಬೆದರಿಸಲು ಉಗ್ರರು ಈ ತಂತ್ರ ಹೂಡಿದ್ದಾರೆ ಎನ್ನಲಾಗುತ್ತಿದೆ. ಇದರೊಂದಿಗೆ 1990ರ ದಶಕದಲ್ಲಿ ಭುಗಿಲೆದ್ದ ಇಸ್ಲಾಮಿಕ್‌ ಉಗ್ರವಾದದಿಂದಾಗಿ ಲಕ್ಷಾಂತರ ಕಾಶ್ಮೀರಿ ಪಂಡಿತರು ಕಣಿವೆಯನ್ನು ತೊರೆದ ರೀತಿ ಈಗಲೂ ಆಗುತ್ತದೆಯೇ ಎಂಬ ಆತಂಕ ಸೃಷ್ಟಿಯಾಗಿದೆ.

Latest Videos
Follow Us:
Download App:
  • android
  • ios