ಪಶ್ಚಿಮ ಬಂಗಾಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ 15 ಮಂದಿ ಬಲಿಯಾಗಿದ್ದಾರೆ. ಮಕ್ಕಳು, ಮಹಿಳೆಯರು ಸೇರಿ ಹಲವರು ಗಾಯಗೊಂಡಿದ್ದಾರೆ. ರಕ್ಷಣೆಗೆ ತೆರಳಿದ ಪೊಲೀಸ್ ವಾಹನವನ್ನೇ ಕಿಡಿಗೇಡಿಗಳು ಸುಟ್ಟಿದ್ದಾರೆ. ಬಂಗಾಳದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪಿಸಲು ಕೇಂದ್ರ ಮಧ್ಯಪ್ರವೇಶಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಕೋಲ್ಕತಾ(ಜು.08) ಪಶ್ಚಿಮ ಬಂಗಾಳದ ಪ್ರತಿ ಚುನಾವಣೆಯಲ್ಲೂ ಹಿಂಸಾಚಾರ ತಾಂಡವವಾಡುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಹಲವರ ಮನೆಗಳು ಬೆಂಕಿಗೆ ಆಹುತಿಯಾಗಿತ್ತು. ಹಲವರ ಮೇಲೆ ದಾಳಿಯಾಗಿತ್ತು. ಫಲಿತಾಂಶದ ಬಂದ ಒಂದು ವಾರದವರೆಗೂ ಈ ಹಿಂಸಾಚಾರ ಮುಂದುವರಿತ್ತು. ಇದೀಗ ಪಂಚಾಯತ್ ಚುನಾವಣೆಯಲ್ಲಿ ಭಾರಿ ಹಿಂಸಾಚಾರ ನಡೆದಿದೆ. ಸಿಕ್ಕ ಸಿಕ್ಕ ಕಡೆ ದಾಳಿ ಮಾಡಲಾಗಿದೆ. ಗುಂಡು, ಬಾಂಬ್ ದಾಳಿ, ಕಲ್ಲು ತೂರಾಟ ಸೇರಿದಂತೆ ಭೀಕರ ದಾಳಿ ನಡೆದಿದೆ. ಈ ಹಿಂಸಾಚಾರದಲ್ಲಿ 15ಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದರೆ. ಮಕ್ಕಳು, ಮಹಿಳೆಯರು ಸೇರಿ ಹಲವರು ಗಾಯಗೊಂಡಿದ್ದಾರೆ.

ಪಶ್ಚಿಮ ಬಂಗಾಳದ 73887 ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸ್ಥಾನಗಳಿಗೆ ಇಂದು(ಜು.08) ಚುನಾವಣೆ ನಡೆದಿದೆ. ನಡೆದಿದೆ. ಕಳೆದ ಕೆಲ ದಿನಗಳಿಂದ ಬಂಗಾಳದಲ್ಲಿ ಹಿಂಸಾಚಾರ ನಡೆಯುತ್ತಲೇ ಇದೆ. ಪ್ರಚಾರದ ವೇಳೆ ದಾಳಿ, ಗುಂಡೇಟು ಸಾವು, ಗಾಯಗೊಂಡ ಘಟನೆಗಳು ವರದಿಯಾಗಿದೆ. ಆದರೆ ಚುನಾವಣಾ ದಿನ ಭಾರಿ ಹಿಂಸಾಚಾರ ಭುಗಿಲೆದ್ದಿದೆ. ಹಲೆವೆಡೆ ಮತಪೆಟ್ಟಿಗೆಗಳನ್ನೇ ಕದ್ದೊಯ್ದಿದ್ದಾರೆ. 

ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ಹಿಂಸಾಚಾರಕ್ಕೆ 14 ಸಾವು, ದೀದಿ ನಾಡಲ್ಲಿ ರಕ್ತಪಾತ!

ಶುಕ್ರವಾರ ರಾತ್ರಿಯಿಂದೀಚೆಗೆ ರಾಜ್ಯದೆಲ್ಲೆಡೆ ನಡೆದ ಹಿಂಸಾಚಾರಕ್ಕೆ 15 ಜನ ಬಲಿಯಾಗಿದ್ದಾರೆ. ಮತಗಟ್ಟೆವಶಕ್ಕೆ ಪಕ್ಷಗಳ ಕಾರ್ಯಕರ್ತರು ಯತ್ನಿಸಿ ಹಿಂಸಾ ಕೃತ್ಯ ಎಸಗಿದ್ದಾರೆ. ಜೂ.8ರಂದು ಚುನಾವಣೆ ಘೋಷಣೆಯಾದ ಬಳಿಕ ನಡೆದ ಹಿಂಸಾಚಾರಕ್ಕೆ ಬಲಿಯಾದ 15 ಜನರನ್ನೂ ಸೇರಿಸಿದರೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ಆಡಳಿತದಲ್ಲಿ ತಿಂಗಳಲ್ಲಿ ಬಲಿಯಾದವರ ಸಂಖ್ಯೆ 26ಕ್ಕೆ ಏರಿದೆ.

ಅಗತ್ಯ ಭದ್ರತಾ ಸಿಬ್ಬಂದಿ ಇದ್ದರೂ ರಾಜ್ಯ ಚುನಾವಣಾ ಆಯೋಗ ಅವರ ನಿಯೋಜನೆಗೆ ಹೋಗಿಲ್ಲ. ಇದು ಚುನಾವಣಾ ಆಯೋಗ, ಟಿಎಂಸಿ ಜತೆ ಕೈಜೋಡಿಸಿದೆ ಎಂಬುದಕ್ಕೆ ಸಾಕ್ಷಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸುಕಂತ ಮಜುಂದಾರ್‌ ಟೀಕಿಸಿದ್ದಾರೆ. ಮತ್ತೊಂದೆಡೆ ಭದ್ರತಾ ದೃಷ್ಟಿಯಿಂದ ಮುಂದೆ ಸಾಗದಂತೆ ನನಗೇ ಜನರು ಸಲಹೆ ನೀಡಿದ ಘಟನೆ ನಡೆದಿದೆ. ನಮ್ಮ ಅಕ್ಕಪಕ್ಕದಲ್ಲೇ ನಿರ್ಭೀತ ಹತ್ಯೆ ನಡೆಯುತ್ತಿದೆ. ಗೂಂಡಾಗಳು ಮತ ಚಲಾಯಿಸಲು ಬಿಡುತ್ತಿಲ್ಲ ಎಂದು ಮಹಿಳೆಯರು ದೂರಿದರು. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ರಾಜ್ಯಪಾಲ ಆನಂದ್‌ ಬೋಸ್‌ ಹಿಂಸಾಕೃತ್ಯಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಬಿಜೆಪಿ, ಸಿಪಿಎಂ ಮತ್ತು ಕಾಂಗ್ರೆಸ್‌ ಒಂದಾಗಿ ಹಿಂಸಾಕೃತ್ಯ ನಡೆಸಿವೆ. ಭದ್ರತೆಗಾಗಿ ನಿಯೋಜಿಸಿದ್ದ ಕೇಂದ್ರೀಯ ಭದ್ರತಾ ಪಡೆಗಳು ಎಲ್ಲಿ ಹೋದವು ಎಂದು ಟಿಎಂಸಿ ಸಚಿವ ಶಶಿ ಪಂಜಾ ಪ್ರಶ್ನಿಸಿದ್ದಾರೆ.

ಪಂಚಾಯತ್‌ ಚುನಾವಣೆ: ಬಂಗಾಳದಲ್ಲಿ ಭಾರಿ ಹಿಂಸಾಚಾರ; ಮೂವರು ಟಿಎಂಸಿ ಕಾರ್ಯಕರ್ತರ ಹತ್ಯೆ!

ಟಿಎಂಸಿ, ಬಿಜೆಪಿ, ಸಿಪಿಎಂ ಸೇರಿದಂತೆ ಬಹುಪಕ್ಷೀಯ ಕದನಕ್ಕೆ ಸಾಕ್ಷಿಯಾದ ಬಂಗಾಳದಲ್ಲಿ 73887 ಪಂಚಾಯತ್‌ ಸ್ಥಾನಗಳಿಗೆ 2.06 ಲಕ್ಷ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಆದರೆ ಶುಕ್ರವಾರ ರಾತ್ರಿಯಿಂದಲೇ ರಾಜ್ಯದಲ್ಲಿ ಭಾರೀ ಪ್ರಮಾಣದ ಹಿಂಸಾಚಾರ ನಡೆದು, ಟಿಎಂಸಿಯ 6, ಬಿಜೆಪಿ, ಸಿಪಿಎಂ, ಕಾಂಗ್ರೆಸ್‌, ಐಎಸ್‌ಎಫ್‌ನ ತಲಾ ಒಬ್ಬರು ಹಾಗೂ ಇನ್ನೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ.

ಇದಲ್ಲದೆ ರಾಜ್ಯದ ಹಲವೆಡೆ ಮತದಾರರನ್ನು ಬೂತ್‌ಗೆ ತೆರಳದಂತೆ ಅಡ್ಡಗಟ್ಟಿದ, ಮತದಾರರ ಮೇಲೆ ಹಲ್ಲೆ ನಡೆಸಿದ, ಬಲವಂತಾಗಿ ನಿರ್ದಿಷ್ಟಪಕ್ಷಕ್ಕೆ ಮತ ಹಾಕಿಸಿದ, ಬೂತ್‌ ಏಜೆಂಟ್‌ಗಳ ಮೇಲೆ ಹಲ್ಲೆ ನಡೆಸಿದ, ಬ್ಯಾಲೆಟ್‌ ಬಾಕ್ಸ್‌ ಎಸೆದ, ಅದರೊಳಗೆ ನೀರು ಹಾಕಿದ, ಬಾಕ್ಸ್‌ಗೆ ಬೆಂಕಿ ಹಚ್ಚಿದ, ಮತದಾನಕ್ಕೆ ಅಡ್ಡಿಪಡಿಸಿದ, ಮತಪೆಟ್ಟಿಗೆ ಅಪಹರಣ ಸೇರಿದಂತೆ ನಾನಾ ರೀತಿಯ ದುಷ್ಕೃತ್ಯಗಳು ನಡೆದಿವೆ.