ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ಹಿಂಸಾಚಾರಕ್ಕೆ 14 ಸಾವು, ದೀದಿ ನಾಡಲ್ಲಿ ರಕ್ತಪಾತ!
ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆ ಭಾರಿ ಹಿಂಸಾಚಾರಕ್ಕೆ ಕಾರಣಾಗಿದೆ. ಬೂತ್ ಬೂತ್‌ಗಳಲ್ಲಿ ಗಲಭೆ, ಕಲ್ಲು ತೂರಾಟ, ಗುಂಡೇಟು ಘಟನೆಗಳು ನಡೆದಿದೆ. ಕೆಲವೆಡೆ ಬಾಂಬ್ ದಾಳಿ ಕೂಡ ನಡೆಸಲಾಗಿದೆ.
ಕೋಲ್ಕತಾ(ಜು.08) ಪಶ್ಚಿಮ ಬಂಗಾಳದಲ್ಲಿ ರಕ್ತಪಾತವಾಗದೇ, ಶಾಂತಿಯುತವಾಗಿ ಚುನಾವಣೆ ನಡೆದ ದಿನಗಳೇ ಕಾಣುತ್ತಿಲ್ಲ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅತೀರೇಖಕ್ಕೆ ತಲುಪುವ ಹಿಂಸಾಚಾರ ಇದೀಗ ಒಂದೇ 14 ಮಂದಿಯನ್ನು ಬಲಿಪಡೆದಿದೆ. ಪಶ್ಚಿಮ ಬಂಗಾಳದಲ್ಲಿ ಇಂದು ಪಂಚಾಯತ್ ಚುನಾವಣೆ ನಡೆದಿದೆ. ಇಂದು ಒಂದೇ ದಿನ 14 ಮಂದಿ ಹತ್ಯೆಯಾಗಿದೆ. ಕೆಲ ಬೂತ್‌ಗಲ್ಲಿ ಮತಪೆಟ್ಟಿಗೆಯನ್ನು ಹೊತ್ತೊಯ್ದಿದ್ದಾರೆ. ಹಲವು ಬೂತ್‌ಗಳಲ್ಲಿ ಹಿಂಸಾಚಾರ ಹೆಚ್ಚಾಗಿದ್ದರೆ, ಕೆಲವೆಡೆ ಬಾಂಬ್ ದಾಳಿ, ಗುಂಡಿನ ದಾಳಿಯೂ ನಡೆದಿದೆ.
ಹಿಂಸಾಚಾರದಲ್ಲಿ ಟಿಎಂಸಿ, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ದುರಂತ ಅಂತ್ಯಕಂಡಿದ್ದಾರೆ. ಖತ್ರಾ ಬ್ಲಾಕ್‌ನಲ್ಲಿ ಬಿಜೆಪಿ ನಾಯಕ ಶಂತನು ಸಿಂಗ್ ಹಾಗೂ ಬೆಂಬಲಿಗರಿಗೆ ಮಚ್ಚು ತೋರಿಸಿ ಬೆದರಿಸಲಾಗಿದೆ. ದಾಳಿ ಯತ್ನವೂ ನಡೆದಿದೆ. ಇನ್ನು ಮುಶಿರಾಬಾದ್‌ನಲ್ಲಿ ಮತಗಟ್ಟೆ ಬಳಿ ಭಾರಿ ಹಿಂಸಾಚಾರ ನಡೆದಿದೆ. ದುಷ್ಕರ್ಮಿಗಳು ಬಾಂಬ್ ದಾಳಿಯನ್ನು ಮಾಡಿದ್ದಾರೆ. ಮತಗಟ್ಟೆ ದೋಚುವ ಪ್ರಯತ್ನವೂ ನಡೆದಿದೆ. ಇದೀಗ ಬಿಎಸ್‌ಎಪ್ ಯೋಧರು ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗಲಭೆಕೋರರನ್ನು ಚದುರಿಸು ಪ್ರಯತ್ನ ಮಾಡಿದೆ.
ಬಿಜೆಪಿ ಬಾವುಟದ ಮೇಲೆ ಕಾಂಡೋಮ್ ನೇತು ಹಾಕಿದ ಕಿಡಿಗೇಡಿಗಳು, ಬಂಗಾಳದಲ್ಲಿ ನೀಚ ಕೃತ್ಯ!
ಗಲಭೆ, ಹಿಂಸಾಚಾರ, ಸಾವು ನೋವಿಗೆ ಬಿಜೆಪಿ ಆಡಳಿತರೂಢ ಟಿಎಂಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಟಿಎಂಸಿ ಗೂಂಡಾಗಳು ಚುನಾವಣೆ ಗೆಲ್ಲಲು ಬಂದೂಕು, ಬಾಂಬ್ ಪ್ರಯೋಗಿಸುತ್ತಿದ್ದಾರೆ. ಇದರಿಂದ ಪಶ್ಚಿಮ ಬಂಗಾಳದ ಬಹುತೇಕ ಕಡೆ ಟಿಎಂಸಿ ಗೂಂಡಾಗಳಿಗೆ ಭಾರಿ ಹಿಂಸಾಚಾರವಾಗಿದೆ ಎಂದು ಬಿಜೆಪಿ ಹೇಳಿದೆ. ಹಲೆವೆಡಡೆ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಹಿಂಸಾಚಾರದಲ್ಲಿ ಸಾರ್ವಜನಿಕರು ಗಾಯಗೊಂಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಇಂದು ಒಂದೇ ಹಂತದಲ್ಲಿ ಜಿಲ್ಲೆ, ತಾಲೂಕು ಮತ್ತು ಗ್ರಾಮ ಪಂಚಾಯತ್ ಚುನಾವಣೆಗಳನ್ನು ನಡೆಸಲಾಗಿದೆ. ಸುಮಾರು 5.67 ಕೋಟಿ ಜನರು ಮತದಾನದ ಹಕ್ಕು ಪಡೆದಿದ್ದಾರೆ. ಇಂದು ಭಾರಿ ಹಿಂಸಾಚಾರ ನಡೆದಿದೆ. ಇನ್ನು ಪ್ರಚಾರದ ವೇಳೆಯೂ ವ್ಯಾಪಕ ಹಿಂಸಾಚರ ನಡೆದಿತ್ತು. ಚುನಾವಣೆ ಸಮಯದಲ್ಲಿ ಇಡೀ ರಾಜ್ಯದಲ್ಲಿ ಹಿಂಸಾಚಾರ ತಡೆಗಟ್ಟಲು ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಪ್ರಮುಖವಾಗಿ ಸೇನೆ ನಿಯೋಜನೆ ಮಾಡಿಲ್ಲ. ಇದು ಹಿಂಸಾಚಾರಕ್ಕೆ ಪ್ರಮುಖ ಕಾರಣವಾಗಿದೆ.
65 ಸಾವಿರ ಕೇಂದ್ರೀಯ ಪೊಲೀಸ್ ಪಡೆ ಮತ್ತು 70 ಸಾವಿರ ರಾಜ್ಯ ಪೊಲೀಸ್ ಪಡೆಯನ್ನು ನೇಮಕ ಮಾಡಲಾಗಿದೆ. ಆದರೆ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಪೊಲೀಸರ ಕೈಕಟ್ಟಲಾಗಿದೆ. ಇಷ್ಟೇ ಅಲ್ಲ ಸಿಎಂ ಸೂಚನೆಯಂತೆ ಗಲಭೆ ಹತ್ತಿಕ್ಕುವ ಬದಲು ಪೊಲೀಸರು ಮೌನವಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿ ಪರ ಬಿಎಸ್‌ಎಫ್ ಕೆಲಸ; ಮತ ಹಾಕದಂತೆ ಗಡಿ ಭಾಗದ ಜನರಿಗೆ ಬೆದರಿಕೆ: ಮಮತಾ ಬ್ಯಾನರ್ಜಿ ಆರೋಪ
ಪಂಚಾಯತ್ ಚುನಾವಣೆಗೆ ಒಂದು ದಿನ ಮೊದಲು ರಾಜ್ಯದ ಹಲವು ಭಾಗಗಳಲ್ಲಿ ಹಿಂಸಾಚಾರ ನಡೆದಿತ್ತು. ಈ ವೇಳೆ ಗುಂಡು ತಗುಲಿ ಕಾಂಗ್ರೆಸ್‌ನ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದರು.. ಮುರ್ಷಿದಾಬಾದ್‌ನಲ್ಲಿ ನಡೆದ ಗುಂಡಿನ ದಾಳಿಗೆ ಕಾಂಗ್ರೆಸ್ ಕಾರ್ಯಕರ್ತ ಅರವಿಂದ್ ಮಂಡಲ್ ಮೃತಪಟ್ಟಿದ್ದರು ಇದರಲ್ಲಿ ಟಿಎಂಸಿ ಕೈವಾಡ ಇದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕೂಚ್ ಬೆಹಾರ್‌ನಲ್ಲಿ ನಡೆದಿರುವ ಹಿಂಸಾಚಾರದಲ್ಲಿ ಬಿಜೆಪಿಯ ನಾಲ್ವರು ಕಾರ್ಯಕರ್ತರು ಗಾಯಗೊಂಡಿದ್ದರು. ಈವರೆಗೆ ಪಶ್ಚಿಮ ಬಂಗಾಳ ಸ್ಥಳೀಯ ಚುನಾವಣೆಯಲ್ಲಿ 32 ಮಂದಿ ಮೃತಪಟ್ಟಿದ್ದಾರೆ. ಹಲವು ಪ್ರದೇಶಗಳಲ್ಲಿ ಬಾಂಬ್ ಮತ್ತು ಗುಂಡಿನ ದಾಳಿಗಳು ನಡೆದಿವೆ.