Asianet Suvarna News Asianet Suvarna News

ಅಸೆಂಬ್ಲಿ, ಸಂಸತ್‌ ಜತೆ ಪಂಚಾಯ್ತಿ, ನಗರಕ್ಕೂ ಏಕಕಾಲಕ್ಕೆ ಎಲೆಕ್ಷನ್? ಅಧ್ಯಯನ ಸಮಿತಿಗೆ ಅಮಿತ್ ಶಾ ಸೇರಿ 8 ಮಂದಿ

ಕೇಂದ್ರ ಸರ್ಕಾರ ಲೋಕಸಭೆ, ವಿಧಾನಸಭೆಗಷ್ಟೇ ಅಲ್ಲದೆ, ಈ ಎರಡೂ ಚುನಾವಣೆಗಳ ಜತೆ ನಗರಾಡಳಿತ ಹಾಗೂ ಪಂಚಾಯ್ತಿ ಚುನಾವಣೆಗಳನ್ನೂ ಏಕಕಾಲಕ್ಕೆ ನಡೆಸುವ ಉದ್ದೇಶವನ್ನು ಶನಿವಾರ ಸಂಜೆ ಪ್ರಕಟಿಸಿದೆ.

panchayat city elections along with assembly parliament may be held at the same time ash
Author
First Published Sep 3, 2023, 8:10 AM IST

ನವದೆಹಲಿ (ಸೆಪ್ಟೆಂಬರ್ 3, 2023): ‘ಒಂದು ದೇಶ, ಒಂದು ಚುನಾವಣೆ’ ಉದ್ದೇಶ ಇರಿಸಿಕೊಂಡು ಶುಕ್ರವಾರವಷ್ಟೇ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ನೇತೃತ್ವದ ಸಮಿತಿ ರಚನೆ ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರ ಲೋಕಸಭೆ, ವಿಧಾನಸಭೆಗಷ್ಟೇ ಅಲ್ಲದೆ, ಈ ಎರಡೂ ಚುನಾವಣೆಗಳ ಜತೆ ನಗರಾಡಳಿತ ಹಾಗೂ ಪಂಚಾಯ್ತಿ ಚುನಾವಣೆಗಳನ್ನೂ ಏಕಕಾಲಕ್ಕೆ ನಡೆಸುವ ಉದ್ದೇಶವನ್ನು ಶನಿವಾರ ಸಂಜೆ ಪ್ರಕಟಿಸಿದೆ. ಇದಲ್ಲದೆ, ಈ ವಿಷಯ ಸೇರಿದಂತೆ ಏಕ ಚುನಾವಣೆಯ ಎಲ್ಲ ವಿಷಯಗಳ ಅಧ್ಯಯನಕ್ಕೆ ಕೋವಿಂದ್‌ ನೇತೃತ್ವದ ಸಮಿತಿಯ 8 ಸದಸ್ಯರ ಹೆಸರು ಪ್ರಕಟಿಸಿದ್ದು, ಇದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಇದ್ದಾರೆ.

ಸಮಿತಿಯು ಯಾವ ವಿಷಯಗಳ ಅಧ್ಯಯನ ನಡೆಸುತ್ತದೆ ಎಂಬ ಕಾರ್ಯಸೂಚಿ ಪ್ರಕಟಿಸಲಾಗಿದ್ದು, ಕೂಡಲೇ ಕಾರ್ಯಾರಂಭಿಸಿ ಅದಷ್ಟು ಬೇಗ ಶಿಫಾರಸು ಮಾಡಬೇಕು ಎಂದು ಸೂಚಿಸಲಾಗಿದೆ.

ಇದನ್ನು ಓದಿ: ಒಂದು ದೇಶ - ಒಂದೇ ಚುನಾವಣೆ ಅಧ್ಯಯನಕ್ಕೆ ರಾಮನಾಥ್‌ ಕೋವಿಂದ್ ನೇತೃತ್ವದ ಸಮಿತಿ: ವಿಶೇಷ ಅಧಿವೇಶನ ಕರೆದ ಬೆನ್ನಲ್ಲೇ ಘೋಷಣೆ

ಏನು ಅಧ್ಯಯನ?:
ಲೋಕಸಭೆ, ಎಲ್ಲ ರಾಜ್ಯಗಳ ವಿಧಾನಸಭೆ, ನಗರಾಡಳಿತಗಳು ಹಾಗೂ ಪಂಚಾಯ್ತಿಗಳಿಗೆ ಒಂದೇ ಸಲ ಚುನಾವಣೆ ನಡೆಸುವ ಬಗ್ಗೆ ಸಮಿತಿ ಅಧ್ಯಯನ ನಡೆಸಲಿದೆ. ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಏನು ಮಾಡಬೇಕು? ಅವಿಶ್ವಾಸ ನಿರ್ಣಯ ಅಂಗೀಕಾರ ಆದರೆ ಏನು ಮಾಡಬೇಕು? ಅಥವಾ ಪಕ್ಷಾಂತರ ಆದರೆ ಏನು ಮಾಡಬೇಕು ಎಂಬ ಬಗ್ಗೆ ಪರಾಮರ್ಶಿಸಲಿದೆ.
ಏಕಕಾಲಿಕ ಚುನಾವಣೆಯ ಸಂದರ್ಭದಲ್ಲಿ ಯಾವುದಾದರೂ ಆಕಸ್ಮಿಕ ಘಟನೆಗಳು ನಡೆದರೆ ಅಂಥ ಸನ್ನಿವೇಶಕ್ಕೆ ಸಂಭವನೀಯ ಪರಿಹಾರಗಳನ್ನು ವಿಶ್ಲೇಷಿಸುತ್ತದೆ ಮತ್ತು ಶಿಫಾರಸು ಮಾಡುತ್ತದೆ. ಸಮಿತಿಯು ಸಂವಿಧಾನಕ್ಕೆ ಆಗಬೇಕಾದ ನಿರ್ದಿಷ್ಟ ತಿದ್ದುಪಡಿಗಳು, ಪ್ರಜಾಪ್ರತಿನಿಧಿ ಕಾಯ್ದೆ ತಿದ್ದುಪಡಿ ಮತ್ತು ಇತರ ಕಾನೂನುಗಳ ತಿದ್ದುಪಡಿ ಬಗ್ಗೆ ಪರಿಶೀಲಿಸುತ್ತದೆ. ಅಲ್ಲದೆ, ಈ ಸಂವಿಧಾನದ ತಿದ್ದುಪಡಿಗಳಿಗೆ ರಾಜ್ಯಗಳ ಅನುಮೋದನೆಯ ಅಗತ್ಯವಿದೆಯೇ ಎಂಬುದನ್ನೂ ಪರಿಶೀಲಿಸುತ್ತದೆ ಮತ್ತು ಈ ಪ್ರಕ್ರಿಯೆಗೆ ಸಂಬಂಧಪಟ್ಟವರ ಸಲಹೆಗಳನ್ನು ಆಲಿಸುತ್ತದೆ.

ಸಮಿತಿಯಲ್ಲಿ 9 ಸದಸ್ಯರು:
ಕೋವಿಂದ್‌ ನೇತೃತ್ವದ ಸಮಿತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಲೋಕಸಭೆಯಲ್ಲಿನ ಅತಿಡೊಡ್ಡ ವಿಪಕ್ಷವಾದ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ, ಮಾಜಿ ಕೇಂದ್ರ ಸಚಿವ ಗುಲಾಂ ನಬಿ ಆಜಾದ್‌, 15ನೇ ಹಣಕಾಸು ಆಯೋಗದ ಮಾಜಿ ಮುಖ್ಯಸ್ಥ ಎನ್‌.ಕೆ.ಸಿಂಗ್‌, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ಸುಭಾಷ್‌ ಸಿ.ಕಶ್ಯಪ್‌, ಹಿರಿಯ ವಕೀಲ ಹರೀಶ್‌ ಸಾಳ್ವೆ ಮತ್ತು ನಿವೃತ್ತ ಮುಖ್ಯ ವಿಚಕ್ಷಣಾ ಆಯುಕ್ತ ಸಂಜಯ್‌ ಕೊಠಾರಿ ಸದಸ್ಯರಾಗಿರಲಿದ್ದಾರೆ.

ಇದನ್ನೂ ಓದಿ: ಸೆಪ್ಟೆಂಬರ್‌ 18 ರಿಂದ ವಿಶೇಷ ಅಧಿವೇಶನ: 'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆ ಮಂಡನೆಗೆ ಮೋದಿ ಸರ್ಕಾರ ಮಾಸ್ಟರ್‌ ಪ್ಲ್ಯಾನ್‌!

ಇನ್ನು ಕೇಂದ್ರ ಕಾನೂನು ಸಚಿವ ಅರ್ಜುನ್‌ ರಾಂ ಮೇಘ್ವಾಲ್‌ ವಿಶೇಷ ಆಹ್ವಾನಿತರಾದರೆ, ಕಾನೂನು ಸಚಿವಾಲಯದ ಕಾರ್ಯದರ್ಶಿ ನಿತೇನ್‌ ಚಂದ್ರ ಅವರು ಸಮಿತಿಯ ಕಾರ್ಯದರ್ಶಿ ಆಗಿದ್ದಾರೆ. 1967ಕ್ಕೂ ಮುನ್ನ ದೇಶದಲ್ಲಿ ವಿಧಾನಸಭೆಗಳು ಹಾಗೂ ಲೋಕಸಭೆಗೆ ಒಂದೇ ಸಲ ಚುನಾವಣೆ ನಡೆಸಲಾಗುತ್ತಿತ್ತು. ಈಗ ಮತ್ತೆ ಅದೇ ಪದ್ಧತಿಗೆ ಮರಳುವ ನಿಟ್ಟಿನಲ್ಲಿ ಕೋವಿಂದ್‌ ಸಮಿತಿಯು ತಜ್ಞರು ಹಾಗೂ ರಾಜಕೀಯ ಪಕ್ಷಗಳಿಂದ ಅಭಿಪ್ರಾಯ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿದೆ.

ಏನೇನು ಅಧ್ಯಯನ?
- ಲೋಕಸಭೆ, ವಿಧಾನಸಭೆ ಜತೆಗೆ ನಗರಾಡಳಿತ, ಪಂಚಾಯಿತಿಗಳಿಗೆ ಚುನಾವಣೆ
- ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಪ್ರಕಟವಾದರೆ ಏನು ಮಾಡಬೇಕು?
- ಅವಿಶ್ವಾಸ ನಿರ್ಣಯ ಅಂಗೀಕಾರವಾದರೆ, ಪಕ್ಷಾಂತರವಾದರೆ ಏನು ಮಾಡಬೇಕು?
- ಏಕಕಾಲಿಕ ಚುನಾವಣೆಯ ಸಂದರ್ಭ ಆಕಸ್ಮಿಕ ಘಟನೆ ನಡೆದರೆ ಏನು ಮಾಡಬೇಕು?
- ಸಂವಿಧಾನಕ್ಕೆ ಆಗಬೇಕಾದ ನಿರ್ದಿಷ್ಟ ತಿದ್ದುಪಡಿ, ಇತರೆ ಕಾನೂನುಗಳ ಪರಿಷ್ಕರಣೆ
- ಸಂವಿಧಾನ ತಿದ್ದುಪಡಿಗೆ ರಾಜ್ಯಗಳ ಅನುಮೋದನೆಯ ಅಗತ್ಯವಿದೆಯೇ?
 

ಒನ್ ಇಂಡಿಯಾ ಒನ್ ಎಲೆಕ್ಷನ್‌ಗೆ ಮುಂದಾಯ್ತಾ ಕೇಂದ್ರ ಸರ್ಕಾರ? ಅವಧಿಗೆ ಮುನ್ನವೇ ಲೋಕಸಭಾ ಚುನಾವಣೆ!

Follow Us:
Download App:
  • android
  • ios