Asianet Suvarna News Asianet Suvarna News

ಒಂದು ದೇಶ - ಒಂದೇ ಚುನಾವಣೆ ಅಧ್ಯಯನಕ್ಕೆ ರಾಮನಾಥ್‌ ಕೋವಿಂದ್ ನೇತೃತ್ವದ ಸಮಿತಿ: ವಿಶೇಷ ಅಧಿವೇಶನ ಕರೆದ ಬೆನ್ನಲ್ಲೇ ಘೋಷಣೆ

1967ಕ್ಕೂ ಮುನ್ನ ದೇಶದಲ್ಲಿ ವಿಧಾನಸಭೆಗಳು ಹಾಗೂ ಲೋಕಸಭೆಗೆ ಒಂದೇ ಸಲ ಚುನಾವಣೆ ನಡೆಸಲಾಗುತ್ತಿತ್ತು. ಈಗ ಮತ್ತೆ ಅದೇ ಪದ್ಧತಿಗೆ ಮರಳುವ ನಿಟ್ಟಿನಲ್ಲಿ ಕೋವಿಂದ್‌ ಸಮಿತಿಯು ತಜ್ಞರು ಹಾಗೂ ರಾಜಕೀಯ ಪಕ್ಷಗಳಿಂದ ಅಭಿಪ್ರಾಯ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿದೆ.

one nation one election central government forms panel headed by ex president ramnath kovind ash
Author
First Published Sep 2, 2023, 8:44 AM IST

ನವದೆಹಲಿ (ಸೆಪ್ಟೆಂಬರ್ 2, 2023): ಲೋಕಸಭೆ ಹಾಗೂ ಎಲ್ಲ ರಾಜ್ಯಗಳ ವಿಧಾನಸಭೆಗಳಿಗೆ ಒಂದೇ ಸಲ ಚುನಾವಣೆ ನಡೆಸುವ ‘ಒಂದು ದೇಶ ಒಂದು ಚುನಾವಣೆ’ ವ್ಯವಸ್ಥೆಯತ್ತ ಮಹತ್ವದ ಹೆಜ್ಜೆ ಇರಿಸಿರುವ ಕೇಂದ್ರ ಸರ್ಕಾರ, ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ನೇತೃತ್ವದಲ್ಲಿ ಈ ಕುರಿತು ಅಧ್ಯಯನ ನಡೆಸಲು ಸಮಿತಿ ರಚಿಸಿದೆ. ಇದರೊಂದಿಗೆ, ಈ ವರ್ಷಾಂತ್ಯಕ್ಕೆ ನಡೆಯಲಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಜೊತೆಗೇ ಅವಧಿಗೆ ಮುನ್ನ ಲೋಕಸಭೆಗೂ ಚುನಾವಣೆ ನಡೆಸುವ ಸಾಧ್ಯತೆಗಳು ಗೋಚರಿಸಿವೆ.

2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾದಾಗಿನಿಂದ ‘ಒಂದು ದೇಶ ಒಂದು ಚುನಾವಣೆ’ ವ್ಯವಸ್ಥೆಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಸ್ವತಃ ನರೇಂದ್ರ ಮೋದಿ ಈ ಚುನಾವಣಾ ಸುಧಾರಣೆಯ ಪರವಾಗಿ ಪದೇಪದೇ ಬ್ಯಾಟಿಂಗ್‌ ಮಾಡಿದ್ದಾರೆ. 1967ಕ್ಕೂ ಮುನ್ನ ದೇಶದಲ್ಲಿ ವಿಧಾನಸಭೆಗಳು ಹಾಗೂ ಲೋಕಸಭೆಗೆ ಒಂದೇ ಸಲ ಚುನಾವಣೆ ನಡೆಸಲಾಗುತ್ತಿತ್ತು. ಈಗ ಮತ್ತೆ ಅದೇ ಪದ್ಧತಿಗೆ ಮರಳುವ ನಿಟ್ಟಿನಲ್ಲಿ ಕೋವಿಂದ್‌ ಸಮಿತಿಯು ತಜ್ಞರು ಹಾಗೂ ರಾಜಕೀಯ ಪಕ್ಷಗಳಿಂದ ಅಭಿಪ್ರಾಯ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿದೆ.

ಇದನ್ನು ಓದಿ: ಸೆಪ್ಟೆಂಬರ್‌ 18 ರಿಂದ ವಿಶೇಷ ಅಧಿವೇಶನ: 'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆ ಮಂಡನೆಗೆ ಮೋದಿ ಸರ್ಕಾರ ಮಾಸ್ಟರ್‌ ಪ್ಲ್ಯಾನ್‌!

ಚುನಾವಣಾ ವೆಚ್ಚ ತಗ್ಗಿಸಲು ಈ ಕ್ರಮ:
ಸೆಪ್ಟೆಂಬರ್‌ 18ರಿಂದ 22ರವರೆಗೆ ಐದು ದಿನಗಳ ವಿಶೇಷ ಸಂಸತ್‌ ಅಧಿವೇಶನವನ್ನು ಕೇಂದ್ರ ಸರ್ಕಾರ ಕರೆದ ಬೆನ್ನಲ್ಲೇ ‘ಒಂದು ದೇಶ ಒಂದು ಚುನಾವಣೆ’ ಅಧ್ಯಯನಕ್ಕೆ ಸಮಿತಿ ರಚನೆಯಾಗಿರುವುದು ಕುತೂಹಲ ಮೂಡಿಸಿದೆ. ಬೇರೆ ಬೇರೆ ಅವಧಿಯಲ್ಲಿ ದೇಶದಲ್ಲಿ ನಿರಂತರವಾಗಿ ಚುನಾವಣೆಗಳನ್ನು ನಡೆಸುವುದರಿಂದ ದೇಶದ ಬೊಕ್ಕಸಕ್ಕೆ ಆಗುವ ಖರ್ಚನ್ನು ತಗ್ಗಿಸಲು ಹಾಗೂ ಚುನಾವಣಾ ನೀತಿ ಸಂಹಿತೆಯ ಕಾರಣಕ್ಕೆ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಳ್ಳುವುದನ್ನು ತಪ್ಪಿಸಲು ಒಂದೇ ಸಲ ವಿಧಾನಸಭೆ ಹಾಗೂ ಲೋಕಸಭೆಗೆ ಚುನಾವಣೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಕೇಂದ್ರ ಸರ್ಕಾರ ಹೊಂದಿದೆ.

ಸದ್ಯ 9 ರಾಜ್ಯ, ಲೋಕಸಭೆಗೆ ಚುನಾವಣೆ?:
ಕೋವಿಂದ್‌ ಸಮಿತಿಯ ಅಧ್ಯಯನದ ಬಳಿಕ ‘ಒಂದು ದೇಶ ಒಂದು ಚುನಾವಣೆ’ ವ್ಯವಸ್ಥೆಗೆ ಒಮ್ಮತ ಮೂಡಿದರೆ ಕೇಂದ್ರ ಸರ್ಕಾರ ಈ ವರ್ಷಾಂತ್ಯಕ್ಕೆ ನಡೆಯಲಿರುವ ಮಿಜೋರಾಂ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಹಾಗೂ ರಾಜಸ್ಥಾನದ ಚುನಾವಣೆಯ ಜೊತೆಗೇ ಲೋಕಸಭೆ ಚುನಾವಣೆಯನ್ನೂ ನಡೆಸುವ ಸಾಧ್ಯತೆಯಿದೆ. ಮುಂದಿನ ವರ್ಷದ ಮೇ-ಜೂನ್‌ ತಿಂಗಳಲ್ಲಿ ಲೋಕಸಭೆಗೆ ಚುನಾವಣೆ ನಡೆಯುವುದಿತ್ತು. ಅದರ ಜೊತೆಗೇ ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ, ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆಗಳು ನಡೆಯುವುದಿತ್ತು. ‘ಒಂದು ದೇಶ ಒಂದು ಚುನಾವಣೆ’ ವ್ಯವಸ್ಥೆ ಜಾರಿಯಾದರೆ ಈ ರಾಜ್ಯಗಳ ಚುನಾವಣೆಗಳೂ ಅವಧಿಗೆ ಮುನ್ನವೇ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಇದನ್ನೂ ಓದಿ: ಒನ್ ಇಂಡಿಯಾ ಒನ್ ಎಲೆಕ್ಷನ್‌ಗೆ ಮುಂದಾಯ್ತಾ ಕೇಂದ್ರ ಸರ್ಕಾರ? ಅವಧಿಗೆ ಮುನ್ನವೇ ಲೋಕಸಭಾ ಚುನಾವಣೆ!

ಏನಿದು ‘ಒಂದು ದೇಶ ಒಂದು ಚುನಾವಣೆ?’
ದೇಶದ ಎಲ್ಲಾ ರಾಜ್ಯಗಳ ವಿಧಾನಸಭೆಗಳು ಹಾಗೂ ಲೋಕಸಭೆಗೆ ಒಂದೇ ಸಲ ಚುನಾವಣೆ ನಡೆಸುವುದೇ ‘ಒಂದು ದೇಶ ಒಂದು ಚುನಾವಣೆ’ ವ್ಯವಸ್ಥೆ. ಬೇರೆ ಬೇರೆ ಸಮಯದಲ್ಲಿ ಚುನಾವಣೆ ನಡೆಸುವುದರಿಂದ ಪ್ರತಿ ರಾಜ್ಯದಲ್ಲೂ ಮತದಾನಕ್ಕೆ ವ್ಯವಸ್ಥೆ ಮಾಡಲು ದೊಡ್ಡ ಪ್ರಮಾಣದಲ್ಲಿ ಸರ್ಕಾರದ ಬೊಕ್ಕಸಕ್ಕೆ ಖರ್ಚು ತಗಲುತ್ತದೆ. ಪುನಃ ದೇಶಾದ್ಯಂತ ಲೋಕಸಭೆ ಚುನಾವಣೆಗೆ ಮತದಾನ ನಡೆಸುವುದಕ್ಕೂ ಪ್ರತ್ಯೇಕ ಖರ್ಚು ತಗಲುತ್ತದೆ. 

ಜೊತೆಗೆ ವರ್ಷವಿಡೀ ಒಂದಲ್ಲಾ ಒಂದು ಚುನಾವಣೆ ನಡೆಯುತ್ತಲೇ ಇರುವುದರಿಂದ ರಾಜಕೀಯ ಪಕ್ಷಗಳು ಸದಾಕಾಲ ಚುನಾವಣೆಯ ಮೂಡ್‌ನಲ್ಲಿರುತ್ತವೆ. ಹಾಗೂ ಚುನಾವಣಾ ನೀತಿ ಸಂಹಿತೆಯ ಕಾರಣಕ್ಕೆ ತಿಂಗಳುಗಟ್ಟಲೆ ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸಲಾಗುತ್ತದೆ. ಇವೆಲ್ಲಕ್ಕೂ ಪರಿಹಾರವಾಗಿ ಒಂದೇ ಸಲ ಲೋಕಸಭೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಸುವ ವ್ಯವಸ್ಥೆಯಾದ ‘ಒಂದು ದೇಶ ಒಂದು ಚುನಾವಣೆ’ಗೆ ಕೇಂದ್ರ ಸರ್ಕಾರ ಒಲವು ತೋರಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಯಾವುದೇ ಸಮಯದಲ್ಲಿ ಚುನಾವಣೆಗೆ ಸಿದ್ಧ: ಕೇಂದ್ರ ಸರ್ಕಾರ

Follow Us:
Download App:
  • android
  • ios