Businessman Pallonji Mistry passed away: ಖ್ಯಾತ ಉದ್ಯಮಿ ಪಲೋಂಜಿ ಮಿಸ್ತ್ರಿ ವಯೋಸಹಜ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಮುಂಬೈನ ಅವರ ನಿವಾಸದಲ್ಲಿ ಮೃತಪಟ್ಟಿದ್ದಾರೆ ಎಂದು ಶಾಪೂರ್ಜಿ ಪಲೋಂಜಿ ಗ್ರೂಪಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಪಲೋಂಜಿಯವರ ಕೆಲ ಇಂಟರೆಸ್ಟಿಂಗ್ ಮಾಹಿತಿ ಈ ಲೇಖನದಲ್ಲಿದೆ.
ಮುಂಬೈ: ಉದ್ಯಮಿ ಪಲೋಂಜಿ ಮಿಸ್ತ್ರಿ ಮುಂಬೈನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಶಾಪೂರ್ಜಿ ಪಲೋಂಜಿ ಗ್ರೂಪ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಿಸ್ತ್ರಿ ಅವರಿಗೆ 93 ವರ್ಷ ವಯಸ್ಸಾಗಿದ್ದು, ವಯೋಸಹಜ ಕಾರಣದಿಂದ ಮೃತಪಟ್ಟಿದ್ದಾರೆ. ಟಾಟಾ ಗ್ರೂಪಿನಲ್ಲಿ ಅತಿ ಹೆಚ್ಚು ಶೇರನ್ನು ಸಹ ಮಿಸ್ತ್ರಿ ಹೊಂದಿದ್ದರು. ಟಾಟಾ ಗ್ರೂಪಿನಲ್ಲಿ ಶೇಕಡ 18.4 ಷೇರು ಮಿಸ್ತ್ರಿ ಹೊಂದಿದ್ದರು. ಸೋಮವಾರ ರಾತ್ರಿ ಮಲಗಿದ್ದಾಗ ನಿದ್ದೆಯಲ್ಲೇ ಅವರು ನಿಧನರಾಗಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಪಲೋಂಜಿ ಮೂಲ ಭಾರತೀಯರಾದರೂ ಐರಿಷ್ ದೇಶದ ಪೌರತ್ವವನ್ನೂ ಪಡೆದಿದ್ದರು. ಜತೆಗೆ ಇಂದು ಭಾರತ ತಂಡದ ವಿರುದ್ಧ ಎರಡನೇ ಟಿ-20 ಪಂದ್ಯವಾಡುತ್ತಿರುವ ಐರ್ಲೆಂಡ್ ಕ್ರಿಕೆಟ್ ತಂಡದ ಜತೆಗೂ ಅವರ ನಂಟಿದೆ. ಕೋಟ್ಯಧಿಪತಿಯ ಇಂಟರೆಸ್ಟಿಂಗ್ ವಿಚಾರಗಳ ಬಗ್ಗೆ ಈ ಲೇಖನ ಬೆಳಕು ಚೆಲ್ಲಲಿದೆ.
ಗಣ್ಯರಿಂದ ಸಾಂತ್ವನ:
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿದಂತೆ ಹಲವು ಗಣ್ಯರು ಮಿಸ್ತ್ರಿ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಕ್ರಿಯಿಸಿ, "ಶ್ರೀ ಪಲೋಂಜಿ ಮಿಸ್ತ್ರಿ ಅವರ ಅಗಲಿಕೆ ಅತೀವ ದುಖಃ ತಂದಿದೆ. ವಾಣಿಜ್ಯ ಮತ್ತು ಉದ್ಯಮ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಅವರ ಕುಟುಂಬ, ಸ್ನೇಹಿತರಿಗೆ ಈ ದುಖಃ ಬರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ," ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು, "ಪಲೋಂಜಿ ಮಿಸ್ತ್ರಿ ಅವರ ಸಾವು ಒಂದು ಯುಗಾಂತ್ಯವಿದ್ದಂತೆ. ನನ್ನ ಜೀವನದ ಅತ್ಯಂತ ಖುಷಿಯ ವಿಚಾರವೆಂದರೆ ಅವರ ಬುದ್ಧಿಕ್ಷಮತೆಯನ್ನು, ಕಾರ್ಯಧಕ್ಷತೆಯನ್ನು ಮತ್ತು ಸಜ್ಜನ ನಡವಳಿಕೆಯನ್ನು ಹತ್ತಿರದಿಂದ ನೋಡಿದ್ದೇನೆ. ಇದು ನನ್ನ ಭಾಗ್ಯ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಈ ನೋವು ಬರಿಸುವ ಶಕ್ತಿ ಸಿಗಲಿ," ಎಂದು ಟ್ವೀಟ್ ಮಾಡಿದ್ದಾರೆ.
ಉದ್ಯಮಿ ಪಲೋಂಜಿ ಐರಿಷ್ ಪ್ರಜೆ:
ಖ್ಯಾತ ಉದ್ಯಮಿ ಪಲೋಂಜಿ ಮಿಸ್ತ್ರಿ ಮೂಲ ಭಾರತೀಯರಾದರೂ ಐರಿಷ್ ದೇಶದ ಪೌರತ್ವವನ್ನು 2003ರಲ್ಲಿ ಪಡೆದುಕೊಂಡರು. ಫಾರ್ಸಿ ಸಮುದಾಯದವರಾದ ಮಿಸ್ತ್ರಿ ಅವರ ಹೆಂಡತಿ ಐರ್ಲೆಂಡ್‌ನವರು. ಇದೇ ಕಾರಣಕ್ಕಾಗಿ ಅವರಿಗೆ ಅಲ್ಲಿನ ಪೌರತ್ವ ಕೂಡ ಸಿಕ್ಕಿತ್ತು. 2003ರ ನಂತರ ಅವರು ವಿದೇಶದಲ್ಲೇ ಹೆಚ್ಚಿನ ಕಾಲ ಕಳೆದರು. ಐರಿಷ್ ಪೌರತ್ವ ಪಡೆದ ನಂತರ ಐರ್ಲೆಂಡ್‌ಗೆ ಸಾಕಷ್ಟು ಕೊಡುಗೆಯನ್ನೂ ಅವರು ನೀಡಿದ್ದಾರೆ.
ಇದನ್ನೂ ಓದಿ: Ind vs IRE: ಸರಣಿ ಗೆಲುವಿನ ತವಕದಲ್ಲಿ ಟೀಂ ಇಂಡಿಯಾ
ಐರ್ಲೆಂಡ್ ಕ್ರಿಕೆಟ್ ಬಲಪಡಿಸಲು ಶ್ರಮ:
ಐರ್ಲೆಂಡ್ ದೇಶದ ಪೌರತ್ವ ಪಡೆದ ನಂತರ, 2010ರ ನಂತರ ಇಡೀ ತಂಡದ ಸ್ಪಾನ್ಸರ್‌ಶಿಪ್ ಹೊಣೆ ಮಿಸ್ತ್ರಿ ಪಡೆದುಕೊಂಡರು. ಅದರಿಂದ ಮಿಸ್ತ್ರಿ ಅವರ ಉದ್ಯಮಕ್ಕೆ ಲಾಭವೇನು ಇರಲಿಲ್ಲ. ಯಾಕೆಂದರೆ ದಿಗ್ಗಜ ಕ್ರಿಕೆಟ್ ತಂಡಗಳ ಮುಂದೆ ಆಗಿನ್ನೂ ಐರ್ಲೆಂಡ್ ಕಣ್ಣು ಬಿಡುತ್ತಿತ್ತು. ಆದರೆ ಮಿಸ್ತ್ರಿ ಅವರಿಗೆ ಕ್ರಿಕೆಟ್ ಮೇಲೆ ಅಪಾರ ಪ್ರೇಮ. ಇದೇ ಕಾರಣಕ್ಕೆ ಐರ್ಲೆಂಡ್ ತಂಡವನ್ನು ಬಲಿಷ್ಟಗೊಳಿಸಬೇಕು ಎಂದು ನಿರ್ಧರಿಸಿ ತಂಡಕ್ಕೆ ಆರ್ಥಿಕ ಸಹಾಯ ಮಾಡಿದರು. ಅದರ ಪರಿಣಾಮ ಇಂದು, ದೊಡ್ಡ ದೊಡ್ಡ ದೇಶಗಳ ತಂಡಗಳ ವಿರುದ್ಧ ಇಂದು ಐರ್ಲೆಂಡ್ ಸಮಬಲದಿಂದ ಪೈಪೋಟಿ ಮಾಡುತ್ತಿದೆ.
