* ಭಾರತ-ಐರ್ಲೆಂಡ್ ನಡುವಿನ ಎರಡನೇ ಟಿ20 ಪಂದ್ಯಕ್ಕೆ ಕ್ಷಣಗಣನೆ* ಈಗಾಗಲೇ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಭಾರತ* ಆವೇಶ್ ಖಾನ್ ಬದಲಿಗೆ ಆರ್ಶದೀಪ್‌ ಸಿಂಗ್ ಕಣಕ್ಕಿಳಿಯುವ ಸಾಧ್ಯತೆ

ಡಬ್ಲಿನ್(ಜೂ.28)‌: ಐರ್ಲೆಂಡ್‌ನ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನದ ಹೊರತಾಗಿಯೂ ಮೊದಲ ಟಿ20 ಪಂದ್ಯ ಗೆಲ್ಲಲು ಯಶಸ್ವಿಯಾಗಿರುವ ಟೀಂ ಇಂಡಿಯಾ ಮಂಗಳವಾರ 2ನೇ ಪಂದ್ಯಕ್ಕೆ ಸಜ್ಜಾಗಿದ್ದು, 2 ಪಂದ್ಯಗಳ ಸರಣಿಯನ್ನು ಕೈವಶಪಡಿಸಿಕೊಳ್ಳುವ ಕಾತರದಲ್ಲಿದೆ. ಈ ಪಂದ್ಯಕ್ಕೂ ಡಬ್ಲಿನ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಹಾರ್ದಿಕ್‌ ಪಾಂಡ್ಯ (Hardik Pandya) ತಾವು ನಾಯಕತ್ವ ವಹಿಸಿದ ಮೊದಲ ಪಂದ್ಯದಲ್ಲೇ ಗೆಲುವಿನ ಸಿಹಿ ಅನುಭವಿಸಿದ್ದು, ಮತ್ತೊಂದು ಗೆಲುವಿಗೆ ಎದುರು ನೋಡುತ್ತಿದ್ದಾರೆ. ಮಳೆ ಅಡ್ಡಿಪಡಿಸಿದ್ದರಿಂದ ಭಾನುವಾರದ ಮೊದಲ ಪಂದ್ಯ ತಲಾ 12 ಓವರ್‌ಗೆ ಸೀಮಿತಗೊಳಿಸಲಾಗಿತ್ತು. ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ್ದ ಐರ್ಲೆಂಡ್‌, ಭಾರತಕ್ಕೆ 109 ರನ್‌ ಗುರಿ ನೀಡಿತ್ತು. ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ ಟೀಂ ಇಂಡಿಯಾ (Team India) 9.2 ಓವರಲ್ಲೇ ಗುರಿ ತಲುಪಿತ್ತು. ಪಂದ್ಯದಲ್ಲಿ ಯುಜುವೇಂದ್ರ ಚಹಲ್‌, ಭುವನೇಶ್ವರ್‌ ಕುಮಾರ್‌ ಬಿಟ್ಟರೆ ಉಳಿದ ಬೌಲರ್‌ಗಳು ದುಬಾರಿಯಾಗಿದ್ದರು. ಆರಂಭಿಕನಾಗಿ ಭಡ್ತಿ ಪಡೆದು ಬಂದಿದ್ದ ದೀಪಕ್‌ ಹೂಡಾ (Deepak Hooda) ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದರು. ಇಶಾನ್‌ ಕಿಶನ್‌ (Ishan Kishan), ಹಾರ್ದಿಕ್‌ ಪಾಂಡ್ಯ ಕೂಡಾ ಅಬ್ಬರದ ಆಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

ಗಾಯಕ್ವಾಡ್‌ ಅನುಮಾನ:

ಇನ್ನು ಆರಂಭಿಕ ಪಂದ್ಯದಲ್ಲಿ ಸ್ನಾಯುಸೆಳೆತಕ್ಕೆ ಒಳಗಾಗಿದ್ದ ಋುತುರಾಜ್‌ ಗಾಯಕ್ವಾಡ್‌ ಈ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ. ಅವರ ಬದಲು ದೀಪಕ್‌ ಹೂಡಾ ಆರಂಭಿಕನಾಗಿ ಮತ್ತೆ ಕಣಕ್ಕಿಳಿಯುವುದು ಬಹುತೇಕ ಖಚಿತ. ಹೀಗಾಗಿ ಪಾದಾರ್ಪಣೆ ನಿರೀಕ್ಷೆಯಲ್ಲಿರುವ ರಾಹುಲ್‌ ತ್ರಿಪಾಠಿ ಮಧ್ಯಮ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ. ಸಂಜು ಸ್ಯಾಮ್ಸನ್‌ (Sanju Samson) ಕೂಡಾ ಸ್ಥಾನ ಗಿಟ್ಟಿಸುವ ನಿರೀಕ್ಷೆಯಲ್ಲಿದ್ದಾರೆ. ಇನ್ನು ಪಾದಾರ್ಪಣೆ ಪಂದ್ಯದಲ್ಲಿ ಒಂದು ಓವರ್‌ ಎಸೆದು ದುಬಾರಿಯಾಗಿದ್ದ ಉಮ್ರಾನ್‌ ಮಲಿಕ್‌ (Umran Malik) ಮತ್ತೊಂದು ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಆವೇಶ್‌ ಖಾನ್‌ (Avesh Khan) ಬದಲು ಅರ್ಶದೀಪ್‌ ಸಿಂಗ್‌ ತಂಡದಲ್ಲಿ ಸ್ಥಾನ ಪಡೆದರೂ ಅಚ್ಚರಿಯಿಲ್ಲ.

ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ವಿರೇಂದ್ರ ಸೆಹ್ವಾಗ್..!

ಮತ್ತೊಂದೆಡೆ ಮೊದಲ ಪಂದ್ಯದ ಸೋಲಿನ ಹೊರತಾಗಿಯೂ ಉತ್ತಮ ಪ್ರದರ್ಶನ ತೋರಿದ್ದ ಐರ್ಲೆಂಡ್‌ (Ireland Cricket Team) 2ನೇ ಪಂದ್ಯ ಗೆದ್ದು ಸರಣಿ ಸಮಬಲಗೊಳಿಸುವ ತವಕದಲ್ಲಿದೆ. ಕೇವಲ 33 ಎಸೆತಗಳಲ್ಲಿ 64 ರನ್‌ ಸಿಡಿಸಿ ದಿನ ಬೆಳಗಾಗುವುದರೊಳಗೆ ಎಲ್ಲರ ಗಮನ ಸೆಳೆದಿರುವ ಹ್ಯಾರಿ ಟೆಕ್ಟರ್‌ ಮತ್ತೊಂದು ಸ್ಫೋಟಕ ಆಟದ ನಿರೀಕ್ಷೆಯಲ್ಲಿದ್ದಾರೆ. ಹಿರಿಯ ಆಟಗಾರ ಸ್ಟಿರ್ಲಿಂಗ್‌, ನಾಯಕ ಬಾಲ್ಬಿರ್ನಿ ಲಯಕ್ಕೆ ಮರಳುವ ಕಾತರದಲ್ಲಿದ್ದಾರೆ.

ಮತ್ತೆ ಮಳೆ ಅಡ್ಡಿ ಸಾಧ್ಯತೆ

ಮಳೆಯಿಂದಾಗಿ ಮೊದಲ ಪಂದ್ಯ ಸುಮಾರು 3 ಗಂಟೆಗಳಷ್ಟು ತಡವಾಗಿ ಆರಂಭವಾಗಿ, ತಲಾ ಕೇವಲ 12 ಓವರ್‌ಗಳ ಆಟ ನಡೆದಿತ್ತು. ಡಬ್ಲಿನ್‌ನಲ್ಲಿ ಇನ್ನೆರಡು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಇದ್ದು, ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಮತ್ತೊಮ್ಮೆ ಟಾಸ್‌ ನಿರ್ಣಾಯಕ ಪಾತ್ರ ವಹಿಸಬಹುದು.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಇಶಾನ್ ಕಿಶನ್‌‌, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್‌, ಹಾರ್ದಿಕ್ ಪಾಂಡ್ಯ‌(ನಾಯಕ), ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್‌, ಅಕ್ಷರ್ ಪಟೇಲ್‌, ಭುವನೇಶ್ವರ್ ಕುಮಾರ್‌, ಆವೇಶ್ ಖಾನ್‌, ಉಮ್ರಾನ್ ಮಲಿಕ್‌, ಯುಜುವೇಂದ್ರ ಚಹಲ್‌

ಐರ್ಲೆಂಡ್‌: ಸ್ಟಿರ್ಲಿಂಗ್‌, ಬಾಲ್ಬಿರ್ನೀ(ನಾಯಕ), ಡೆಲಾನಿ, ಟೆಕ್ಟರ್‌, ಟಕ್ಕರ್‌, ಡೊಕ್ರೆಲ್‌, ಅಡೈರ್‌, ಮೆಕ್‌ಬ್ರೈನ್‌, ಯಂಗ್‌, ಜೋಶುವಾ, ಓಲ್ಫೆರ್ಚ್‌

ಪಂದ್ಯ ಆರಂಭ: ರಾತ್ರಿ 9 ಗಂಟೆಗೆ(ಭಾರತೀಯ ಕಾಲಮಾನ)