ಅಮೆರಿಕಾ, ಪಶ್ಚಿಮದ ದೇಶಗಳಿಗಾಗಿ... ಭಯೋತ್ಪಾದನೆಗೆ ಬೆಂಬಲದ ಬಗ್ಗೆ ಪಾಕ್ ರಕ್ಷಣಾ ಸಚಿವ ಹೇಳಿದ್ದೇನು?

Synopsis
ಕಾಶ್ಮೀರದಲ್ಲಿ ಉಗ್ರ ಚಟುಚಟಿಕೆ ನಡೆಸುವವರಿಗೆ ಸದಾ ಬೆನ್ನುಲುಬಾಗಿ ನಿಂತಿರುವ ಪಾಕಿಸ್ತಾನ ಇಷ್ಟು ದಿನಗಳ ಕಾಲವೂ ರಂಗೋಲಿ ಕೆಳಗೆ ತೂರುವ ಕೆಲಸ ಮಾಡುತ್ತಿತ್ತು. ಆದರೆ ಈಗ ಪಾಕಿಸ್ತಾನದ ರಕ್ಷಣಾ ಸಚಿವರೇ ಭಯೋತ್ಪಾದನೆಗೆ ಹಣಕಾಸು ನೆರವು ನೀಡುತ್ತಿರುವ ವಿಚಾರದ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದಾರೆ. ಅವರು ಏನು ಹೇಳಿದ್ದಾರೆ ನೋಡಿ..
ನವದೆಹಲಿ: ಪಹಲ್ಗಾಮ್ನಲ್ಲಿ 26 ಜನರನ್ನು ಬಲಿ ಪಡೆದ ಭೀಕರ ಭಯೋತ್ಪಾದಕ ದಾಳಿ ಪಾಕಿಸ್ತಾನದ ಬಣ್ಣವನ್ನು ಜಾಗತಿಕ ಮಟ್ಟದಲ್ಲಿ ಬಯಲು ಮಾಡಿದೆ. ಕಾಶ್ಮೀರದಲ್ಲಿ ಉಗ್ರ ಚಟುಚಟಿಕೆ ನಡೆಸುವವರಿಗೆ ಸದಾ ಬೆನ್ನುಲುಬಾಗಿ ನಿಂತಿರುವ ಪಾಕಿಸ್ತಾನ ಭಾರತ ಈ ಬಗ್ಗೆ ಆರೋಪ ಮಾಡಿದಾಗಲೆಲ್ಲಾ ನಾವಲ್ಲ ನಾವಿಲ್ಲ ಎಂದು ಹೇಳುವ ಮೂಲಕ ಇಷ್ಟು ದಿನಗಳ ಕಾಲವೂ ರಂಗೋಲಿ ಕೆಳಗೆ ತೂರುವ ಕೆಲಸ ಮಾಡುತ್ತಿತ್ತು. ಆದರೆ ಈಗ ಪಾಕಿಸ್ತಾನದ ರಕ್ಷಣಾ ಸಚಿವರೇ ಭಯೋತ್ಪಾದನೆಗೆ ಹಣಕಾಸು ನೆರವು ನೀಡುತ್ತಿರುವ ವಿಚಾರದ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದಾರೆ.
ಬ್ರಿಟಿಷ್ ಮಾಧ್ಯಮ ಸ್ಕೈ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನದ ಗೃಹ ಸಚಿವ ಖ್ವಾಜಾ ಎಂ ಅಸೀಫ್ ಅವರು ಯುಕೆ, ಅಮೆರಿಕಾ ಹಾಗೂ ಪಶ್ಚಿಮದ ರಾಷ್ಟ್ರಗಳಿಗಾಗಿ ಡರ್ಟಿ ಕೆಲಸ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಸರ್, ಪಾಕಿಸ್ತಾನವು ಈ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ, ತರಬೇತಿ ನೀಡುವ ಮತ್ತು ಹಣಕಾಸು ಸಹಾಯ ಒದಗಿಸುವ ದೀರ್ಘ ಇತಿಹಾಸವನ್ನು ಹೊಂದಿದೆ ಎಂಬುದನ್ನು ನೀವು ಒಪ್ಪಿಕೊಳ್ಳುತ್ತೀರಾ? ಎಂದು ಪಾಕಿಸ್ತಾನದ ಸಚಿವರನ್ನು ಸಂದರ್ಶಕರು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅಲ್ಲಿನ ಸಚಿವರು ನಾವು ಕಳೆದ ಮೂರು ದಶಕಗಳಿಂದ ಪಶ್ಚಿಮ ಮತ್ತು ಯುನೈಟೆಡ್ ಕಿಂಗ್ಡಮ್ ಸೇರಿದಂತೆ ಅಮೆರಿಕಕ್ಕಾಗಿ ಈ ಕೊಳಕು ಕೆಲಸವನ್ನು ಮಾಡುತ್ತಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಕೂಡಲೇ ಅದು ತಪ್ಪು ಆ ಕೆಲಸದಿಂದ ಪಾಕಿಸ್ತಾನವೂ ಸಾಕಷ್ಟು ಅನುಭವಿಸಬೇಕಾಯ್ತು ಎಂದು ಅವರು ಹೇಳಿದ್ದಾರೆ. ಆದರೆ ಅವರು ಕಾಶ್ಮೀರದಲ್ಲಿ ಪಾಕಿಸ್ತಾನ ನಡೆಸುತ್ತಿರುವ ಕಿತಾಪತಿಯ ಬಗ್ಗೆ ಬಾಯ್ಬಿಟ್ಟಿಲ್ಲ.
ಇದನ್ನೂ ಓದಿ:ಪಹಲ್ಗಾಮ್ನಲ್ಲಿ ಭದ್ರತಾ ಪಡೆ ಏಕೆ ಇರಲಿಲ್ಲ: ವಿರೋಧ ಪಕ್ಷದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ
ಸೋವಿಯತ್-ಅಫಘಾನ್ ಯುದ್ಧ ಮತ್ತು ಅಮೆರಿಕಾ ಮೇಲೆ ನಡೆದ 9/11 ರ ದಾಳಿಯ ನಂತರ ತಾಲಿಬಾನ್ ವಿರುದ್ಧ ಅಮೆರಿಕ ನೇತೃತ್ವದಲ್ಲಿ ನಡೆದ ಯುದ್ಧದ ಸಮಯದಲ್ಲಿ ಇಸ್ಲಾಮಾಬಾದ್ ಪಶ್ಚಿಮದೊಂದಿಗೆ ಸೇರದೇ ಇದ್ದಿದ್ದರೆ ಪಾಕಿಸ್ತಾನದ ಮೇಲೆ ಈ ದೋಷಾರೋಪಗಳು ಎದುರಾಗುತ್ತಲೇ ಇರಲಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಅವರು ಅಮೆರಿಕಾದ ಹಾಗೂ ಇತರ ಪಾಶ್ಚಿಮಾತ್ಯ ದೇಶಗಳ ಮೇಲೆ ಗೂಬೆ ಕೂರಿಸುವ ಯತ್ನ ಮಾಡಿದ್ದಾರೆ.
ಸೋವಿಯತ್-ಅಫ್ಘಾನ್ ಯುದ್ಧದ ಸಮಯದಲ್ಲಿ ಪಾಕಿಸ್ತಾನವು ಸೋವಿಯತ್ ವಿರುದ್ಧ ಹೋರಾಡಲು ಅಫ್ಘಾನ್ನಲ್ಲಿ ಸಶಸ್ತ್ರ ಹೊಂದಿದ್ದ ಉಗ್ರರಿಗೆ ತರಬೇತಿ ಮತ್ತು ಆಶ್ರಯ ನೀಡುವ ಮೂಲಕ ಅಮೆರಿಕವನ್ನು ಬೆಂಬಲಿಸಿತು. ಅಫ್ಘಾನಿಸ್ತಾನದೊಂದಿಗಿನ ಪಾಕಿಸ್ತಾನದ ಸೂಕ್ಷ್ಮ ಗಡಿಯಿಂದಾಗಿ ಅಮೆರಿಕ ಮತ್ತು ಸೋವಿಯತ್ ನಡುವಿನ ಈ ಮುಸುಕಿನ ಗುದ್ದಾಟವೂ ಪಾಕಿಸ್ತಾನಕ್ಕೆ ಪ್ರಮುಖ ಪಾತ್ರವನ್ನು ನೀಡಿತು. ನಂತರ ಸೋವಿಯತ್ ಅಫ್ಘಾನಿಸ್ತಾನದಿಂದ ಹಿಂದೆ ಸರಿಯುವುದರೊಂದಿಗೆ ಯುದ್ಧವು ಕೊನೆಗೊಂಡಿತು. 2001 ರಲ್ಲಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ ಅಮೆರಿಕಾದ ಎರಡು ಅವಳಿ ಕಟ್ಟಡಗಳಾದ ವಿಶ್ವ ವಾಣಿಜ್ಯ ಕೇಂದ್ರದ (World Trade Centre) ಮೇಲೆ ದಾಳಿ ನಡೆಯುವವರೆಗೂ ಸುಮಾರು ಒಂದು ದಶಕದ ಕಾಲ ಸೋವಿಯತ್ ತಾಲಿಬಾನ್ನ ಚುಕ್ಕಾಣಿ ಹಿಡಿದಿತ್ತು.
ಅಮೆರಿಕಾದ ಮೇಲೆ ದಾಳಿ ನಡೆಸಿದ ಒಸಾಮಾ ಬಿನ್ ಲಾಡೆನ್ ಸ್ಥಾಪಿಸಿದ್ದ ಅಲ್-ಖೈದಾಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಶ್ರಯ ನೀಡಿತು. ಈ ಅಲ್ ಖೈದಾ ಸಂಘಟನೆಯೂ 2001 ರ ಸೆಪ್ಟೆಂಬರ್ 11ರಂದು ಅಮೆರಿಕಾದ ವರ್ಲ್ಡ್ ಟ್ರೆಡ್ ಸೆಂಟರ್ನ ಮೇಲೆ ನಡೆಸಿದ ಭೀಕರ ದಾಳಿಯಲ್ಲಿ ಸುಮಾರು 2,996 ಜನ ಪ್ರಾಣ ಬಿಟ್ಟಿದ್ದರು. ಹೀಗಾಗಿ ಅಮೆರಿಕಾವೂ ಅಫ್ಘಾನಿಸ್ತಾನದ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿತು. ಆಗ ಪಾಕಿಸ್ತಾನವೂ ಮತ್ತೆ ಅಲ್ಲಿ ತಾಲಿಬಾನ್ ಅನ್ನು ಬೇರುಸಹಿತ ಕಿತ್ತುಹಾಕುವಲ್ಲಿ ಯುಎಸ್ ನೇತೃತ್ವದ ಪಡೆಗಳನ್ನು ಬೆಂಬಲಿಸುವ ಕಾರ್ಯಾಚರಣೆಗಳ ಕೇಂದ್ರ ಬಿಂದುವಾಗಿತ್ತು. ಅಂದರೆ ಸೋವಿಯತ್ ವಿರುದ್ಧದ ಯುದ್ಧದ ವೇಳೆ ಅಫ್ಘಾನಿಸ್ತಾನದಲ್ಲಿದ್ದ ಉಗ್ರರಿಗೆ ನೆರವು ನೀಡಿ ಸೋವಿಯತ್ ವಿರುದ್ಧ ಎತ್ತಿ ಕಟ್ಟಿದ ಇದೇ ಪಾಕಿಸ್ತಾನ, ಅಮೆರಿಕಾ ಅಫ್ಘಾನಿಸ್ತಾನದ ಮೇಲೆ ಮುಗಿ ಬೀಳುತ್ತಿದ್ದಂತೆ ಅಮೆರಿಕಾದ ಪರ ನಿಂತಿತು..
ಇದನ್ನೂ ಓದಿ:ದೇಶದಲ್ಲಿರುವ ಎಲ್ಲಾ ಪಾಕಿಸ್ತಾನಿಯರ ಗುರುತಿಸಿ ವಾಪಸ್ ಕಳಿಸಿ: ರಾಜ್ಯಗಳಿಗೆ ಅಮಿತ್ ಷಾ ಸೂಚನೆ
ಈಗ ಭಾರತದ ನೆಲವಾದ ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕ ಕೃತ್ಯ ನಡೆಸಿದವರಿಗೂ ಪಾಕಿಸ್ತಾನ ಹಣಕಾಸು ಸಹಾಯ ಮಾಡಿ ಅವರ ಬೆನ್ನಿಗೆ ನಿಂತಿದೆ. ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾದ ಹಫೀಜ್ ಸಯೀದ್ ನೇತೃತ್ವದ ಲಷ್ಕರ್-ಎ-ತೈಬಾದ ಒಂದು ಭಾಗವಾದ 'ದಿ ರೆಸಿಸ್ಟೆನ್ಸ್ ಫ್ರಂಟ್' (ಟಿಆರ್ಎಫ್) 26 ಪ್ರವಾಸಿಗರ ಬಲಿ ಪಡೆದ ಪಹಲ್ಗಾಮ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ನಿಷೇಧಿತ ಲಷ್ಕರ್-ಎ-ತೈಬಾ (ಎಲ್ಇಟಿ) ಭಯೋತ್ಪಾದಕ ಸಂಘಟನೆಯೂ ಕಾಶ್ಮೀರದಲ್ಲಿ ಬಹಳ ಸಮಯದಿಂದ ಸಕ್ರಿಯವಾಗಿದೆ. ಸೋನಾಮಾರ್ಗ್, ಬೂಟಾ ಪತ್ರಿ ಮತ್ತು ಗಂಡರ್ಬಾಲ್ ಸೇರಿದಂತೆ ಇಲ್ಲಿನ ಪ್ರದೇಶದಾದ್ಯಂತ ಹಲವಾರು ಉನ್ನತ ಮಟ್ಟದ ದಾಳಿಗಳ ಹಿಂದೆ ಇವರ ಕೈವಾಡವಿದೆ ಎಂದು ಭದ್ರತಾ ಸಂಸ್ಥೆಗಳು ಹೇಳುತ್ತವೆ.
2004ರ ಅಕ್ಟೋಬರ್ನಲ್ಲಿ ಬೂಟಾ ಪತ್ರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದರು. ಹಾಗೆಯೇ ಸೋನಾಮಾರ್ಗ್ನಲ್ಲಿ ನಡೆದ ದಾಳಿಯಲ್ಲಿ ಅಲ್ಲಿ ಸುರಂಗ ನಿರ್ಮಾಣ ಕೆಲಸದಲ್ಲಿ ತೊಡಗಿದದ ಆರು ಕಾರ್ಮಿಕರು ಹಾಗೂ ಒಬ್ಬರು ವೈದ್ಯರು ಸಾವನ್ನಪ್ಪಿದ್ದರು. ಪಹಲ್ಗಾಮ್ ಹತ್ಯಾಕಾಂಡದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಹಾಶಿಮ್ ಮೂಸಾನೇ ಈ ದಾಳಿಯಲ್ಲೂ ಶಂಕಿತನೆಂದು ನಂಬಲಾಗಿದೆ.