ಉತ್ತರ ಪ್ರದೇಶ ಮೂಲದ ಭಾರತೀಯ ಪ್ರಜೆ ಸಚಿನ್‌ ಜೊತೆ ಇರುವ ಸಲುವಾಗಿ ಭಾರತಕ್ಕೆ ಕಾಲಿಟ್ಟಿದ್ದ ಪಾಕಿಸ್ತಾನಿ ಮೂಲದ ಮಹಿಳೆ ಸೀಮಾ ಹೈದರ್‌ ಮತ್ತೆ ತಾಯಿಯಾಗಲಿದ್ದಾರೆ. ಈಗಾಗಲೇ ಹಿಂದಿನ ಮದುವೆಯಿಂದ ಸೀಮಾ ಹೈದರ್‌ ನಾಲ್ವರು ಮಕ್ಕಳನ್ನು ಹೊಂದಿದ್ದಾರೆ. 

ನವದೆಹಲಿ (ಜ.1): ಸೀಮಾ ಹೈದರ್‌ ಎನ್ನುವ ಹೆಸರು ನೀವು ಕೇಳಿರಬಹುದು. ಪಾಕಿಸ್ತಾನಿ ಮೂಲದ ಮಹಿಳೆ ತನ್ನ ನಾಲ್ವರು ಮಕ್ಕಳೊಂದಿಗೆ ನೇಪಾಳ ಮೂಲಕ ಭಾರತದ ಗಡಿಯನ್ನು ದಾಟಿ, ಭಾರತದಲ್ಲಿರು ತನ್ನ ಪ್ರೇಮಿ ಸಚಿನ್‌ ಜೊತೆ ಅಕ್ರಮವಾಗಿ ವಾಸ ಮಾಡಿದ್ದಳು. ಈ ವಿಚಾರ ಗೊತ್ತಾದ ಬಳಿಕ ಭಾರತದ ಭದ್ರತಾ ಅಧಿಕಾರಿಗಳಿಗೆ ಸಾಕಷ್ಟು ತನಿಖೆಗೆ ಒಳಗಾಗಿದ್ದ ಈ ದಂಪತಿ ಈಗ ಗುಡ್‌ ನ್ಯೂಸ್‌ ನೀಡಿದ್ದಾರೆ. ಪ್ರಸ್ತುತ ಗ್ರೇಟರ್‌ ನೋಯ್ಡಾದಲ್ಲಿ ವಾಸವಿರುವ ಸೀಮಾ ಹೈದರ್‌ ಈಗ ಸಚಿನ್‌ ಅವರ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಸಚಿನ್‌ ಹಾಗೂ ಸೀಮಾ ಹೈದರ್‌ ಮೊದಲ ಬಾರಿಗೆ ದಂಪತಿಯಾಗಲಿದ್ದಾರೆ. ಆದರೆ, ಸೀಮಾ ಹೈದರ್‌ಗೆ ಇದು ಐದನೇ ಮಗುವಾಗಿದೆ. 2024ರಲ್ಲಿ ಸೀಮಾ ಹೈದರ್ ತಾಯಿಯಾಗಲಿದ್ದಾರೆ ಎಂದು ವರದಿಯಾಗಿದೆ. 2019ರಲ್ಲಿ ಆನ್‌ಲೈನ್‌ ಶೂಟಿಂಗ್‌ ಗೇಮ್‌ ಪಬ್‌ಜೀ ಮೂಲಕ ಸಚಿನ್‌ ಮೀನಾ ಹಾಗೂ ಸೀಮಾ ಹೈದರ್‌ ಮೊದಲ ಬಾರಿಗೆ ಭೇಟಿಯಾಗಿದ್ದರು. ಆ ಬಳಿಕ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು. 2023ರ ಮಾರ್ಚ್‌ನಲ್ಲಿ ಸೀಮಾ ಹಾಗೂ ಸಚಿನ್‌ ನೇಪಾಳದಲ್ಲಿ ಪರಸ್ಪರ ಭೇಟಿಯಾಗಿದ್ದರು. ಅದಾದ ಬಳಿಕ ಪಾಕಿಸ್ತಾನದ ಪ್ರಜೆಯಾಗಿರುವ ಸೀಮಾ ಹೈದರ್‌ ಗಡಿ ದಾಟಿ ಭಾರತಕ್ಕೆ ಆಗಮಿಸಿದ್ದರು.

ನೇಪಾಳದಲ್ಲಿ ತಂಗಿದ್ದಾಗ, ದಂಪತಿಗಳು ಹೋಟೆಲ್ ಸ್ವಾಗತಕಾರರ ಮಕ್ಕಳೊಂದಿಗೆ ಇನ್ಸ್‌ಟಾಗ್ರಾಮ್‌ ರೀಲ್‌ಗಳ ಸರಣಿಯನ್ನು ಮಾಡಿದರು, ಅವರ ಸಂತೋಷದ ಕ್ಷಣಗಳನ್ನು ಒಟ್ಟಿಗೆ ಸೆರೆಹಿಡಿದಿದ್ದರು. ಕೊನೆಗೆ ಅವರಿಬ್ಬರೂ ಭಾರತದಲ್ಲಿ ಮದುವೆಯಾಗಿದ್ದರು. ಸೀಮಾ ಹೈದರ್ ಅವರ ಹಿಂದಿನ ಮದುವೆಯಿಂದ ನಾಲ್ಕು ಮಕ್ಕಳಿದ್ದಾರೆ. ಹಿರಿಯ ಮಗುವಿಗೆ ಎಂಟು ವರ್ಷ.

ಸೀಮಾ ಮತ್ತು ಸಚಿನ್ ಅವರನ್ನು ಉತ್ತರ ಪ್ರದೇಶ ಪೊಲೀಸರು ಜುಲೈ 2023 ರಲ್ಲಿ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದಕ್ಕಾಗಿ ಬಂಧಿಸಿದ್ದರು. ಸೀಮಾ ಹೈದರ್ ಪಾಕಿಸ್ತಾನಿ ಗೂಢಚಾರಿಕೆ ಇರಬಹುದೆಂಬ ಶಂಕೆ ವ್ಯಕ್ತವಾಗಿದ್ದರಿಂದ ಅವರನ್ನೂ ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಆದಾಗ್ಯೂ, ಪ್ರಯಾಣದ ನಿರ್ಬಂಧಗಳ ಷರತ್ತಿನ ಮೇಲೆ ಅವರನ್ನು ನಂತರ ಬಿಡುಗಡೆ ಮಾಡಲಾಯಿತು.